ಸೊರಬ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ಬಿಳಾಗಿ ಗ್ರಾಮದ ಪವಿತ್ರ ವನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಯೋಜನೆಯಡಿ 2018-19ನೇ ಸಾಲಿನಲ್ಲಿ 4.88 ಲಕ್ಷ ರೂ., ವೆಚ್ಚದಲ್ಲಿ ಸೊರಬ ವಲಯದ ಬಿಳಾಗಿ ಪವಿತ್ರ ವನದ ಒಳಭಾಗದಲ್ಲಿ ಕಾವಲುಗಾರರ ವಾಸ್ತವ್ಯಕ್ಕೆ ಕಾಯಂ ಕಟ್ಟಡ ನಿರ್ಮಾಣದ ಕಾಮಗಾರಿ ಕಳಪೆಯಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸ್ಥಳೀಯವಾಗಿ ದೊರೆಯುವ ನಿಷೇಧಿತ ಮರಳನ್ನು ಬಳಕೆ ಮಾಡಲಾಗುತ್ತಿದೆ.
ನಿಷೇಧಿತ ಮರಳು ಬಳಕೆ: ತಾಲೂಕಿನ ಗುಂಜನೂರು- ಅಂಕರವಳ್ಳಿ ಸೇರಿದಂತೆ ವರದಾ ನದಿ ಪಾತ್ರದಲ್ಲಿ ದೊರೆಯುವ ಮಣ್ಣು ಮಿಶ್ರಿತ ಮರಳನ್ನು ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇಲ್ಲಿ ದೊರೆಯುವ ಮರಳು ಕಟ್ಟಡ ನಿರ್ಮಾಣ ಬಳಕೆಗೆ ಸಲ್ಲದು ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಆದರೆ, ಅಗ್ಗದ ದರದಲ್ಲಿ ದೊರೆಯುವ ಇಂತಹ ಮರಳನ್ನೇ ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಿಸಿದರೆ ಕಟ್ಟಡ ಬಾಳಿಕೆ ಬರುವುದು ಅಸಾಧ್ಯ ಎನ್ನುತ್ತಾರೆ ಸ್ಥಳೀಯರು.
ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಅಳವಡಿಸಿದ್ದು, ಸರಿಯಾಗಿ ಕ್ಯೂರಿಂಗ್ ಆಗಿಲ್ಲ. ಕಟ್ಟಡ ನಿರ್ಮಾಣಕ್ಕೆ ಬಳಸಿದ ಕಬ್ಬಿಣವೂ ಸಹ ಯೋಗ್ಯವಾಗಿಲ್ಲ. ಗೋಡೆಗಳಲ್ಲಿನ ಸಿಮೆಂಟ್ ಪ್ಲಾಸ್ಟರ್ ಬರಿಗೈಯಿಂದಲೇ ಉದುರಿಸಬಹುದು. ಸಾರ್ವಜನಿಕರ ಹಣ ಪೋಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಗಮನ ಹರಿಸಿದೆ ಮೌನ ವಹಿಸಿರುವುದು ಅಕ್ಷಮ್ಯ ಎನ್ನುತ್ತಾರೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ಮಾಜಿ ಅಧ್ಯಕ್ಷ ವಾಸಪ್ಪ ಬಿಳಾಗಿ. ಒಟ್ಟಾರೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಪವಿತ್ರ ವನ (ಪಾರ್ಕ್)ನಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ. ಸಂಬಂಧಪಟ್ಟವರು ಕೂಡಲೇ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಬಿಳಾಗಿಯ ಪವಿತ್ರವನದಲ್ಲಿ ನಿರ್ಮಾಣವಾಗುತ್ತಿರುವ ಕಾವಲುಗಾರರ ಕಾಯಂ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಲಯ ಅರಣ್ಯಾಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ದೂರವಾಣಿ ಮೂಲಕವೂ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಮಾಹಿತಿ ನೀಡಲು ಹಿಂದೇಟು ಹಾಕುವುದರ ಹಿಂದೆ ಭ್ರಷ್ಟಾಚಾರ ತಾಂಡವವಾಡುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ.
•
ಜೆ.ಎಸ್. ಚಿದಾನಂದಗೌಡ,
ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ