ಶಿವಮೊಗ್ಗ: ಮಾಜಿ ಸಿಎಂ ಬಂಗಾರಪ್ಪ ಅವರಿಗೆ ಸೋಲಿಲ್ಲದ ಸರದಾರ ಪಟ್ಟ ತಂದುಕೊಟ್ಟ ಸೊರಬ ಕ್ಷೇತ್ರದಲ್ಲಿ ಈಗ ಅವರ ಪುತ್ರರ ನಡುವೆ ಮತ ಯುದ್ಧ ಶುರುವಾಗಿದ್ದು, ಸಹೋದರರು 5ನೇ ಬಾರಿ ಮುಖಾಮುಖಿ ಆಗುತ್ತಿದ್ದಾರೆ.
ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪ ಕುಟುಂಬ ಹೊರತುಪಡಿಸಿ ಬೇರೆಯವರು ಆಯ್ಕೆ ಆಗಿರುವುದು ಒಂದು ಬಾರಿ ಮಾತ್ರ. ಈ ಬಾರಿ ಕಾಂಗ್ರೆಸ್‌ನಿಂದ ಮಧು ಬಂಗಾರಪ್ಪ, ಬಿಜೆಪಿಯಿಂದ ಕುಮಾರ್ ಬಂಗಾರಪ್ಪ, ಜೆಡಿಎಸ್‌ನಿಂದ ಬಾಸೂರು ಚಂದ್ರೇಗೌಡ ಸ್ಪರ್ಧೆಯಲ್ಲಿ ಇದ್ದಾರೆ.
ಸೊರಬದಲ್ಲಿ 1967ರಿಂದ 1994ರವರೆಗೆ ಬಂಗಾರಪ್ಪ ಒಬ್ಬರೇ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಅವರು ಯಾವುದೇ ಪಕ್ಷದಲ್ಲಿ ನಿಂತರೂ ಗೆಲುವು ಶತಃಸಿದ್ಧ ಎನ್ನಲಾಗುತ್ತಿತ್ತು. 1999ರಲ್ಲಿ ಮಗ ಕುಮಾರ್‌ನನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತಾರೆ. ನಂತರ ಕೌಟುಂಬಿಕ ಸಮಸ್ಯೆಗಳಿಂದಾಗಿ 2004ರ ಚುನಾವಣೆಯಲ್ಲಿ ಮೊದಲ ಮಗ ಕುಮಾರ್ ವಿರುದ್ಧ ಕಿರಿಯ ಮಗ ಮಧು ಅವರನ್ನು ಚುನಾವಣೆಗೆ ನಿಲ್ಲಿಸುತ್ತಾರೆ. ಅಲ್ಲಿಂದ ಆರಂಭವಾದ ಸಹೋದರರ ಕದನ ಈಗಲೂ ಮುಂದುವರೆದಿದೆ. ಐದು ಚುನಾವಣೆಯಲ್ಲಿ ಕುಮಾರ್ 3 ಬಾರಿ, ಮಧು ಒಂದು ಬಾರಿ ಜಯ ಗಳಿಸಿದ್ದಾರೆ. ಒಂದು ಬಾರಿ ಹರತಾಳು ಹಾಲಪ್ಪ ಗೆಲುವು ಸಾಧಿಸಿ ಸಹೋದರರಿಗೆ ಶಾಕ್ ನೀಡಿದ್ದರು. ಕಾಂಗ್ರೆಸ್ ನಲ್ಲಿದ್ದ ಕುಮಾರ್ 2018ರಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮಧು ಬಂಗಾರಪ್ಪ 2004ರಲ್ಲಿ ಬಿಜೆಪಿ, 2008ರಲ್ಲಿ ಎಸ್‌ಪಿ, 2013, 2018ರಲ್ಲಿ ಜೆಡಿಎಸ್, 2023ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ.
ಹಾಲಿ ಶಾಸಕ ಕುಮಾರ್ ವಿರುದ್ಧ ಅಲೆ ಜೋರಿದೆ. ಬಿಜೆಪಿ ಕಾರ್ಯಕರ್ತರ ಬಂಡಾಯದಿಂದ ಆರಂಭ ವಾಗಿರುವ ನಮೋ ವೇದಿಕೆ ಟಿಕೆಟ್ ಕೊಡದಂತೆ ದೊಡ್ಡ ಹೋರಾಟ ಮಾಡಿತ್ತು. ಟಿಕೆಟ್ ಸಿಕ್ಕ ಮೇಲೂ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಬಂಡಾಯ ಶಮನ ಪ್ರಯತ್ನಗಳು ವಿಫಲವಾಗಿವೆ. ಇದೆಲ್ಲದರ ಹೊರತಾಗಿ ಯೂ ಹಲವು ರಾಜ್ಯ, ರಾಷ್ಟ್ರೀಯ ನಾಯಕರು ಕುಮಾರ್ ಪರ ಪ್ರಚಾರ ಮಾಡಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಇತ್ತ ಮಧು ಬಂಗಾರಪ್ಪ ನಿರಂತರ ಸೋಲಿನ ಅನುಕಂಪ, ಸಹೋದರ ಕುಮಾರ್ ವಿರುದ್ಧದ ಆಡಳಿತ ವಿರೋಧಿ ಅಲೆ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ. ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿ ಉತ್ತಮ ಮತಗಳಿಕೆ ಮಾಡಿರುವ ಬಾಸೂರು ಚಂದ್ರೇಗೌಡರಿಗೆ ಈ ಬಾರಿ ಸಹೋದರರ ವಿರುದ್ಧದ ಮತಗಳು ಹರಿದುಬರುವ ನಿರೀಕ್ಷೆ ಇದೆ. ಎಚ್.ಡಿ. ಕುಮಾರಸ್ವಾಮಿ ಚಂದ್ರೇಗೌಡರ ಪರ ಮತಯಾಚನೆ ಮಾಡಿದ್ದಾರೆ.
ಕ್ಷೇತ್ರದಲ್ಲಿ ಈಡಿಗರು ಬಹುಸಂಖ್ಯಾತರು. ಎರಡನೇ ಸ್ಥಾನದಲ್ಲಿ ಲಿಂಗಾಯತರಿದ್ದಾರೆ. ಈಡಿಗ ಮತಗಳು ಸಹೋದರರ ಸವಾಲಿನಲ್ಲಿ ಯಾರಿಗೆ ಹಂಚಿಕೆ ಆಗುತ್ತವೆ. ಲಿಂಗಾಯತ ಮತಗಳನ್ನು ಜೆಡಿಎಸ್ ಅಭ್ಯರ್ಥಿ ಗಳಿಸಿದರೆ ಯಾರಿಗೆ ಲಾಭವಾಗುತ್ತದೆ. ಮುಸ್ಲಿಮರು ಯಾರಿಗೆ ಮತ ಹಾಕುತ್ತಾರೆ ಎಂಬುದರ ಮೇಲೆ ಚುನಾವಣೆ ಫಲಿತಾಂಶ ನಿರ್ಧಾರವಾಗಲಿದೆ.
– ಶರತ್ ಭದ್ರಾವತಿ