ಶಿರಸಿ: ಅರಣ್ಯ ಹಾಗೂ ಕಂದಾಯ ಇಲಾಖೆ ಸಹಭಾಗಿತ್ವದೊಂದಿಗೆ ಸೊಪ್ಪಿನ ಬೆಟ್ಟ ಅಭಿವೃದ್ಧಿ ಕಾರ್ಯದ ಮೂಲಕ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಆಶಿಸಿದರು.
ಇಲ್ಲಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ನಡೆದ ಬೆಟ್ಟ ಅಭಿವೃದ್ಧಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ಬೆಟ್ಟ ಬಳಕೆಯೊಂದಿಗೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕಿದೆ. ಆ ನಿಟ್ಟಿನಲ್ಲಿ ಈಗಿರುವ ಬೆಟ್ಟ ಪ್ರದೇಶಗಳ ಸದ್ಬಳಕೆ ಮಾಡಿಕೊಳ್ಳುವ ಅನಿವಾರ್ಯತೆಯಿದೆ. ಬೆಟ್ಟ ಬಳಕೆಗಳ ಕುರಿತಂತೆ ರೈತರಲ್ಲಿರುವ ಮಾಹಿತಿ ಕೊರತೆ, ಕಾನೂನು ಅಂಶಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಇಲಾಖೆಗಳಿಂದ ಆಗಬೇಕಿದೆ. ರಾಜ್ಯದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ಉತ್ತರ ಕನ್ನಡದಲ್ಲಿ ಬೆಟ್ಟ ಬಳಕೆ ಕಾನೂನು ನಿಯಮದಂತೆ ನಡೆಯುತ್ತಿದೆ. ಬೆಟ್ಟದಲ್ಲಿ ನೀರಿಂಗಿಸುವ ಕಾಮಗಾರಿ, ವನೀಕರಣ ಯೋಜನೆ ಅನುಷ್ಠಾನದ ಜೊತೆಗೆ ಸಂಶೋಧನೆ ಮತ್ತು ಪ್ರಯೋಗಗಳಲ್ಲಿ ರೈತರು ತೆರೆದುಕೊಳ್ಳಬೇಕಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ, ಸೊಪ್ಪಿನ ಬೆಟ್ಟಗಳ ಬಳಕೆಯ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆ ವಿನಃ ಬೆಟ್ಟಗಳನ್ನೇ ಮೂಲ ಆದಾಯವಾಗಿಸಿಕೊಳ್ಳುವಂತಿಲ್ಲ. ಬೆಟ್ಟಗಳ ಬಳಕೆ ಕುರಿತು ಸ್ಪಷ್ಟ ನಿರ್ದೇನ ನೀಡಲಾಗಿದ್ದು, ಅದರಂತೆಯೇ ರೈತರು ಆರ್ಥಿಕಾಭಿವೃದ್ಧಿ ಹೊಂದಬೇಕು ಎಂದರು.
ಪ್ರಮುಖರಾದ ಎಸಿಎಫ್ ರಘು, ಆರ್ ಎಫ್‌ಒ ಅಮಿತಕುಮಾರ ಚವ್ಹಾಣ್, ಪರಿಸರ ಹೋರಾಟಗಾರರಾದ ಶಿವಾನಂದ ಕಳವೆ, ನಾರಾಯಣ ಹೆಗಡೆ ಗಡಿಕೈ, ಕದಂಬ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡು, ಸಚ್ಚಿದಾನಂದ ಹೆಗಡೆ, ನರೇಂದ್ರ ಹೊಂಡಗಾಶಿ ಇನ್ನಿತರರು ಇದ್ದರು.
ಸಾಮೂಹಿಕವಾಗಿರುವ ಬೆಟ್ಟಗಳನ್ನು ಗುರುತಿಸಿ ಅಧಿಕೃತವಾಗಿ ವಿಂಗಡಿಸುವ ಕಾರ್ಯ ಆಗಬೇಕು. ಬೆಟ್ಟಗಳ ಸ್ಥಿತಿಗತಿಗಳ ಸರ್ವೆ ಕಾರ್ಯ ಆಗಬೇಕು. ಸೊಪ್ಪಿನ ಬೆಟ್ಟಗಳ ಬಳಕೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂಬ ಅಭಿಪ್ರಾಯಗಳು ಕೇಳಿಬಂದವು.