Advertisement

ವಿಧಿ ವಿಜ್ಞಾನ ಲ್ಯಾಬ್‌ಗೆ ಅತ್ಯಾಧುನಿಕ ಉಪಕರಣ

11:13 AM Jun 16, 2020 | mahesh |

ದಾವಣಗೆರೆ: ಜನಸ್ನೇಹಿ ಪೊಲೀಸ್‌ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ. ಪೀಪಲ್‌ ಫ್ರೆಂಡ್ಲಿ ಕ್ರಿಮಿನಲ್‌
ಎನಿಮಿಯಂತೆ ಇಲಾಖೆ ಕೆಲಸ ಮಾಡಬೇಕು. ಕಾನೂನಿಗೆ ಗೌರವ ತೋರುವವರಿಗೆ ಗೌರವ, ಠಾಣೆಗೆ ಬಂದಂತಹವರನ್ನು ಮಾನವೀಯತೆಯಿಂದ ಕಾಣುವುದು,
ತಕ್ಷಣಕ್ಕೆ ಸ್ಪಂದಿಸುವಂತೆ ಕೆಲಸ ಮಾಡುವ ಮೂಲಕ ಕಾನೂನು, ಇಲಾಖೆಯ ಬಗ್ಗೆ ಇನ್ನೂ ಹೆಚ್ಚಿನ ವಿಶ್ವಾಸಾರ್ಹತೆ ಬರುವಂತೆ ಕೆಲಸ ಮಾಡಲು ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ರಾಜ್ಯದ ಎಲ್ಲಾ ವಲಯ ಕೇಂದ್ರ ಸ್ಥಾನಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ಅತ್ಯಾಧುನಿಕ ಉಪಕರಣ ಒದಗಿಸುವ ಮೂಲಕ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆಲವಾರು ಪ್ರಮುಖ ಪ್ರಕರಣಗಳಿಗೆ ಅತೀ ಅಗತ್ಯವಾದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಬೆಂಗಳೂರಿಗೆ ಕಳುಹಿಸಿ 2-3 ವರ್ಷ ಕಾಯುವುದು ತಪ್ಪಲಿದೆ. ಸೈಬರ್‌ ಅಪರಾಧ ಪ್ರಕರಣಗಳ ಹೆಚ್ಚುತ್ತಿರುವುದನ್ನು ತಡೆಗಟ್ಟಲಿಕ್ಕೆ ಅಗತ್ಯವಾದ ಅತ್ಯಾಧುನಿಕ ಕಂಪ್ಯೂಟರ್‌ ಇತರೆ ಸೌಲಭ್ಯ ಒದಗಿಸುವ ಮೂಲಕ ಸಿಇಎನ್‌ ಠಾಣೆಗಳನ್ನು ಬಲಪಡಿಸಲಾಗುವುದು ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಕಳೆದ 2018-19 ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಈಗ ಅಪರಾಧ ಪ್ರಕರಣಗಳ ಕಡಿಮೆ ಆಗಿವೆ. ರೌಡಿಸಂ ನಿಗ್ರಹ ನಿಟ್ಟಿನಲ್ಲಿ 2018 ರಲ್ಲಿ 1,193, 2019ರಲ್ಲಿ 1,600 ಜನರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ. ಕೋಮು ಗಲಭೆಗೆ ಸಂಬಂಧಿಸಿದಂತೆ 2018ರಲ್ಲಿ 88, 2019ರಲ್ಲಿ 103 ಜನರ ಬಂಧಿಸಲಾಗಿದೆ. ಒಟ್ಟಾರೆ ಅಪರಾಧಿ ಕೃತ್ಯಗಳಿಗೆ ಸಂಬಂಧಿಸಿದಂತೆ 2018ರಲ್ಲಿ 6229 ಮತ್ತು 2019ರಲ್ಲಿ 4358, ಕಳೆದ 3 ತಿಂಗಳಲ್ಲಿ
1,722 ಜನರನ್ನು ಬಂಧಿಸಲಾಗಿದೆ. ಲಾಕ್‌ಡೌನ್‌ ತೆರವಿನ ನಂತರ ಅಪರಾಧ ಪ್ರಕರಣ ಹೆಚ್ಚಾಗಬಹುದು. ಅವುಗಳ ನಿಯಂತ್ರಣಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮ ತೆಗೆದುಕೊಳ್ಳಲು ವಿಶೇಷ ಅಭಿಯಾನ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಅಪರಾಧಕ್ಕೆ ನಾಂದಿ ಹಾಡಬಹುದಾದ ಮಟ್ಕಾ, ಕ್ಲಬ್‌, ಮಾದಕ ವಸ್ತುಗಳ ದಂಧೆ ನಿಯಂತ್ರಣಕ್ಕೂ ಸೂಚನೆ ನೀಡಲಾಗಿದೆ. ಡ್ರಗ್ಸ್‌ ಸಂಬಂಧಿತ ಅಪರಾಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರೀಕೃತ ಕಮಾಂಡರ್‌ ಆ್ಯಂಡ್‌ ಕಂಟ್ರೋಲ್‌ ರೂಂ ಪ್ರಾರಂಭಿಸಲಾಗಿದೆ. ಕಮಾಂಡೋ ವಾಹನ ನೀಡಲಾಗಿದೆ. ಕಂಟ್ರೋಲ್‌ ರೂಂನಲ್ಲಿ 28 ಜಂಕ್ಷನ್‌ ಪಾಯಿಂಟ್‌ಗಳಲ್ಲಿ ಸಂಚಾರ ನಿಯಂತ್ರಣ, ಆಟೋಮ್ಯಾಟಿಕ್‌ ಸಿಗ್ನಲ್‌ ವ್ಯವಸ್ಥೆ ಇದೆ. 360 ಡಿಗ್ರಿ ಸುತ್ತುವ, ನಂಬರ್‌ ಪ್ಲೇಟ್‌ ಗುರುತಿಸುವ, ಸವಾರರ ಮುಖ ಸ್ವಷ್ಟವಾಗಿ ತೋರಿಸುವಂತಹ ಕ್ಯಾಮೆರಾಗಳ ಅಳವಡಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಕೋವಿಡ್ ವೈರಸ್‌ ನಿಯಂತ್ರಣ ಕೆಲಸದಲ್ಲಿ ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಿಲ್ಲಾಡಳಿತದೊಟ್ಟಿಗೆ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಅನುದಾನ ಲಭ್ಯತೆಯ ಆಧಾರದಲ್ಲಿ ಹಂತ ಹಂತವಾಗಿ ಪೊಲೀಸ್‌ ಮಹಾನಿರೀಕ್ಷಕರು, ಜಿಲ್ಲಾ ರಕ್ಷಣಾಧಿಕಾರಿ, ಇತರೆ ಅಧಿಕಾರಿಗಳು, ಸಿಬ್ಬಂದಿಯ ವಸತಿ ಸಮುಚ್ಛಯವನ್ನು ನಿರ್ಮಾಣ ಮಾಡಲಾಗುವುದು. ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ಪೊಲೀಸ್‌ ಪಬ್ಲಿಕ್‌ ಶಾಲೆ ಪ್ರಾರಂಭಿಸಲಾಗುವುದು.
ಬಸವರಾಜ ಬೊಮ್ಮಾಯಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next