Advertisement

ಪರಿಪೂರ್ಣ ಪ್ರಸ್ತುತಿ ಸೂರ್ಯಸಂಕ್ರಾಂತಿ

06:38 PM Jan 31, 2020 | mahesh |

ಕೌಟುಂಬಿಕ ಮೌಲ್ಯಗಳನ್ನು ಪ್ರತಿಪಾದಿಸುವ, ಸ್ನೇಹದ ಅರ್ಥವನ್ನು ಉನ್ನತೀಕರಿಸುವ, ಕ್ರೋಧದ ಅನರ್ಥವನ್ನು ಅನಾವರಣಗೊಳಿಸುವ, ಪ್ರೇಮದ ಪಾವಿತ್ರ್ಯವನ್ನು ನಿರೂಪಿಸುವ, ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಬಹುಮೌಲ್ಯವನ್ನು ಒಳಗೊಂಡ ಪ್ರಸಂಗ

Advertisement

ಪೆರ್ಡೂರು ಮೇಳದ ದ್ವಿತೀಯ ಪ್ರಸಂಗವಾಗಿ ಪ್ರದರ್ಶನಗೊಳ್ಳುತ್ತಿರುವ ಸೂರ್ಯ ಸಂಕ್ರಾಂತಿ ವಿಭಿನ್ನ ಕಥಾವಸ್ತು, ಉತ್ತಮ ಪದ್ಯಗಳಿಂದ ಕಲಾಭಿಮಾನಿಗಳ ಹೃನ್ಮನಗಳಲ್ಲಿ ಉಳಿದು ಬಿಡುತ್ತದೆ. ಪ್ರಸಂಗದ ಕಥಾಕರ್ತರು ಮಣೂರು ವಾಸುದೇವ ಮಯ್ಯರು. ಪದ್ಯ ಸಾಹಿತ್ಯ ಒದಗಿಸಿದವರು ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು. ಕೌಟುಂಬಿಕ ಮೌಲ್ಯಗಳನ್ನು ಪ್ರತಿಪಾದಿಸುವ, ಸ್ನೇಹದ ಅರ್ಥವನ್ನು ಉನ್ನತೀಕರಿಸುವ, ಕ್ರೋಧದ ಅನರ್ಥವನ್ನು ಅನಾವರಣಗೊಳಿಸುವ, ಪ್ರೇಮದ ಪಾವಿತ್ರ್ಯವನ್ನು ನಿರೂಪಿಸುವ, ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಬಹುಮೌಲ್ಯವನ್ನು ಒಳಗೊಂಡ ಪ್ರಸಂಗ ಪ್ರಥಮ ಪ್ರಯೋಗದಲ್ಲಿಯೇ ಮುಕ್ತ ಪ್ರಶಂಸೆ ಪಡೆದುಕೊಂಡಿದೆ. ವಿಭಿನ್ನ ಹಾಗೂ ವಿಶಿಷ್ಟ ಎನಿಸುವ ಕತೆಗೆ ಯಕ್ಷಗಾನೀಯತೆ ಉತ್ಕೃಷ್ಟ ಸಾಲಿನ ಪದ್ಯಗಳ ಜೋಡಣೆಯಿಂದ ಪರಿಪೂರ್ಣವಾಗಿದೆ. ಪ್ರೇಕ್ಷಕರ ಹೃತೂ³ರ್ವಕ ಪ್ರತಿಕ್ರಿಯೆ ಸಂಪಾದಿಸಿದ ಕೃತಿಯ ಒಟ್ಟಂದದಲ್ಲಿ ಎಲ್ಲಾ ಕಲಾವಿದರ ಪೂರ್ಣಪ್ರಮಾಣದ ಪ್ರತಿಭಾವ್ಯಕ್ತಿಗೆ ಅವಕಾಶವಿದೆ.

ಪುಷ್ಪಪಾವನ ನಗರದ ಚಕ್ರವರ್ತಿ ಸೇತುಪತಿ ಮಹಾರಾಜನು ರಾಜವಂಶದ ಪರಂಪರೆಯಂತೆ 25 ವರ್ಷಕ್ಕೊಮ್ಮೆ ಬರುವ ಸೂರ್ಯಸಂಕ್ರಾಂತಿ ಉತ್ಸವದಲ್ಲಿ ರಾಜವಂಶದ ಹೆಣ್ಣುಮಗಳಿಂದಲೇ ಚಂದ್ರದ್ರೋಣ ಪರ್ವತದಲ್ಲಿ ದೀಪ ಬೆಳಗಿಸುವ ಕ್ರಮ. ಇದು ಅರಸನ ರಾಜವಂಶದ ಏಳ್ಗೆಯ ಗುಟ್ಟು ಆಗಿರುತ್ತದೆ. ಈ ನಿಮಿತ್ತ ಒಂದು ಸೂರ್ಯಸಂಕ್ರಾಂತಿ ಕಳೆದು ಮತ್ತೆ ಒದಗುವ ಮತ್ತೂಂದು ಸೂರ್ಯಸಂಕ್ರಾಂತಿಯ ಒಳಗಿನ ಕತೆ ಸೂರ್ಯಸಂಕ್ರಾಂತಿ. ಸನ್ಯಾಸಧರ್ಮ ಇಚ್ಛಿಸುವ ರಾಜಕುಮಾರ ಪವಿತ್ರ ಪ್ರೇಮಬಂಧನ ಗ್ರಹಸ್ಥ ಧರ್ಮ ಅನುಸರಿಸಿ ಮತ್ತೆ ಯತಿಧರ್ಮ ಪಾಲಿಸುವುದು, ಭ್ರಾತೃತ್ವಕ್ಕಿಂತಲೂ ಸ್ನೇಹ ಶ್ರೇಷ್ಠವೆಂದು ಗೆಳೆಯರು ನಿರೂಪಿಸುವುದು, ತಂದೆಯ ದುರ್ವರ್ತನೆಗೆ ಛಲವಾದಿ ಹೆಣ್ಣು ಮಗಳು ಪ್ರತ್ಯೇಕ ಸಾಮ್ರಾಜ್ಯ ಕಟ್ಟಿ ಆಳುವುದು, ಛಿದ್ರವಾದ ಸಂಸಾರ, ಕುಟುಂಬ ಸೂತ್ರವನ್ನು ರಾಜವಂಶದ ಅರಸನ ಮೊಮ್ಮಗ ಒಂದುಗೂಡಿಸುವುದು ಸೂರ್ಯಸಂಕ್ರಾಂತಿಯ ಕಥಾಂಶ.

ಛಂದೋಬದ್ಧ ಸಾಹಿತ್ಯದಲ್ಲಿರುವ ಪದ್ಯಗಳು, ನವೀನ ಸಾಹಿತ್ಯದ ಝಲಕ್‌ನಲ್ಲಿ ಮೋಡಿ ಮಾಡುತ್ತವೆ. ಪಾತ್ರಗಳ ಹೆಸರುಗಳು ಕೂಡಾ ಅಪರೂಪದ್ದಾಗಿದೆ. ಜಲವಳ್ಳಿ ವಿದ್ಯಾಧರ ರಾವ್‌ ಅವರ ಸುಪ್ರತೀತ, ಥಂಡಿಮನೆ ಶ್ರೀಪಾದ ಭಟ್ಟರ ಸೇತುಪತಿ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರ ಕಥಾನಾಯಕಿ ಪಯಸ್ವಿನಿ, ರಮೇಶ ಭಂಡಾರಿಯವರ ಬಡ್ಡಿ ವ್ಯಾಪಾರಿ ಚರಣಮೂರ್ತಿ ಹಾಗೂ ಪಾರುಪತ್ಯದ ತ್ರಿಪಾಲ ಪ್ರಸಂಗದ ಆದಿಯಿಂದ ಅಂತ್ಯದ ತನಕ ವಿಶೇಷವಾಗಿ ಗುರುತಿಸಿಕೊಳ್ಳುತ್ತದೆ. ರವೀಂದ್ರ ದೇವಾಡಿಗ-ಪುರಂದರ ಮುಡ್ಕಣಿಯವರ ಹಾಸ್ಯ ಜೋಡಿ ಪ್ರಶಂಸನೀಯ, ವಿಜಯ ಗಾಣಿಗ ಬೀಜಮಕ್ಕಿ, ನಾಗರಾಜ ಕುಂಕಿಪಾಲ, ನಾಗರಾಜ ದೇವಲ್ಕುಂದ ಇವರ ಸ್ತ್ರೀಪಾತ್ರಗಳು, ಮಾಗೋಡು ಅಣ್ಣ, ವಿನಾಯಕ ಗುಂಡಬಾಳ, ಸನ್ಮಯ್‌ ಭಟ್‌ ಮೊದಲಾದವರ ಪಾತ್ರಗಳ ಕಲಾಭಿವ್ಯಕ್ತಿ ಯಶಸ್ಸಿಗೆ ಪೂರಕ. ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸುಮಧುರ ಕಂಠದಲ್ಲಿ ಮೊಗೆಬೆಟ್ಟು ಸಾಹಿತ್ಯ ಅರಳಿಕೊಳ್ಳುವ ಪರಿ ರಸರೋಚಕ. ಆರಂಭದಲ್ಲಿ ಭಾಗವತ ಬಾಳ್ಕಲ್‌ ಪ್ರಸನ್ನ ಭಟ್‌ ಅವರು ಉತ್ತಮ ವೇಗ ನೀಡುತ್ತಾರೆ. ಚಂಡೆಯಲ್ಲಿ ಸುಜನ್‌ ಹಾಲಾಡಿ, ರವಿ ಆಚಾರ್ಯ ಕಾಡೂರು, ಮದ್ದಳೆಯಲ್ಲಿ ಸುನಿಲ್‌ ಭಂಡಾರಿ, ಶಶಿಕುಮಾರ್‌ ಆಚಾರ್ಯ ಸಾಥ್‌ ನೀಡುತ್ತಾರೆ.

ಜನ್ಸಾಲೆ ಕಂಠಸಿರಿಯಲ್ಲಿ ಮೂಡಿಬರುವ ಚಿತ್ತಜಾಂಗ ಚೆಲುವ ಚಿನ್ಮಯಿ| ಮೋಡಿಗಾರ| ಚಿತ್ತ ಚೋರ ಮನಸು ತನ್ಮಯಿ|, ಪ್ರೇಮವೀಣೆ ಚಾರುತಂತಿ ಮಿಡಿದ ಮೋಹನೆ|, ಒಲಿದ ಹೃದಯ ವೀಣೆಗಿವನು ನಿತ್ಯ ವೈಣಿಕ|, ವಿಧಿಯು ಕೊಟ್ಟ ಬದುಕು ಬೆಳಕು ಹಣಿಯಲೆನಿದೆ|ಪದವಿಯೇಕೆ ಪ್ರೇಮಕೊಲಿದ ಹೃದಯಸಾಲದೇ| ಕಣ್ಣೋಟವು ಕೋಲ್ಮಿಂಚಿನ ಬಾಣವು| ಜಲಜನಯನೆ ಮದನ ಮಡದಿ ನಿನ್ನೋಳಿರುವಳೆ| ಪರಮ ಪುರುಷ ವಿಶ್ವಮೋಹನ ಪದ್ಯಗಳು ಈಗಾಗಲೇ ಜನಮೆಚ್ಚುಗೆ ಪಡೆದರೆ, ಬಾಳ್ಕಲ್‌ ಕಂಠಸಿರಿಯಲ್ಲಿ ತೇಲಿ ಬರುವ ಲೇಲೇ ಪಾಡಿ ಕೋಲಾಟ ಹಾಡು ಮೋಡಿ ಮಾಡುತ್ತದೆ. ಘಮಘಮಿಸುವ ಸುಮ ಮಲ್ಲಿಗೆ|, ಸ್ಮರ ಸುಮರೂಪಕೇಳು|, ಕುದುರೆಯೇರಿ ಬಂದೆಯೇನೆ|, ವೇಣು-ರಂಗನ ಭಾವಯಾನ|, ಪದುಮನಯನೆ ಚಂದಿರಾನನೆ|, ಕೇಳಿರಣ್ಣ ಜಗವು ಒಂದು ಕಳ್ಳರ ಸಂತೆ| ಪದ್ಯಗಳು ಮನಗೆದ್ದಿವೆ.

Advertisement

ನಾಗರಾಜ್‌ ಬಳಗೇರಿ

Advertisement

Udayavani is now on Telegram. Click here to join our channel and stay updated with the latest news.

Next