Advertisement

ಶಿವಮೊಗ್ಗ: ಉತ್ತರ ಪ್ರದೇಶದ ಹುಲಿ ಮೀಸಲು ಅರಣ್ಯಕ್ಕೆ ಸಕ್ರೆಬೈಲಿನ ಸೂರ್ಯ ಆನೆ

11:22 AM Nov 02, 2022 | Team Udayavani |

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಸೂರ್ಯ ಆನೆಯನ್ನು ಉತ್ತರ ಪ್ರದೇಶದ ಹುಲಿ ಮೀಸಲು ಅರಣ್ಯಕ್ಕೆ ವರ್ಗಾಯಿಸಲಾಗುತ್ತಿದೆ. ಬಿಡಾರದ ಸಿಬ್ಬಂದಿ ಸೂರ್ಯನೊಂದಿಗೆ ಕೊನೆಯ ಫೋಟೊ ಕ್ಲಿಕ್ಕಿಸಿಕೊಂಡು ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಿದರು.

Advertisement

ಸೂರ್ಯ ಆನೆಯನ್ನು ಉತ್ತರ ಪ್ರದೇಶದ ಫಿಲಿಬಿಟ್ ಹುಲಿ ಮೀಸಲು ಅರಣ್ಯಕ್ಕೆ ವರ್ಗಾಯಿಸಲಾಗುತ್ತಿದೆ. ಈಗಾಗಲೆ ಅಲ್ಲಿಂದ ಲಾರಿ ಆಗಮಿಸಿದ್ದು ಸೂರ್ಯ ಆನೆಯನ್ನು ಲಾರಿ ಹತ್ತಿಸಲಾಗಿದೆ.

ಸರ್ಕಾರದ ಸೂಚನೆ ಮೇರೆಗೆ ಸೂರ್ಯ ಅನೆಯನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಈ ಹಿನ್ನಲೆ ಸಕ್ರೆಬೈಲು ಬಿಡಾರದ ಸಿಬ್ಬಂದಿ ಸೂರ್ಯನಿಗೆ ಬೀಳ್ಕೊಡುಗೆ ನೀಡಿದರು. ಸೂರ್ಯ ಆನೆಯ ಮಾವುತ, ಕಾವಾಡಿ, ಬಿಡಾರದ ಉಳಿದ ಸಿಬ್ಬಂದಿ ಆನೆಯೊಂದಿಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಸುರಕ್ಷಿತವಾಗಿ ಲಾರಿ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ.

12 ವರ್ಷದ ಸೂರ್ಯ ಆನೆಯು ಸಕ್ರೆಬೈಲು ಬಿಡಾರದ ನೇತ್ರಾಳ ಮಗ. ಬಿಡಾರದ ಸಿಬ್ಬಂದಿಯೊಂದಿಗೆ ಚನ್ನಾಗಿ ಹೊಂದಿಕೊಂಡಿದ್ದ ಸೂರ್ಯ ಇನ್ಮುಂದೆ ಉತ್ತರ ಪ್ರದೇಶದ ಫಿಲಿಬಿಟ್ ಕಾಡಿನಲ್ಲೆ ಕಳೆಯಬೇಕಾಗುತ್ತದೆ. ಉತ್ತರ ಪ್ರದೇಶ ಸರ್ಕಾರ ಆನೆಗಳಿಗಾಗಿ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆ ವಿವಿಧೆಡೆಯ ಆಯ್ದ ಕೆಲವು ಆನೆಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಸಕ್ರೆಬೈಲಿನಿಂದ ಸೂರ್ಯ ಆನೆಯನ್ನು ಕಳುಹಿಸಲಾಗುತ್ತಿದೆ.

ಆನೆಗಳ ಆಯ್ಕೆ ಮಾಡಲು ಉತ್ತರ ಪ್ರದೇಶದಿಂದಲೆ ವೈದ್ಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ತಂಡ ರಾಜ್ಯಕ್ಕೆ ಆಗಮಿಸಿತ್ತು. ವಿವಿಧ ಬಿಡಾರಗಳಿಗೆ ತೆರಳಿ ನಾಲ್ಕು ಆನೆಗಳನ್ನು ಆಯ್ಕೆ ಮಾಡಿದ್ದಾರೆ. ಉತ್ತರ ಪ್ರದೇಶದ ಹವಾಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಿರುವ ಆನೆಗಳನ್ನು ಗುರುತಿಸಲಾಗಿತ್ತು. ಅದರಂತೆ ಸರ್ಕಾರಗಳ ನಡುವೆ ಒಪ್ಪಂದವಾಗಿದ್ದು ಆನೆಗಳನ್ನು ವರ್ಗಾಯಿಸಲಾಗುತ್ತಿದೆ. ಸಕ್ರೆಬೈಲಿನ ಸೂರ್ಯ, ದುಬಾರೆಯ ರಾಮಪುರ ಕ್ಯಾಂಪ್ ಮತ್ತು ಕೊಡಗಿನ ತಿತಿಮತಿಯ ಇನ್ನು ಮೂರು ಆನೆಗಳು ಉತ್ತರ ಪ್ರದೇಶದತ್ತ ಹೊರಟಿವೆ.

Advertisement

ರಾಜ್ಯದಿಂದ ಹೊರಟಿರುವ ಆನೆಗಳು ಉತ್ತರ ಪ್ರದೇಶದ ಫಿಲಿಬಿಟ್ ಆರಣ್ಯ ತಲುಪುವ ತನಕ ಅನೇಕ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆನೆ ಸಾಗುವ ಮಾರ್ಗವನ್ನು ಈಗಾಗಲೆ ಗುರುತಿಸಲಾಗಿದೆ. ಆನೆಗಳು ಇರುವ ಲಾರಿ ತೆರಳುತ್ತಿದ್ದಂತೆ ಆಯಾ ಜಿಲ್ಲೆಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಎಸ್ಕಾರ್ಟ್ ಮಾಡಬೇಕಿದೆ. ನಿತ್ಯ 250 ಕಿ.ಮೀ ಮಾತ್ರ ಆನೆಯನ್ನು ಕೊಂಡೊಯ್ಯಬೇಕಿದೆ. ನಿತ್ಯ ಉಳಿದುಕೊಳ್ಳಲು ಆಯಾ ಜಿಲ್ಲೆಯಲ್ಲಿ ನಿಗದಿತ ಸ್ಥಳವನ್ನು ಒದಗಿಸಬೇಕಿದೆ. ಇನ್ನು ಪ್ರತಿ ಮೂರು ಗಂಟೆಗೆ ಒಮ್ಮೆ ಆನೆಗೆ ಸ್ನಾನ ಮಾಡಿಸಬೇಕಾಗುತ್ತದೆ.

ಇದನ್ನೂ ಓದಿ : ಚಿಕ್ಕಮಗಳೂರು: ಮೋಟಮ್ಮ ಪುತ್ರಿಗೆ ಕೈ ಟಿಕೆಟ್‌ ನೀಡಿದ್ದಕ್ಕೆ ಮುಖಂಡರ ಆಕ್ರೋಶ

ಸಕ್ರೆಬೈಲಿನ ವೈದ್ಯಾಧಿಕಾರಿ ಡಾ. ವಿನಯ್, ಕಾವಾಡಿಗಳಾದ ರಾಜೇಶ್, ಅಮ್ಜದ್ ಅವರು ಸೂರ್ಯ ಅನೆಯೊಂದಿಗೆ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾರೆ. ಅಲ್ಲಿಯ ವಾತಾವರಣಕ್ಕೆ ಆನೆ ಹೊಂದಿಕೊಂಡ ಬಳಿಕ ಇವರು ಹಿಂತಿರುಗಲಿದ್ದಾರೆ.

ಉತ್ತರ ಪ್ರದೇಶದ ಆರಣ್ಯಗಳಿಗೆ ರಾಜ್ಯದ ಆನೆಗಳ ವರ್ಗಾವಣೆ ಇದೆ ಮೊದಲಲ್ಲ. 2017ರಲ್ಲಿ ರಾಜ್ಯದ ವಿವಿಧ ಬಿಡಾರಗಳಿಂದ 10 ಆನೆಗಳನ್ನು ಅಲ್ಲಿಯ ದೂದ್ವ ರಾಷ್ಟ್ರೀಯ ಉದ್ಯಾನಕ್ಕೆ ಆನೆಗಳನ್ನು ಕಳುಹಿಸಲಾಗಿತ್ತು. ಆಗ ಸಕ್ರೆಬೈಲು ಬಿಡಾರದಿಂದ 4 ಆನೆಗಳನ್ನ ಕಳುಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next