Advertisement

ಅನಧಿಕೃತ ತಂಬಾಕು ಬೆಳೆಗಾರರಿಗೆ ಶೀಘ್ರವೇ ಸಿಹಿ ಸುದ್ದಿ: ಸಂಸದ ಪ್ರತಾಪ್ ಸಿಂಹ

07:09 PM Apr 29, 2022 | Team Udayavani |

ಹುಣಸೂರು : ಹಲವು ವರ್ಷಗಳಿಂದ ತಂಬಾಕು ಬೆಳೆಗಾರರ ಬೇಡಿಕೆಯಂತೆ ಅನಧಿಕೃತ ತಂಬಾಕು ಬೆಳೆಗಾರರಿಗೂ ಅಧಿಕೃತ ಲೈಸೆನ್ಸ್ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.

Advertisement

ಹುಣಸೂರಿನ ನಗರದ ಸಾಯಿಬ್ರಹ್ಮಗುರು ಕನ್ವೆನ್ಷನ್‌ಹಾಲ್‌ನಲ್ಲಿ ದ ಟೊಬ್ಯಾಕೋ ಇನ್ಸಿಟ್ಯೂಟ್ ಆಫ್ ಇಂಡಿಯಾ ಆಯೋಜಿಸಿದ್ದ ೨೧ನೇ ಅತ್ಯುತ್ತಮ ತಂಬಾಕು ಬೆಳೆಗಾರರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು ತಮ್ಮ ಸಂಸದರ ಅವಧಿಯಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ದಂಡದ ಪ್ರಮಾಣವನ್ನು ಶೇ.೧೫ರಿಂದ ಶೇ.೫ಕ್ಕೆ ಇಳಿಸಲಾಗಿದೆ. 26 ಸಾವಿರ ಅನಧೀಕೃತ ತಂಬಾಕು ಬೆಳೆಗಾರರಿಗೆ ಲೈಸೆನ್ಸ್ ಕೊಡಿಸುವ ಸಂಬಂಧ ಮಂಡಳಿ ಅಧ್ಯಕ್ಷ ರಘುನಂದಬಾಬುರೊಂದಿಗೆ ಸೇರಿ ಕೇಂದ್ರ ವಾಣಿಜ್ಯ ಮಂತ್ರಾಲಯದ ಮುಖ್ಯಸ್ಥ ಸುಬ್ರಹ್ಮಣ್ಯಂರಿಗೆ ಮನವಿ ಮಾಡಲಾಗಿದ್ದು, ಆದಷ್ಟು ಬೇಗ ಸಿಹಿ ಸುದ್ದಿ ನೀಡುವೆನೆಂಬ ವಿಶ್ವಾಸ ವ್ಯಕ್ತಪಡಿಸಿ, ಈಗ ಕರ್ನಾಟಕಕ್ಕೆ 100 ಮಿಲಿಯನ್ ತಂಬಾಕು ಉತ್ಪಾದನೆಗೆ ಅನುಮತಿ ಸಿಕ್ಕಿದ್ದು, ಅನಧಿಕೃತ ಬೆಳೆಗಾರರು ಅಧಿಕೃತವಾದಲ್ಲಿ ಸುಮಾರು 115 ಮಿಲಿಯನ್ ಬೆಳೆಗೆ ಅವಕಾಶ ಸಿಗಲಿದೆ. ಈ ಪ್ರಯತ್ನಕ್ಕೆ ಅಧಿಕೃತ ಬೆಳೆಗಾರರ ಬೆಂಬಲ ಅಗತ್ಯ. ಈ ಬಾರಿ ಸರಾಸರಿ ಕೆಜಿಗೆ ೧೬೩ರೂ. ಬೆಲೆ ಸಿಕ್ಕಿದೆ. ಈ ಬಾರಿ ರಸಗೊಬ್ಬರ ಬೆಲೆ ಹೆಚ್ಚಿದ್ದು, ಐಟಿಸಿ ಸೇರಿದಂತೆ ಇತರೆ ಕಂಪನಿಗಳು ರೈತರಿಗೆ ಉತ್ತಮ ಬೆಲೆ ನೀಡುವಂತೆ ಮನವಿ ಮಾಡಿದರು.

ಅನ್ನದಾತರಿಗೆ ದಂಡ ಹಾಕಬೇಡಿ: ಶಾಸಕ ಮಂಜುನಾಥ್
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಯಾವುದೇ ರೈತರಿಗೆ ದಂಡ ಹಾಕುವುದು ಅಕ್ಷಮ್ಯ ಅಪರಾಧ. ತಂಬಾಕು ಬೆಳೆಗಾರರಿಗೆ ದಂಡ ಹಾಕುತ್ತಿರುವುದು ಅವರಿಗೆ ಮೋಸ ಮಾಡಿದಂತೆ, ಅವರಿಗೆ ದಂಡ ಹಾಕಲು ನೀವ್ಯಾರು ಎಂದು ಪ್ರಶ್ನಿಸಿ, ಭೂತಾಯಿಯನ್ನೇ ನಂಬಿಕೊಂಡು ಬದುಕುತ್ತಿರುವ ರೈತರು ದೇಶದ ಮಂದಿಗೆ ಹೊಟ್ಟೆ ತುಂಬಿಸುವವರು. ಇಂತಹ ದಂಡ ಪ್ರವೃತ್ತಿ ತರವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಂಬಾಕು ಬೆಳೆ ಮೈಸೂರು ಭಾಗದ ರೈತರ ಜೀವ ಬೆಳೆ, ಈ ಪ್ರಮುಖ ಬೆಳೆಗೆ ವೈಜ್ಞಾನಿಕ ಬೆಲೆ ನೀಡುವುದೆ ಬೆಳೆಗಾರರಿಗೆ ನೀಡುವ ಉಪಕಾರ. ಈಗ ಉತ್ಪಾದನಾ ವೆಚ್ಚ ಹೆಚ್ಚಿದೆ. ಈ ನಿಟ್ಟಿನಲ್ಲಿ ಐಟಿಸಿ ಕಂಪನಿ ಸೇರಿದಂತೆ ಎಲ್ಲಾ ಕಂಪನಿಗಳು ರೈತರಿಗೆ ಉತ್ತಮ ಬೆಲೆ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಿರೆಂದು ಮನವಿ ಮಾಡಿ, ಐಟಿಸಿ ಕಂಪನಿ ತಂಬಾಕು ರೈತರಿಗೆ ಪ್ರಮುಖವಾಗಿದ್ದು, ಅವರ ಸಾಮಾಜಿಕ ಕಾರ್ಯಗಳು ಪ್ರಶಂಸನೀಯ, ಕಳೆದ ಬಾರಿ ಬೆಲೆ ಕಡಿಮೆಯಾದಾಗ ತಾವು ಸೇರಿದಂತೆ ಹಲವು ಶಾಸಕರು ಮಾರುಕಟ್ಟೆಗೆ ಬೀಗ ಜಡಿದು ಪ್ರತಿಭಟಿಸಿದ ನಂತರವಷ್ಟೆ ಮಂಡಳಿ ಎಚ್ಚೆತ್ತುಕೊಂಡಿತು.

ದುರಹಂಕಾರಿ ಐಎಎಸ್ ಅಧಿಕಾರಿ
ಮಂಡಳಿಗೆ ದುರಹಂಕಾರಿ ಐಎಎಸ್ ಮಹಿಳಾ ಅಧಿಕಾರಿಯೊಬ್ಬರಿದ್ದು ಇವರು ಯಾವುದೇ ಸಮಸ್ಯೆಗೆ ಸ್ಪಂದಿಸುವುದಿಲ್ಲ, ಹರಾಜು ಮಾರುಕಟ್ಟೆಗೆ ಭೇಟಿ ನೀಡುತ್ತಿಲ್ಲ, ಬೆಂಗಳೂರಿನಲ್ಲಿ ವಿಲಾಸಿ ಜೀವನ ನಡೆಸುತ್ತಿರುವ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು-ವರ್ಗಾವಣೆಗೊಳಿಸಲು ಈ ಸರಕಾರಕ್ಕೆ ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಟಿಟಿಐನ ಮುಖ್ಯಸ್ಥರಾದ ಶರತ್‌ಟಂಡನ್ ಮಾತನಾಡಿ, ಕರ್ನಾಟಕದಲ್ಲಿ ಉತೃಷ್ಟ ತಂಬಾಕು ಉತ್ಪಾದನೆಯಾಗುತ್ತದೆ. ಭಾರತದ ತಂಬಾಕು ಉದ್ಯಮ ಸುಮಾರು 12  ಲಕ್ಷ ಕೋಟಿ ರೂ.ಗಳ ಕೊಡುಗೆ ನೀಡುತ್ತಿದೆ.4.6 ಕೋಟಿ ಜನರ ಜೀವನೋಪಾಯಕ್ಕೆ ಆಧಾರವಾಗಿದೆ. ಅರ್ಧಕ್ಕಿಂತ ಹೆಚ್ಚು ರಫ್ತಾಗುತ್ತಿದೆ, ವಾರ್ಷಿಕವಾಗಿ ಎಫ್‌ಸಿವಿ ತಂಬಾಕು ರಫ್ತುದಾರರು ವಾರ್ಷಿಕವಾಗಿ ೩ ಸಾವಿರ ಕೋಟಿ ರೂ. ವಿದೇಶಿ ವಿನಿಮಯ ಮಾಡುತ್ತಿದ್ದಾರೆ. ಇತ್ತೀಚೆಗೆ ಎಫ್‌ಸಿವಿ ತಂಬಾಕು ಉತ್ಪಾದನೆ ಕುಸಿತ ಕಂಡುಬರುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ತಂಬಾಕು ಸ್ಪರ್ಧೆಯನ್ನು ಹೆಚ್ದಿಸಲು, ರಫ್ತನ್ನು ಪ್ರೋತ್ಸಾಹಿಸಲು ತಂಬಾಕು ಬೆಳೆಗೆ ಪ್ರೋತ್ಸಾಹ ಅತ್ಯಗತ್ಯ. ತಂಬಾಕು ಉತ್ಪಾದಿಸುವ ರಾಷ್ಟ್ರಗಳಿಗಿಂತ ಭಾರತದಲ್ಲಿ ತಂಬಾಕು ನಿಯಂತ್ರಣ ಕ್ರಮಗಳು ಕಠಿಣವಾಗಿದೆ. ವಿಶ್ವದಲ್ಲೇ ಅಕ್ರಮ ಸಿಗರೇಟು ಮಾರುಕಟ್ಟೆಯಿಂದಾಗಿ 15 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಹೀಗಾಗಿ ಅಕ್ರಮ ಸಿಗರೇಟು ಸಾಗಾಣಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್, ತಂಬಾಕು ಮಂಡಳಿ ಸದಸ್ಯ ಸುಬ್ರಹ್ಮಣ್ಯರೆಡ್ಡಿ, ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ.ಜವರೇಗೌಡ ಮಾತನಾಡಿದರು. ಸಿಟಿಆರ್‌ಐ ಮುಖ್ಯಸ್ಥ ರಾಮಕೃಷ್ಣ, ಐಟಿಸಿ ಕಂಪನಿಯ ಉಪಾಧ್ಯಕ್ಷ ಕೃಷ್ಣಕುಮಾರ್, ಲೀಫ್‌ಮ್ಯಾನೇಜರ್ ಶ್ರೀನಿವಾಸರೆಡ್ಡಿ, ಮಾರ್ಕೇಟಿಂಗ್ ಮ್ಯಾನೇಜರ್ ಪೂರ್ಣೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವಿವಿಧ ತಾಲೂಕುಗಳ ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next