Advertisement
ಜನರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 32 ದೂರುಗಳು ದಾಖಲಾದವು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಬಿ.ಎಚ್. ನಾರಾಯಣರಾವ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್ ಕುಮಾರ್ ಅವರ ಸಮ್ಮುಖದಲ್ಲಿ ನಡೆದ ಒಂದು ತಾಸಿನ ಅವಧಿಯ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಮಸ್ಯೆಗಳ ಕುರಿತು ದೂರುಗಳು ಕೇಳಿಬಂದವು.
Related Articles
Advertisement
ಕಾಲುವೆ ಒತ್ತುವರಿ: ನಗರದ ಹೊರವಲಯದಿಂದ ಕರೆ ಮಾಡಿದ ಓರ್ವರು, ಜ್ಯೋತಿಗೌಡನಪುರದ ಹತ್ತಿರ ಅರಣ್ಯ ಇಲಾಖೆಗೆ ಸೇರಿದ ಸ್ಥಳವನ್ನು ಸಮತಟ್ಟು ಮಾಡಿ, ಅಕ್ರಮವಾಗಿ ಜಮೀನಾಗಿ ಪರಿವರ್ತಿಸಿಕೊಳ್ಳಲಾಗಿದೆ. ಜತೆಗೆ ಕಾಲುವೆಯೊಂದನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕಲಾಗಿದೆ ಎಂದು ಹೇಳಿದರು. ಇದಕ್ಕೆ ಉತ್ತರ ನೀಡಿದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲಿಸಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಹನೂರಿನಲ್ಲಿ ರೆಕಾರ್ಡ್ ರೂಮ್ ಸ್ಥಾಪನೆ: ಸಾರ್ವಜನಿಕರೊಬ್ಬರು, ಹನೂರು ತಾಲೂಕಿನಿಂದ ಕರೆ ಮಾಡಿ, ಹನೂರು ತಾಲೂಕು ಆಗಿದ್ದರೂ, ಸರ್ಕಾರಿ ದಾಖಲಾತಿಗಳಿಗಾಗಿ ಇಂದಿಗೂ ಕೊಳ್ಳೇಗಾಲಕ್ಕೆ ಹೋಗಬೇಕು. ಇದನ್ನು ಪರಿಹರಿಸುವಂತೆ ಕೋರಿದರು. ಇದಕ್ಕೆ ಉತ್ತರ ನೀಡಿದ ಜಿಲ್ಲಾಧಿಕಾರಿ ಅವರು ಹೊಸ ಕಡತಗಳನ್ನು ಈಗಾಗಲೇ ಹನೂರಿನಲ್ಲಿಯೇ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಹಳೆಯ ದಾಖಲಾತಿಗಳನ್ನು ಹನೂರಿನಲ್ಲಿ ರೆಕಾರ್ಡ್ ರೂಮ್ ಸ್ಥಾಪಿಸಿದ ಬಳಿಕ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ರಾಮಾಪುರ ಬಳಿಯ ಚೆಕ್ ಡ್ಯಾಮ್ ಕಾಮಗಾರಿ ವಿಳಂಬ, ಹಂಗಳ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಪಂಚಾಯ್ತಿಗಳಲ್ಲಿನ ಅವ್ಯವಸ್ಥೆ ಬಗೆಗಿನ ಸಮಸ್ಯೆಗಳ ಕುರಿತು ಉತ್ತರ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ನಾರಾಯಣರಾವ್ ಅವರು ತ್ವರಿತ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ರಸ್ತೆ, ಚರಂಡಿ ದುರಸ್ಥಿ, ನೀರಿನ ಸಮಸ್ಯೆ, ಅಕ್ರಮ ಮದ್ಯ ಮಾರಾಟ, ಕೋತಿಗಳ ಕಾಟ, ವಿದ್ಯುತ್ ಸಮಸ್ಯೆ, ಅಕ್ರಮ ಖಾಸಗಿ ಮನೆಪಾಠ, ಪಿಂಚಣಿ ವಿಷಯಗಳ ಕುರಿತು ಸಮಸ್ಯೆಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿಬಂದವು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.