Advertisement

ಶೀಘ್ರದಲ್ಲಿಯೇ ಮೆಡಿಕಲ್‌ ಕಾಲೇಜು ಕಾಮಗಾರಿ ಆರಂಭ

03:08 PM Oct 21, 2019 | Suhan S |

ಹಾನಗಲ್ಲ: ಪ್ರಧಾನಮಂತ್ರಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಪ್ರತಿ ಜಿಲ್ಲೆಗೆ ಒಂದು ಮೆಡಿಕಲ್‌ ಕಾಲೇಜು ಸ್ಥಾಪಿಸುವ ಸಂಕಲ್ಪ ಹೊಂದಿದ್ದು, ಹಾವೇರಿ ಜಿಲ್ಲೆಗೂ ಒಂದು ಮೆಡಿಕಲ್‌ ಕಾಲೇಜು ಮಂಜೂರಾಗಿದೆ. ಇದಕ್ಕೆ ಈಗಾಗಲೇ ಭೂಮಿ ಗುರುತಿಸಲಾಗಿದ್ದು, ಟೆಂಡರ್‌ ಕರೆದು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ 21.40 ಕೋಟಿ ರೂ. ವೆಚ್ಚದಲ್ಲಿ ಹಾನಗಲ್ಲ ತಾಲೂಕು, ನವಲಗುಂದ-ಬನವಾಸಿ-ಮುಗವಳ್ಳಿ ರಾಜ್ಯ ಹೆದ್ದಾರಿ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮಾರನಬೀಡನಲ್ಲಿ 8.25 ಕೋಟಿ ವೆಚ್ಚದಲ್ಲಿ ವಧಿ ಕ್ರಾಸ್‌ನಿಂದ ಕಾತೂರ ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ, ಮಹರಾಜಪೇಟೆ ಗ್ರಾಮದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡ, 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆಯ ರಾಣಿಬೆನ್ನೂರನಲ್ಲಿ ಸುಸಜ್ಜಿತ ಎಪಿಎಂಸಿ ಮೆಘಾ ಮಾರ್ಕೆಟ್‌ ನಿರ್ಮಾಣ ಕಾಮಗಾರಿಗೆ 105 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಟೆಂಡರ್‌ ಹಾಲ್‌, ಸಿಸಿ ರಸ್ತೆಗಳು, ಒಳಚರಂಡಿ, ಪೊಲೀಸ್‌ ಸ್ಟೇಶನ್‌, ರೈತರ ವಿಶ್ರಾಂತಿ ಗೃಹ, ಪಾರ್ಕಿಂಗ್‌ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಅಳವಡಿಸಲಾಗಿದೆ ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನೆರೆ ಹಾವಳಿ ನಡುವೆಯೂ ಅಭಿವೃದ್ಧಿಗೆ ಹಣ ಹರಿದು ಬರುತ್ತಿದೆ. ಮತ್ತೆ ಅಭಿವೃದ್ಧಿ ಪರ್ವ ಆರಂಭವಾಗಿದೆ. ನೀರಾವರಿಗೆ ಮೊದಲ ಆದ್ಯತೆ ನೀಡಿದ್ದು, ತಾಲೂಕಿನಾದ್ಯಂತ ಎಲ್ಲ ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ಚಾಲನೆಗೊಳ್ಳಲಿವೆ.

ಈಗಾಗಲೇ 504 ಕೋಟಿ ರೂ. ವೆಚ್ಚದಲ್ಲಿ ಬಾಳಂಬೀಡ ಹಾಗೂ ಶಿರಗೋಡ ಏತ ನೀರಾವರಿ ಯೋಜನೆಗಳು ಮಂಜೂರಾಗಿದ್ದು, ಇನ್ನೂ 50 ಕೋಟಿ ರೂ. ವೆಚ್ಚದಲ್ಲಿ ನರೇಗಲ್‌ ಹಾಗೂ ಹುಲಗಡ್ಡಿ ಏತ ನೀರಾವರಿ ಕಾಮಗಾರಿಗೆ ಹಣ ಮಂಜೂರಾಗಲಿದೆ. ಇದರೊಂದಿಗೆ ಮಾರನಬೀಡ ಗ್ರಾಮಕ್ಕೆ ಹೊಳಗಟ್ಟಿ ಕೆರೆ ಹೂಳು ತೆಗೆಯಲು 30 ಲಕ್ಷ ರೂ., ಎಎನ್‌ ಎಂ ಕೇಂದ್ರ ನಿರ್ಮಿಸಲು 35 ಲಕ್ಷ ರೂ., ಆಡೂರು ನೀರಲಗಿ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ., 12 ಲಕ್ಷ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣ, ಮಾರನಬೀಡ-ಮಾಸನಕಟ್ಟಿ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಬಿಡುಗಡೆ ಹಂತದಲ್ಲಿವೆ. ಇದರೊಂದಿಗೆ ನೆರೆ ಹಾವಳಿಯಿಂದ ಅತಿ ಹೆಚ್ಚು ಹಾನಿಗೊಳಗಾದ 10 ಗ್ರಾಪಂಗಳಿಗೆ ವಿಶೇಷ ಕ್ರಿಯಾ ಯೋಜನೆ ರಚಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.

Advertisement

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಸದಸ್ಯೆ ಶೀಲಾ ಗಡಿಯಪ್ಪನವರ, ಗ್ರಾಪಂ ಅಧ್ಯಕ್ಷ ವೀರಣ್ಣ ಮರಡಿ, ಗುತ್ತಿಗೆದಾರ ಅಶೋಕ ಪಾಟೀಲ, ಸಂತೋಷ ಹಿರೇಮಠ, ಮುಖಂಡರಾದ ಪದ್ಮನಾಭ ಕುಂದಾಪೂರ, ಎಂ.ಆರ್‌.ಪಾಟೀಲ, ಕಲ್ಯಾಣಕುಮಾರ ಶೆಟ್ಟರ, ಕುಮಾರ ಹತ್ತಿಕಾಳ, ಶಿವಕುಮಾರ ದೇಶಮುಖ, ಶಿವಲಿಂಗಪ್ಪ ತಲ್ಲೂರ, ರಾಜೂ ಗೌಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next