Advertisement

ಶೀಘ್ರವೇ ನಗರದ 8 ಕಡೆ ಸಿಸಿ ಟಿವಿ: ಎಸ್ಪಿ ಗುಳೇದ್‌

09:34 AM Jul 20, 2017 | Team Udayavani |

ದಾವಣಗೆರೆ: ಜನನಿಬಿಡ ಕೆಎಸ್ಸಾರ್ಟಿಸಿ, ಶಾಮನೂರು ರಸ್ತೆಯ ಸೇತುವೆ ಜಂಕ್ಷನ್‌ ಒಳಗೊಂಡಂತೆ 8 ಭಾಗದಲ್ಲಿ ಅತಿ ಶೀಘ್ರವೇ ಸಿಸಿ ಟಿವಿ ಅಳವಡಿಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ತಿಳಿಸಿದ್ದಾರೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ಬಿಡುಗಡೆ  ಯಾಗಿರುವ 1 ಕೋಟಿ ಅನುದಾನದಲ್ಲಿ ಸಿಸಿ ಟಿವಿ ಅಳವಡಿಕೆ, 2 ಮೊಬೈಲ್‌ ಟ್ರಾಫಿಕ್‌ ಸಿಗ್ನಲ್‌, ಸೈನ್‌ ಬೋರ್ಡ್‌, ಹಳೆ ಪಿಬಿ ರಸ್ತೆ ಹೊರತುಪಡಿಸಿ ಇತರೆ ರಸ್ತೆಗಳಿಗೆ ಬಣ್ಣ ಒಳಗೊಂಡಂತೆ ಸಂಚಾರ ಸುವ್ಯವಸ್ಥೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದುಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಸಿಸಿ ಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಸಾರಿಗೆ ಸಂಸೆ ಬಸ್‌ ನಿಲ್ದಾಣ, ಬಾಡ ಕ್ರಾಸ್‌ನ ಗಣೇಶ ದೇವಸ್ಥಾನ, ಶಾಮನೂರು ರಸ್ತೆಯಲ್ಲಿನ ಸೇತುವೆ, ಜಗಳೂರು ರಸ್ತೆಯ ಅರಳಿಮರ ವೃತ್ತ, ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆ ರಸ್ತೆಯ ಜಯನಗರ ಪಾರ್ಕ್‌, ಹದಡಿ ರಸ್ತೆಯ ಗಣೇಶ ದೇವಸ್ಥಾನ, ಹಳೆ ಪಿಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಎಸ್ಪಿ
ಕಚೇರಿಯಲ್ಲಿ ಸಿಸಿ ಟಿವಿ ಅಳವಡಿಸಲಾಗುವುದು. ಮುಂದಿನ ದಿನಗಳಲ್ಲಿ ಇತರೆ ಭಾಗದಲ್ಲೂ ಸಿಸಿ ಟಿವಿ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಈಗ 8 ಭಾಗದಲ್ಲಿ ಅಳವಡಿಸಲಾಗುವ ಸಿಸಿ ಟಿವಿಯಲ್ಲಿ ವಿನೂತನ ವ್ಯವಸ್ಥೆಯ ಸೌಲಭ್ಯ ಇದೆ. ನೋ ಪಾರ್ಕಿಂಗ್‌ ಜಾಗವನ್ನು ಗುರುತಿಸಿ, ಸಾಫ್ಟ್‌  ವೇರ್‌ನಲ್ಲಿ ಅಳವಡಿಸಬಹುದು. ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ನಿಲ್ಲಿಸಿದರೂ ಕಂಟ್ರೋಲ್‌ ರೂಂನಲ್ಲೇ ನೋಡಿ, ಮುಂದಿನ ಕ್ರಮ ವಹಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಯಾವುದೇ ವಾಹನ 60 ಕಿಲೋ ಮೀಟರ್‌ ವೇಗದಲ್ಲಿ ಚಲಿಸುತ್ತಿದ್ದರೂ ವಾಹನಗಳ ನಂಬರ್‌ ಸಿಸಿ ಟಿವಿಯಲ್ಲಿ ಗೊತ್ತಾಗುತ್ತದೆ.
ರಾತ್ರಿ ವೇಳೆಯಲ್ಲೂ ವಾಹನಗಳ ಸಂಖ್ಯೆಯನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ವೇಗದ ಮಿತಿ ದಾಟುವ ವಾಹನಗಳ ಬಗ್ಗೆಯೂ ಸ್ಪಷ್ಟ ಮಾಹಿತಿ, ವೀಡಿಯೋ ದಾಖಲಾಗುತ್ತದೆ. ನಿಗದಿತ ಸ್ಥಳದಲ್ಲಿ ಇರಿಸಲಾಗುವ ಯಾವುದೇ ವಸ್ತುವನ್ನು ಮುಟ್ಟಿದರೂ ಮಾಹಿತಿ
ಲಭ್ಯವಾಗುತ್ತದೆ. ವಾರ್ನಿಂಗ್‌ ಅಲಾರಾಂ ಮೊಳಗುತ್ತದೆ ಎಂದು ತಿಳಿಸಿದರು. 

ಮುಂದಿನ ದಿನಗಳಲ್ಲಿ ಸಿಸಿ ಟಿವಿ ಅಳವಡಿಸುವ ಜಾಗಗಳಲ್ಲಿ ತುರ್ತು ಕರೆ ಮಾಡುವ ವ್ಯವಸ್ಥೆ (ಎಮರ್ಜೆನ್ಸಿ ಕಾಲಿಂಗ್‌ ಬಟನ್‌)
ಮಾಡಲಾಗುವುದು. ಯಾವುದೇ ರೀತಿಯ ಅನಾಹುತ, ಅವಘಡ ಸಂಭವಿಸಿದ್ದಲ್ಲಿ ಎಮರ್ಜೆನ್ಸಿ ಕಾಲಿಂಗ್‌ ಬಟನ್‌ ಮೂಲಕ ನಮ್ಮ ಕಂಟ್ರೋಲ್‌ ರೂಂಗೆ ನೇರವಾಗಿ ವಿಷಯ ತಿಳಿಸಬಹುದು. ಇದರಿಂದ ತತ್‌ಕ್ಷಣಕ್ಕೆ ಘಟನಾ ಸ್ಥಳಕ್ಕೆ ಹೋಗಲು, ಅಗತ್ಯ ಕ್ರಮ ತೆಗೆದುಕೊಳ್ಳಲು ಸಹಾಯ ಆಗುತ್ತದೆ ಎಂದು ತಿಳಿಸಿದರು. ಸಾರಿಗೆ ಹಾಗೂ ಖಾಸಗಿ ಬಸ್‌ಗಳಿಗೆ ಜಿಪಿಎಸ್‌ ಅಳವಡಿಸುವ ಉದ್ದೇಶವೂ ಇದೆ. ಜಿಪಿಎಸ್‌ ಅಳವಡಿಸುವ ಮೂಲಕ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆ, ಸಂಚಾರ ನಿಯಂತ್ರಣ ಮಾಡಬಹುದು. ಕೆಲವಾರು ಕಡೆ ಬಸ್‌ ಶೆಲ್ಟರ್‌ ನಿರ್ಮಿಸಿ, ಅಲ್ಲಿಯೇ ಬಸ್‌ ನಿಲ್ಲುವ ವ್ಯವಸ್ಥೆ ಮಾಡಲಾಗುವುದು. ನಗರ ಸಾರಿಗೆ ಬಸ್‌ಗಳು ನಿಗದಿತ ಮಾರ್ಗದಲ್ಲಿ
ಸಂಚರಿಸುವುದಿಲ್ಲ ಎಂಬುದನ್ನು ಸಹ ಈ ವ್ಯವಸ್ಥೆ ಮೂಲಕ ಪತ್ತೆ ಹಚ್ಚಬಹುದು. ಒಟ್ಟಾರೆಯಾಗಿ ಸ್ಮಾರ್ಟ್‌ಸಿಟಿಗೆ ತಕ್ಕಂತೆ ಸಂಚಾರ ವ್ಯವಸ್ಥೆಯ ವಾತಾವರಣ ನಿರ್ಮಿಸಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಸಿಸಿ ಟಿವಿ ಅಳವಡಿಕೆ ಒಳಗೊಂಡಂತೆ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳ ಯೋಜನಾ ಪಟ್ಟಿ ಸಿದ್ಧಪಡಿಸಿ ಸಂಬಂಧಿತರಿಗೆ ಸಲ್ಲಿಸಲಾಗಿತ್ತು. 1 ಕೋಟಿ ಅನುದಾನ ದೊರೆತಿದ್ದು, ಅದರಲ್ಲೇ ಸಾಧ್ಯವಾದಷ್ಟೂ ಎಲ್ಲ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಕೆಲವಾರು ಕಾರಣದಿಂದ ಉದ್ದೇಶಿತ ಡಿ-ಟ್ರ್ಯಾಕಿಂಗ್‌ಗೆ ಅನುಮತಿ ದೊರೆಯಲಿಲ್ಲ. ದಾವಣಗೆರೆಯಂತಹ
ನಗರಕ್ಕೆ ಡಿ-ಟ್ರ್ಯಾಕಿಂಗ್‌ ಸೌಲಭ್ಯ ಅತ್ಯಗತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next