Advertisement

ರಸ್ತೆ ಅಗಲೀಕರಣ ಕಾರ್ಯ ಶೀಘ್ರ ಆರಂಭ

11:33 AM Jul 23, 2019 | Team Udayavani |

ನಾಯಕನಹಟ್ಟಿ: ರಾಜ್ಯ ಹೆದ್ದಾರಿ, ತೇರುಬೀದಿ ಹಾಗೂ ಪಾದಗಟ್ಟೆ ಅಗಲೀಕರಣಕ್ಕೆ ಶೀಘ್ರದಲ್ಲೇ ಗುರುತು ಹಾಕುವ ಕಾರ್ಯ ಆರಂಭಿಸಲಾಗುವುದು ಎಂದು ತಹಶೀಲ್ದಾರ್‌ ಹಾಗೂ ಪಟ್ಟಣ ಪಂಚಾಯತ್‌ ಪ್ರಭಾರಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಹೇಳಿದರು.

Advertisement

ಸೋಮವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ 45, ತೇರುಬೀದಿ ಹಾಗೂ ಪಾದಗಟ್ಟೆ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಅನುದಾನ ಒದಗಿಸಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು. ತಕ್ಷಣ ಪಪಂ ಸಿಬ್ಬಂದಿ ಹಾಗೂ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ನಿಗದಿಪಡಿಸಿರುವ ಅಳತೆಯ ಗುರುತು ಮಾಡಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಸೆಕ್ಷನ್‌ ಇಂಜಿನಿಯರ್‌ ಹಕೀಂ ಮಾತನಾಡಿ, ಈಗಿರುವ ತೇರುಬೀದಿಯನ್ನು 8 ಮೀಟರ್‌ನಿಂದ 13 ಮೀಟರ್‌ಗೆ ವಿಸ್ತರಿಸಲಾಗುವುದು. ನಂತರ ಎರಡು ಬದಿಗಳಲ್ಲಿ ಒಂದು ಮೀಟರ್‌ ಚರಂಡಿ ಹಾಗೂ 1.5 ಮೀಟರ್‌ ಫುಟ್ಪಾತ್‌ ನಿರ್ಮಿಸಲಾಗುವುದು. ಆಗ ತೇರುಬೀದಿ 18 ಮೀಟರ್‌ಗೆ ಹೆಚ್ಚಲಿದೆ. 8 ಮೀಟರ್‌ ಇರುವ ಪಾದಗಟ್ಟೆ ರಸ್ತೆಯನ್ನು ರಸ್ತೆ, ಚರಂಡಿ ಸೇರಿ 19 ಮೀಟರ್‌ಗೆ ವಿಸ್ತರಿಸಲಾಗುವುದು. 8 ಮೀಟರ್‌ ರಾಜ್ಯ ಹೆದ್ದಾರಿ 45ನ್ನು 14 ಮೀಟರ್‌ವರೆಗೆ ಅಗಲೀಕರಣಗೊಳಿಸಲಾಗುವುದು ಎಂದರು.

ಪಪಂ ಸದಸ್ಯರಾದ ಜೆ.ಆರ್‌. ರವಿಕುಮಾರ್‌, ಎಸ್‌. ಉಮಾಪತಿ, ಮನ್ಸೂರ್‌ ಮಾತನಾಡಿ, ಈಗಿರುವ ತೇರುಬೀದಿ ಅಳತೆಯನ್ನು 18 ಮೀಟರ್‌ ಬದಲು 17 ಮೀಟರ್‌ಗೆ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು. ಪಪಂ ಸದಸ್ಯರಾದ ಯುಸೂಫ್‌, ಮನ್ಸೂರ್‌ ಮಾತನಾಡಿ, ಈಗಿರುವ ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆ ಕೇಳಿರುವ ಅಳತೆಯನ್ನು ಮೊದಲು ಗುರುತು ಮಾಡಬೇಕು. ಕೆಂಪುಬಣ್ಣದಿಂದ ಅಗತ್ಯವಿರುವ ಪ್ರದೇಶವನ್ನು ಗುರುತಿಸಬೇಕು. ನಂತರ ಸಾರ್ವಜನಿಕರ ಆಸ್ತಿ ನಷ್ಟದ ಬಗ್ಗೆ ಹಾಗೂ ಕಡಿಮೆಗೊಳಿಸಬೇಕಾದ ಪ್ರಮಾಣವನ್ನು ನಿರ್ಧರಿಸಿ ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ ಶಾಖಾ ಗ್ರಂಥಾಲಯ ನಿರ್ಮಾಣಕ್ಕೆ ಗ್ರಂಥಾಲಯ ಇಲಾಖೆಯಿಂದ ಜಾಗವನ್ನು ನಿಗದಿಗೊಳಿಸಲು ಪ್ರಸ್ತಾವನೆಯನ್ನು ಪಪಂಗೆ ಸಲ್ಲಿಸಲಾಗಿದೆ. 60×40 ಉದ್ದಳತೆಯ ಜಾಗವನ್ನು ಕುಷ್ಠ ರೋಗ ಆಸ್ಪತ್ರೆ ಬಳಿ ನಿಗದಿಗೊಳಿಸಲು ಸಭೆ ತೀರ್ಮಾನಿಸಿತು.

Advertisement

ಪಟ್ಟಣ ಪಂಚಾಯತ್‌ ಸದಸ್ಯರಿಗೆ ನೀಡಿದ್ದ ಜಮಾ ಖರ್ಚಿನ ವಿವರ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ಸದಸ್ಯ ಜಿ.ಆರ್‌. ರವಿಕುಮಾರ್‌ ಮಾತನಾಡಿ, ಒಂದೊಂದು ಬಿಲ್ಗಳನ್ನು ಎರಡು ಕಡೆ ನಮೂದಿಸಲಾಗಿದೆ. ನೀರಿನ ಟ್ಯಾಂಕರ್‌ಗೆ ಆರು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೂ.ಗಳನ್ನು ಖರ್ಚು ಮಾಡಲಾಗಿದೆ. ಪೌರ ಕಾರ್ಮಿಕರಿಂದ ಸ್ವಚ್ಛತೆ ಕಾರ್ಯ ಮಾಡಿಸಿ ಬೇರೊಬ್ಬರಿಂದ ಸ್ವಚ್ಛತಾ ಕಾರ್ಯಕ್ಕೆ ಬಿಲ್ ನೀಡಲಾಗಿದೆ. ಡಿ.ಜಿ. ಗೋವಿಂದಪ್ಪನವರಿಗೆ ಜಾತ್ರೆ ಪ್ರಯುಕ್ತ ಸ್ವಚ್ಛತೆ 50 ಸಾವಿರಕ್ಕೂ ಹೆಚ್ಚು ಹಣ ನೀಡಲಾಗಿದೆ. ದಾಸ್ತಾನು ಖರೀದಿ ರಿಜಿಸ್ಟರ್‌ ಖರೀದಿಗೆ ಒಂದು ಬಾರಿ 57,620 ರೂ. ಮತ್ತೂಂದು ಬಾರಿ 58,870 ರೂ.ಗಳನ್ನು ನೀಡಲಾಗಿದೆ. ಲೆಕ್ಕಪತ್ರಗಳಲ್ಲಿ ಭಾರೀ ಪ್ರಮಾಣದ ಲೋಪದೋಷಗಳಿವೆ ಎಂದು ಆರೋಪಿಸಿದರು.

ಪ್ರತಿ ಲೆಕ್ಕಕ್ಕೆ ದಾಖಲೆ ನಿರ್ವಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ದಾಖಲೆ, ಬಿಲ್, ವೋಚರ್‌ಗಳನ್ನು ಒದಗಿಸುವಂತೆ ಒತ್ತಾಯಿಸಿದರು. ಆದರೆ ಸಿಬ್ಬಂದಿ ಸೂಕ್ತವಾದ ದಾಖಲೆ ಹಾಗೂ ಬಿಲ್ಗಳನ್ನು ಒದಗಿಸಲು ತಡಕಾಡಿದರು. ಅಂತಿಮವಾಗಿ ತಹಶೀಲ್ದಾರ್‌ ಮಲ್ಲಿಕಾರ್ಜುನ, ಮುಂದಿನ ಸಭೆಯಲ್ಲಿ ಎಲ್ಲ ದಾಖಲೆ ಹಾಗೂ ವೋಚರ್‌ಗಳನ್ನು ಸಭೆಗೆ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಪಪಂ ಸದಸ್ಯರಾದ ನಾಗರಾಜ್‌, ಬಸಣ್ಣ, ಷನುಪ್ತ, ಬೋರಮ್ಮ, ವೈ.ಗಿರಿಜಮ್ಮ, ಕೃಷ್ಣಮೂರ್ತಿ, ಮಂಜುಳಾ ಶ್ರೀಕಾಂತ್‌, ಮನ್ಸೂರ್‌, ಬಸಣ್ಣ, ಜೆ.ಟಿ.ಎಸ್‌. ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next