ಚಿತ್ರದುರ್ಗ: ಅಭಿವೃದ್ಧಿಗೆ ಬಿಡುಗಡೆಯಾಗಿ ಖರ್ಚಾಗದೆ ಬಾಕಿ ಉಳಿದಿರುವ ಅನುದಾನವನ್ನು ನೆರೆ ಸಂತ್ರಸ್ತರಿಗೆ ಬಳಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸಿರಿಗೆರ ತರಳಬಾಳು ಬೃಹನ್ಮ ಠದ ಲಿಂಗೈವರುಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ನೆರೆಗಾಗಿ ಕೆಲ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲಾಗುವುದು ಎಂದ ಬಿ ಎಸ್ ವೈ , ಯಾವ ಯೋಜನೆ ಎನ್ನುವುದನ್ನು ತಿಳಿಸಲಿಲ್ಲ. ನೆರೆ ಸಂತ್ರಸ್ತರಿಗೆ ಈಗಾಗಲೇ 2500 ಕೋಟಿ ರೂ. ಬಿಡುಗಡೆ ಆಗಿದೆ. ಕೇಂದ್ರದಿಂದ ನಾಲ್ಕೈದು ದಿನಗಳಲ್ಲಿ ಪರಿಹಾರ ಬಿಡುಗಡೆ ಆಗಲಿದೆ ಎಂದರು.
ನಾನು ಮುಖ್ಯಮಂತ್ರಿ ಆದಾಗಿನಿಂದ ಅಗ್ನಿಪರೀಕ್ಷೆ ಎದುರಿಸುತ್ತಿದ್ದೇನೆ. ಒಂದೆಡೆ ವಿಪರೀತ ಮಳೆ, ಮತ್ತೊಂದೆಡೆ ಬರ ಇದೆ. ಲಕ್ಷಾಂತರ ಮನೆಗಳನ್ನು ಕಟ್ಟಿಸಬೇಕಿದೆ ಎಂದರು. ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ಘೋಷಿಸಲಾಗಿದೆ. ಬುನಾದಿಗೆ 1 ಲಕ್ಷ ನಿಗಧಿ ಮಾಡಿದ್ದೇವೆ.
ಹಿಂದಿನ ಸರ್ಕಾರಗಳು ಜಾರಿ ಮಾಡಿರುವ ಸಾಲ ಮನ್ನಾ ಯೋಜನೆಯನ್ನು ಹಂತ ಹಂತವಾಗಿ ಎಲ್ಲ ರೈತರಿಗೂ ತಲುಪಿಸಲಾಗುವುದು ಎಂದು ಹೇಳಿದರು.
ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಮಾಧುಸ್ವಾಮಿ, ಕೇಂದ್ರ ಸಚಿವ ಸುರೇಶ್ ಅಂಗಡಿ, ಸಂಸದರಾದ ಜಿ.ಎಂ. ಸಿದ್ದೇಶ್ವರ, ಎ. ನಾರಾಯಣಸ್ವಾಮಿ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ಎಚ್. ಆಂಜನೇಯ, ಶಾಸಕರಾದ ಚಂದ್ರಪ್ಪ, ತಿಪ್ಪಾರೆಡ್ಡಿ, ರಾಮಚಂದ್ರ, ಬೆಳ್ಳಿ ಪ್ರಕಾಶ್ ಮತ್ತಿತರರಿದ್ದರು.