ನರಗುಂದ: ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರು ಎದುರಿಸುವ ಸಮಸ್ಯೆಗಳನ್ನು ಖುದ್ದಾಗಿ ಗಮನಿಸಿದ್ದೇನೆ. ನಾಳೆಯೇ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೂಡಲೇ ಯುದ್ಧೋಪಾದಿಯಲ್ಲಿ ನೊಂದವರಿಗೆ ಪರಿಹಾರ ವಿತರಣೆ ಕಾರ್ಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಭರವಸೆ ನೀಡಿದರು.
ಪ್ರವಾಹ ತೀರಿದ ಬಳಿಕ ಮಳೆ ಹಾನಿ ಮತ್ತು ಬೆಳೆ ಹಾನಿ ಸಮಗ್ರವಾದ ಸಮೀಕ್ಷೆ ಕೈಗೊಂಡು ಪ್ರವಾಹ ಸ್ಥಿತಿಯಿಂದ ನಾಡಿನಲ್ಲಿ ಉಂಟಾದ ಪರಿಸ್ಥಿತಿಯ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿ ಪರಿಹಾರ ಕಾರ್ಯಕ್ಕೆ ಅಗತ್ಯ ಅನುದಾನಕ್ಕೆ ಮನವಿ ಮಾಡಲಾಗುವುದು. ಈ ಹಿಂದೆ ನಾನು ಮುಖ್ಯಮಂತ್ರಿ ಇದ್ದಾಗ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ನೀಡಲಾದ ಬೆಳೆಹಾನಿ ಮತ್ತು ಮಳೆಹಾನಿ ಮೊತ್ತ ಹೆಚ್ಚಳ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚಿನ ಪರಿಹಾರ ಒದಗಿಸಿಕೊಡುವ ಭರವಸೆ ನೀಡುತ್ತಿದ್ದೇನೆ. ಇದರೊಂದಿಗೆ ನಿರಾಶ್ರಿತ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡು ಸಕಲ ನೆರವು, ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಶಾಸಕ ಸಿ.ಸಿ. ಪಾಟೀಲ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ, ವಿಧಾನ ಪರಿಷತ್ ಸದಸ್ಯ ಪ್ರೊ| ಎಸ್.ವಿ. ಸಂಕನೂರ, ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿಪಂ ಮುಖ್ಯ ಕಾರ್ಯದರ್ಶಿ ಮಂಜುನಾಥ ಚವ್ಹಾಣ ಮುಂತಾದವರು ಸ್ಥಳದಲ್ಲಿದ್ದರು.
Advertisement
ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ತೆರಳಿ ಅಲ್ಲಿನ ಮಲಪ್ರಭಾ ನದಿ ಪ್ರವಾಹದಿಂದ ಇಡೀ ಗ್ರಾಮ ಜಲಾವೃತಗೊಂಡಿದ್ದನ್ನು ವೀಕ್ಷಣೆ ಮಾಡಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸಚಿವೆ ಸೀತಾರಾಮನ್ ಭೇಟಿ:
ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಆಗಮಿಸಿ ಬೆಳಗಾವಿ ಮತ್ತು ಬಾಗಲಕೋಟೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಹ ಸ್ಥಿತಿಗತಿ ವೀಕ್ಷಣೆ ಮಾಡಲಿದ್ದಾರೆ. ಕೇಂದ್ರ ಹಣಕಾಸು ಸಚಿವರೇ ಆಗಮಿಸುತ್ತಿದ್ದರಿಂದ ಕೇಂದ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆ ಹೊಂದಿದ್ದೇವೆ. •ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ