ಹೆಬ್ರಿ: ಹೆಬ್ರಿ ತಾಲೂಕು ಆದ ಬಳಿಕ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿದ್ದು ಶೀಘ್ರದಲ್ಲಿ ಮುಖ್ಯಮಂತ್ರಿಗಳಿಂದ ಹೆಬ್ರಿ ತಾಲೂಕಿನ ಮಿನಿ ವಿಧಾನಸೌಧ ಕಟ್ಟಡದ ಉದ್ಘಾಟನೆ ಜತೆಗೆ ಈಗಾಗಲೇ ಇರುವ ತಾಲೂಕು ಕಚೇರಿ ಕಟ್ಟಡದ ಸ್ಥಳವನ್ನು ಸುಮಾರು 1.5 ಕೋ. ರೂ. ವೆಚ್ಚದಲ್ಲಿ ಸುಸಜ್ಜಿತ ಬಸ್ ತಂಗುದಾಣ ಮಾಡಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಹೆಬ್ರಿ ತಾಲೂಕಿನ ನಾಡ್ಪಾಲು ಶಿವಪುರ ಮೊದಲಾದ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
3.25 ಲ.ರೂ. ವೆಚ್ಚದಲ್ಲಿ ಹಳೇ ಸೋಮೇಶ್ವರ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗುದ್ದಲಿ ಪೂಜೆ, 1. 2 ಕೋಟಿ ರೂ. ವೆಚ್ಚದಲ್ಲಿ ನೆಲ್ಲಿಕಟ್ಟೆ ಕೂಡ್ಲು ರಸ್ತೆ ಕಾಮಗಾರಿ ವೀಕ್ಷಣೆ, ಶಿವಪುರ- ಕೆರೆಬೆಟ್ಟು ಗ್ರಾಮದ ಕಲ್ಮುಂಡ- ಮುಕ್ಕಾಣಿ ಬಳಿ 1 ಕೋ.ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, 25 ಲ.ರೂ. ವೆಚ್ಚದಲ್ಲಿ ಖಜಾನೆ ಕೊಡಮಣಿತ್ತಾಯ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ, 50 ಲ.ರೂ. ವೆಚ್ಚದಲ್ಲಿ ಖಜಾನೆ-ಕಲ್ಮುಂಡ ರಸ್ತೆ ಅಭಿವೃದ್ಧಿ, 50 ಲಕ್ಷ ರೂ. ವೆಚ್ಚದಲ್ಲಿ ಭಟ್ಟಂಬಳ್ಳಿಗೆ ಹೋಗುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು. ಹೆಬ್ರಿ ತಹಶೀಲ್ದಾರ್ ಪುರಂದರ್ ಕೆ., ಹೆಬ್ರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ನಾಡ್ಪಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಹೆಗ್ಡೆ, ಉಪಾಧ್ಯಕ್ಷ ನವೀನ್ ಕುಮಾರ್, ಕೂಡ್ಲು ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಶೆಟ್ಟಿ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಗೌರವ್, ಅನಿಲ್ ಕುಮಾರ್ ಬಿಎಸ್ಸೆನ್ನೆಲ್‌ನ ನಿವೃತ್ತ ಅಧಿಕಾರಿ ರಘುರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಕೂಡ್ಲು ಇಂಟರ್ನೆಟ್ ಸಮಸ್ಯೆಗೆ ಮುಕ್ತಿ
ತೀರಾ ಗ್ರಾಮೀಣ ಹಾಗೂ ನಕ್ಸಲ್ ಸಮಸ್ಯೆ ಇರುವ ಕೂಡ್ಲು ಸುತ್ತಮುತ್ತ ಪರಿಸರ ಟೆಲಿಫೋನ್ ಇಂಟರ್ನೆಟ್ ಸಮಸ್ಯೆಯಿಂದ ಸಂಪರ್ಕಕ್ಕೆ ಅಸಾಧ್ಯವಾಗಿತ್ತು. ಈ ಭಾಗದಲ್ಲಿ ಟವರ್ ನಿರ್ಮಾಣ ಕಷ್ಟಸಾಧ್ಯವಾದ್ದರಿಂದ ನಾಡ್ಪಾಲು ಗ್ರಾ.ಪಂ. ವಿಶೇಷ ಮುತುವರ್ಜಿಯಲ್ಲಿ ಸುಮಾರು 23 ಕಿ.ಮೀ. ಉದ್ದಕ್ಕೆ ಫೈಬರ್ ಇಂಟರ್‌ನೆಟ್ ಅಳವಡಿಸುವುದರ ಮೂಲಕ ಈ ಭಾಗದ ಇಂಟರ್ನೆಟ್ ಸಮಸ್ಯೆಗೆ ಮುಕ್ತಿ ದೊರತಂತಾಗಿದೆ ಎಂದು ಮೇಗದ್ದೆ, ಕೂಡ್ಲು, ವಣಜಾರು ಪ್ರದೇಶದ ಇಂಟರ್ನೆಟ್ ಸೇವೆಯ ಉದ್ಘಾಟಿಸಿ ಸಚಿವರು ಹೇಳಿದರು.