ಹುಬ್ಬಳ್ಳಿ: ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಬಿಆರ್‌ಟಿಎಸ್ ಹಾಗೂ ಟೆಂಡರ್‌ಶ್ಯೂರ್ ರಸ್ತೆ ಉದ್ಘಾಟಿಸುವ ಚಿಂತನೆ ನಡೆದಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಮಹಾನಗರದ ಪ್ರಮುಖ ಯೋಜನೆಗಳು ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉದ್ಘಾಟನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಈ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚೆ ಮಾಡಲಾಗುವುದು ಎಂದರು.
ಕೇಂದ್ರ ರಸ್ತೆ ನಿಧಿಯಲ್ಲಿ ಹಿಂದೆಂದೂ ಕೇಂದ್ರದಿಂದ ಬಿಡುಗಡೆಯಾಗಿರದಷ್ಟು ಹಣವನ್ನು ಬಿಜೆಪಿ ಸರಕಾರ ರಾಜ್ಯಕ್ಕೆ ನೀಡಿದೆ. ಅವಳಿ ನಗರದಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿರುವುದರಿಂದ ಸಾಕಷ್ಟು ಬದಲಾವಣೆಯಾಗಿದೆ. ಕಳೆದ ಸರಕಾರದಲ್ಲಿ ಗುತ್ತಿಗೆ ಕರೆಯಲು, ಅನುದಾನ ನೀಡಲು ಹಿಂದೇಟು ಹಾಕಿದ ಪರಿಣಾಮ ಮಹಾನಗರದಲ್ಲಿ ಶೇ.30 ಕಾಮಗಾರಿಗಳು ಮುಗಿದಿದೆ. ಇಷ್ಟೇ ಕಾಮಗಾರಿಯಿಂದ ನಗರದ ಚಿತ್ರಣ ಬದಲಾಗಿದೆ. ಆದಷ್ಟು ಶೀಘ್ರದಲ್ಲಿ ಉಳಿದ ಕಾಮಗಾರಿಗಳಿಗೆ ಟೆಂಡರ್ ಕರೆಯುವುದು, ಟೆಂಡರ್ ಆಗಿರುವ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವ ಕೆಲಸ ಆರಂಭವಾಗಲಿದೆ. ಈ ಯೋಜನೆಗಳಿಗೆ ಅನುದಾನ ಕೊರತೆಯಾಗದಂತೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಪಿಂಟೋ ರಸ್ತೆಯಿಂದ ಅಂಬೇಶ ಹೋಟೆಲ್ವರೆಗಿನ ಯೋಜನೆಯಲ್ಲಿ ಹೆಚ್ಚುವರಿಯಾಗಿ ಅಶೋಕ ನಗರದ ರೈಲ್ವೆ ಸೇತುವೆಯಿಂದ ಉಪ ಕಾರಾಗೃಹದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರದಲ್ಲಿ ನೀಲಿಜಿನ್ ರಸ್ತೆ ಸೇರಿದಂತೆ ಆಟೋ ಕಾಂಪ್ಲೆಕ್ಸ್‌ನಲ್ಲಿರುವ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿಸಲಾಗುವುದು. ಕೇಶ್ವಾಪುರದಿಂದ ಬೆಂಗೇರಿ- ಗೋಪನಕೊಪ್ಪ- ಉಣಕಲ್ಲ ರಸ್ತೆಯನ್ನು ಸಿಆರ್‌ಎಫ್ ಯೋಜನೆಯಲ್ಲಿ ನಿರ್ಮಿಸಲಾಗುವುದು. ಸಿಆರ್‌ಎಫ್ ಯೋಜನೆ ಎಲ್ಲ ಕಾಮಗಾರಿಗಳು ಶೇ.100 ಪೂರ್ಣಗೊಂಡರೆ ನಗರ ಚಿತ್ರವೇ ಬದಲಾಗಲಿದೆ ಎಂದರು.
Advertisement
ಅಶೋಕ ನಗರದ ರೈಲ್ವೆ ಸೇತುವೆಯಿಂದ ಉಪ ಕಾರಾಗೃಹದವರೆಗೆ ಸಿಆರ್‌ಎಫ್ ಯೋಜನೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ರವಿವಾರ ಚಾಲನೆ ನೀಡಿ ಡಾ| ಡಿ.ಎಸ್.ಕರ್ಕಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಮ್ಮದೇ ಸರಕಾರ ಇರುವುದರಿಂದ ಯಾವುದೇ ಯೋಜನೆಗಳಿಗೆ ಅನುದಾನದ ಕೊರತೆಯಾಗುವುದಿಲ್ಲ. ಹೊಸ ಯೋಜನೆಗಳನ್ನು ತರಲು ಶ್ರಮಿಸಲಾಗುವುದು. ಟ್ರಾಫಿಕ್ ಐಲೆಂಡ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಆದಷ್ಟು ಬೇಗ ಕೇಂದ್ರದಿಂದ ಅನುಮೋದನೆ ಪಡೆಯಲಾಗುವುದು. ಪ್ರಹ್ಲಾದ ಜೋಶಿ ಅವರು ಕೇಂದ್ರ ಸಚಿವರಾಗಿರುವುದಿಂದ ಕೇಂದ್ರದಿಂದ ಅನುದಾನ ಹಾಗೂ ಹೊಸ ಯೋಜನೆಗಳ ಮಂಜೂರಾತಿಗೆ ಸಮಸ್ಯೆಯಾಗುವುದಿಲ್ಲ. ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಇ ಎನ್.ಎಂ. ಕುಲಕರ್ಣಿ, ಕೃಷ್ಣಾರೆಡ್ಡಿ, ಮುಖಂಡರಾದ ಸಿದ್ದು ಮೊಗಲಿಶೆಟ್ಟರ ಇನ್ನಿತರರಿದ್ದರು.
‘ನೀವು ಡಿಸಿಎಂ ಆಗಬೇಕು, ನಗರಾಭಿವೃದ್ಧಿಗೆ ಸಹಕಾರಿ ಆಗುತ್ತೆ’
ಜನರನ್ನುದ್ದೇಶಿಸಿ ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡುತ್ತಿದ್ದ ವೇಳೆ ನಾಗರಿಕರೊಬ್ಬರು ಎದ್ದು ನಿಂತು, ನೀವು ಮುಖ್ಯಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೀರಿ. ಇದೀಗ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವುದರಿಂದ ನೀವು ಉಪ ಮುಖ್ಯಮಂತ್ರಿಯಾಗಬೇಕು. ಇದರಿಂದ ಮಹಾನಗರದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಯಾರಿಗೆ ಬೇಕಾದರೂ ಮನವಿ ಸಲ್ಲಿಸಲು ಸಿದ್ಧರಿದ್ದೇವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ, ಯಾವುದೇ ಮನವಿ ಸಲ್ಲಿಸುವುದು ಬೇಡ. ಏನು ಆಗಬೇಕೋ ಅದು ಆಗುತ್ತದೆ ಎಂದರು.