ಮುಂಬೈ : ಪ್ರಸ್ತುತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಫ್ ಲೈನ್ ಬೋರ್ಡ್ ಪರೀಕ್ಷೆ ನಡೆಸುತ್ತಿರುವುದಕ್ಕೆ ಚಲನಚಿತ್ರ ನಟ ಸೋನು ಸೂದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿರುವ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.
ದೇಶದಲ್ಲಿ ಸದ್ಯ ಎರಡನೇ ಹಂತದ ಕೋವಿಡ್ ಅಲೆ ವ್ಯಾಪಕವಾಗಿ ಹಬ್ಬುತ್ತಿದೆ. ದಿನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಕಠಿಣ ಸಂದರ್ಭದಲ್ಲಿ ಸಿಬಿಎಸ್‍ಸಿ ಹಾಗೂ ಬೋರ್ಡ್ ಎಕ್ಸಾಂಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಆಫ್‍ಲೈನ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಿಲ್ಲ ಎನ್ನುವುದು ನನ್ನ ಅಭಿಮತ ಎಂದಿದ್ದಾರೆ ಸೋನು.
ಕೆಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ನಾಗಾಲೋಟ ಶುರುವಾಗಿದೆ. ಅದಗ್ಯೂ ನಾವು ಪರೀಕ್ಷೆ ನಡೆಸುವುದರ ಬಗ್ಗೆ ಯೋಚನೆ ನಡೆಸುತ್ತಿದ್ದೇವೆ. ನನ್ನ ಪ್ರಕಾರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಇದು ಸಕಾಲವಲ್ಲ. ಆಫ್‍ಲೈನ್ ಪರೀಕ್ಷೆ ಬದಲಿಗೆ ಆಂತರಿಕ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಪ್ರಮೋಟ್ ಮಾಡಬೇಕೆನ್ನುವುದು ನನ್ನ ಅನಿಸಿಕೆ ಎಂದಿದ್ದಾರೆ.
ಇನ್ನು ತಮ್ಮ ವಿಡಿಯೋದಲ್ಲಿ ಪರೀಕ್ಷೆ ನಡೆಸುವ ಕ್ರಮವನ್ನು ಬಲವಾಗಿ ಖಂಡಿಸಿರುವ ಸೋನು ಸೂದ್, ಎಲ್ಲರೂ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಜೀವನ ಅಪಾಯಕ್ಕೊಡ್ಡುವ ಬದಲು ಆಂತರಿಕ ಮೌಲ್ಯಮಾಪನ ಉತ್ತಮ ಪರಿಹಾರ ಎಂದು ಸೋನು ಸೂದ್ ಹೇಳಿದ್ದಾರೆ.