ಮುಂಬೈ:ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಬಾಂಗ್ (ಆಝಾನ್) ಹಾಕಿ ಪ್ರಾರ್ಥನೆ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕ ಸೋನು ನಿಗಮ್ ಸೋಮವಾರ ಬೆಳಗ್ಗೆ ಮಾಡಿರುವ ಟ್ವೀಟ್ ದೊಡ್ಡ ಚರ್ಚೆ ಹಾಗೂ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಮಸೀದಿಯಲ್ಲಿನ ಆಝಾನ್ ಅಥವಾ ಪ್ರಾರ್ಥನೆ ಕರೆಯ ಬಗ್ಗೆ ಟೀಕಿಸಿ ಸೋನು ನಿಗಮ್(43) ಟ್ವೀಟ್ ಮಾಡಿದ್ದರು. ಧ್ವನಿವರ್ಧಕದ ಮೂಲಕ ಬಾಂಗ್ ಹಾಕುವುದನ್ನು ವಿರೋಧಿಸಿರುವ ಸೋನು ನಿಗಮ್ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲ ದೇವಸ್ಥಾನ, ಗುರುದ್ವಾರಗಳಲ್ಲಿಯೂ ಕೂಡಾ ಧ್ವನಿ ವರ್ಧಕ ಬಳಸಿ ಮಾಡುವ ಪ್ರಾರ್ಥನೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಲ್ಲರಿಗೂ ದೇವರು ಒಳ್ಳೇದು ಮಾಡಲಿ, ನಾನೇನು ಮುಸ್ಲಿಮನಲ್ಲ ಮತ್ತು ಬೆಳ್ಳಂಬೆಳಗ್ಗೆಯ ಆಝಾನ್ ಗೆ (ಪ್ರಾರ್ಥನೆ) ಕರೆಗೆ ಯಾಕೆ ಏಳಬೇಕು?. ಭಾರತದಲ್ಲಿನ ಇಂತಹ ಬಲವಂತದ ಧಾರ್ಮಿಕ ಮೌಢ್ಯತೆ ಯಾವಾಗ ಕೊನೆಗೊಳ್ಳಲಿದೆ ಎಂದು ಸೋನು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಕಾಲದಲ್ಲಿ ವಿದ್ಯುತ್ ಆವಿಷ್ಕಾರವಾಗಿಲ್ಲವಾಗಿತ್ತು. ಆ ಕಾಲಕ್ಕೆ ಜನರನ್ನು ಪ್ರಾರ್ಥನೆಗಾಗಿ ಎಬ್ಬಿಸಲು ಆಝಾನ್ ಪದ್ಧತಿ ಜಾರಿಗೆ ತಂದಿದ್ದರು. ಆದರೆ ಥಾಮಸ್ ಆಲ್ವಾ ಎಡಿಶನ್ ಆವಿಷ್ಕಾರದ ಮೂಲಕ ವಿದ್ಯುತ್ ದೀಪ ಕಂಡು ಹಿಡಿದ ಮೇಲೆಯೂ ಈ ಪದ್ಧತಿ ಮುಂದುವರಿಸುವುದು ಎಷ್ಟು ಸೂಕ್ತ ಎಂಬುದು ಸೋನು ನಿಗಮ್ ಪ್ರಶ್ನೆ. ಇದು ನಿಜಕ್ಕೂ ಗೂಂಡಾಗಿರಿಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸೋನು ನಿಗಮ್ ಟ್ವೀಟ್ ಭರ್ಜರಿ ರೀ ಟ್ವೀಟ್ ಆಗಿದ್ದು, ಹಲವಾರು ಮಂದಿ ಸೋನು ನಿಗಮ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ಭಾರತ ವೈವಿಧ್ಯತೆ ಹೊಂದಿರುವ ದೇಶವಾಗಿದೆ. ಮೊದಲು ಧರ್ಮವನ್ನು ಗೌರವಿಸುವುದನ್ನು ಕಲಿಯಿರಿ ಎಂದು ತಿರುಗೇಟು ನೀಡಿದ್ದಾರೆ.