ಹೊಸಪೇಟೆ: ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಸ್ವತಃ ತಮ್ಮ ಮಗನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದೆ, ಉಭಯ ಸಂಕಟಕ್ಕೆ ಸಿಲುಕಿದ್ದಾರೆ. ಮದುವೆಯ ಪೂರ್ವ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಗದ್ದಕ್ಕೆ ಚುನಾವಣೆ ಪ್ರಚಾರದ ವೇಳೆ ಕಣ್ಣೀರು ಹಾಕಿದ್ದಾರೆ.
ಆನಂದ ಸಿಂಗ್ ಪುತ್ರ ಸಿದ್ಧಾರ್ಥ ಮದುವೆ ಡಿ.1ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೂರ್ವ ಸಿದ್ಧತೆ ಶುರುವಾಗಿದೆ. ಮಂಗಳವಾರ ಮದುವೆ ಶಾಸ್ತ್ರದ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಆನಂದ್ ಸಿಂಗ್ ಪಾಲ್ಗೊಂಡಿಲ್ಲ. ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಆನಂದ್ ಸಿಂಗ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿದರಲ್ಲದೆ, ಇರುವ ಒಬ್ಬ ಮಗನ ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ ಎಂದು ಭಾವುಕರಾದರು.
ಕಳೆದೊಂದು ವಾರದಿಂದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಸಿಂಗ್ ಬುಧವಾರ ಹೊಸಪೇಟೆಯ ಹೊಸೂರು ಗ್ರಾಮದಲ್ಲಿ ಪ್ರಚಾರ ನಡೆಸಿ ನಂತರ ಮಾಧ್ಯಮಗಳಿಗೆ ಮಾತನಾಡುವ ವೇಳೆ ಕಣ್ಣೀರು ಹಾಕಿದರು. ಆನಂದ್ ಸಿಂಗ್, ನಗರದಲ್ಲಿ ನಿರ್ಮಿಸಿದ ಹೊಸ ಬಂಗಲೆಯಲ್ಲಿ ನಡೆಯುವ ಅದ್ಧೂರಿ ಮದುವೆಯಲ್ಲಿ ಬಂದವರಿಗೆಲ್ಲ ಬಂಗಾರದ ನಾಣ್ಯ ಕೊಡುಗೆಯಾಗಿ ನೀಡುತ್ತಾರೆಂದು ಕಾಂಗ್ರೆಸ್ ಗಂಭೀರ ವಾಗಿ ಆರೋಪಿಸಿದ್ದು,
ಇದು ಆನಂದ್ ಸಿಂಗ್ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಮದುವೆಯ ಪ್ರತಿಯೊಂದು ವೆಚ್ಚವೂ ಚುನಾವಣೆ ಖರ್ಚಿಗೆ ಸೇರ್ಪಡೆಯಾಗುವಂತೆ ಆದೇಶಿಸಲು ಚುನಾವಣೆ ಆಯೋಗಕ್ಕೆ ನೀಡಿದ ದೂರಿನಲ್ಲಿ ಒತ್ತಾಯಿಸಿದೆ. ಈ ಕುರಿತು ವಿಜಯನಗರ ಕ್ಷೇತ್ರದ ಚುನಾವಣೆ ಕಾಂಗ್ರೆಸ್ ಉಸ್ತುವಾರಿ, ಮಾಜಿ ಸಚಿವ ಬಸವರಾಜ್ ರಾಯರಡ್ಡಿ ಆಯೋಗಕ್ಕೆ ದೂರು ನೀಡಿರುವುದನ್ನು ಬಹಿರಂಗಪಡಿಸಿದ್ದಾರೆ.
ಮಗನ ಮದುವೆ ಕಾರ್ಯದ ಬಗ್ಗೆ ಚುನಾವಣೆ ಆಯೋಗದಿಂದ ಈಗಾಗಲೇ ಪರವಾನಗಿ ಪಡೆಯಲಾ ಗಿದೆ. ಆಯೋಗ ಮತ್ತಷ್ಟು ಮಾಹಿತಿ ಕೇಳಿದೆ. ಮದುವೆಯ ಪ್ರತಿಯೊಂದು ವಿವರ ನೀಡಲಾಗಿದೆ. ಅಲ್ಲದೆ ಮದುವೆಗೆ ಆಗಮಿಸುವ ಅತಿಥಿಗಳಿಗೆ ಉಡುಗೊರೆ ನೀಡುತ್ತಿಲ್ಲ.
-ಆನಂದ ಸಿಂಗ್, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ