ಮಂಗಳೂರು:ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳದಿಂದ ನಾನಾಗಲಿ, ನನ್ನ ಮಗ ಹರ್ಷ ಮೊಯ್ಲಿ ಅವರೂ ಸ್ಪರ್ಧಿಸುವುದಿಲ್ಲ. ಪಕ್ಷದ ಒಳ್ಳೆಯ ಕಾರ್ಯಕರ್ತರಿಗೆ ಸೀಟ್ ನೀಡಲಾಗುತ್ತದೆ. ಈ ಚುನಾವಣೆಯಲ್ಲಿ ಹರ್ಷ ಮೊಯ್ಲಿ ಅವರು ಕಾರ್ಕಳ ಮಾತ್ರವಲ್ಲ, ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಾ| ಎಂ. ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.
ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ. ಹಿಮಾಚಲ ಪ್ರದೇಶದಲ್ಲಿ ನಡೆದಂತೆ ತಾಳ್ಮೆ, ಒಳ್ಳೆಯ ಪ್ರಚಾರ ನಡೆಸಿದರೆ ಗೆಲುವು ಶತಸಿದ್ಧ ಎಂದರು.
ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಅಮುಲ್ ಜತೆ ನಂದಿನಿ ವಿಲೀನ ಅವಿವೇಕದ ಹೆಜ್ಜೆಯಾಗಿದ್ದು, ಈ ಮೂಲಕ ಸಹಕಾರಿ ವ್ಯವಸ್ಥೆಯನ್ನು ಅಭದ್ರಗೊಳಿಸಿ ಅದಕ್ಕೆ ತಿಲಾಂಜಲಿ ನೀಡಲು ಕೇಂದ್ರ ಮುಂದಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅರಿವಿಲ್ಲ. ಅವರ ಈ ಹೆಜ್ಜೆ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದರು.
ಇದನ್ನೂ ಓದಿ : ಅಮೂಲ್ – ಕೆಎಂಎಫ್ ವಿಲೀನ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ಮುಖಂಡರಾದ ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ, ನೀರಜ್ ಪಾಲ್, ಶಾಲೆಟ್ ಪಿಂಟೊ, ಭರತ್ ಮುಂಡೋಡಿ, ನಝೀರ್ ಬಜಾಲ್ ಮತ್ತಿತರರಿದ್ದರು.