ಚಂಡೀಗಢ : ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆ ಪಾಸು ಮಾಡಿಕೊಳ್ಳುವುದಕ್ಕೆ ತಾನು ನೆರವಾಗುವುದಾಗಿ ತನ್ನ ಶಾಲೆಯ 16ರ ಹರೆಯದ ವಿದ್ಯಾರ್ಥಿನಿಗೆ ಭರವಸೆ ನೀಡಿದ ಶಾಲಾ ಮಾಲಕ ಹಾಗೂ ಪ್ರಾಂಶುಪಾಲ, ವಿದ್ಯಾರ್ಥಿನಿಯ ಪರವಾಗಿ ದೈಹಿಕ ಶಿಕ್ಷಣ ಪರೀಕ್ಷೆ ಬರೆಯಲು ಡಮ್ಮಿ ವಿದ್ಯಾರ್ಥಿಯನ್ನು ಕುಳ್ಳಿರಿಸಿ ತಾನು ಸಮೀಪದ ಮನೆಯೊಂದರಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. ಈ ಶಾಲೆಯು ಚಂಡೀಗಢದ ಸೋನಿಪತ್ ನ ಗೊಹಾನಾ ಪಟ್ಟಣದ ಹೊರವಲಯದಲ್ಲಿದೆ.
ಪೊಲೀಸ್ ಅಧಿಕಾರಿಗಳು ಆರೋಪಿ ಪ್ರಾಂಶುಪಾಲ ಮತ್ತು ಶಾಲೆಯ ಇನ್ನಿಬ್ಬರು ಮಹಿಳಾ ಸಿಬಂದಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯಡಿ (Pocso) ಕೇಸು ದಾಖಲಿಸಿಕೊಂಡು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಆದರೆ ಆರೋಪಿ ಪ್ರಾಂಶುಪಾಲ ಮತ್ತು ಆತನಿಗೆ ಸಹಕರಿಸಿದ ಇಬ್ಬರು ಮಹಿಳಾ ಸಿಬಂದಿ ಈ ಅತ್ಯಾಚಾರದ ಘಟನೆ ನಡೆದ ಮಂಗಳವಾರ ರಾತ್ರಿಯ ಬಳಿಕ ತಲೆಮರೆಸಿಕೊಂಡಿದ್ದಾರೆ.
ಅತ್ಯಾಚಾರಕ್ಕೆ ಗುರಿಯಾದ ವಿದ್ಯಾರ್ಥಿನಿಯ ತಂದೆ ಕೊಟ್ಟ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿಗೆ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಪಾಸು ಮಾಡಿಕೊಳ್ಳುವುದಕ್ಕಾಗಿ ಆರೋಪಿ ಪ್ರಾಂಶುಪಾಲನನಿಗೆ 10,000 ರೂ. ಕೊಡಲು ಸಿದ್ಧನಾಗಿದ್ದ ಎಂಬ ವಿಷಯವೂ ತನಿಖೆಯಿಂದ ಗೊತ್ತಾಗಿದೆ.
ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿನಿಯನ್ನು ಶಾಲೆಯ ಸಮೀಪದ ಮನೆಯಿಂದ ಒಯ್ಯಲು ಬರುವಂತೆ ಪ್ರಾಂಶುಪಾಲ ಆಕೆಯ ತಂದೆಗೆ ಹೇಳಿದ್ದ. ಆ ಪ್ರಕಾರ ಸಂಜೆ ಮಗಳನ್ನು ಕರೆದೊಯ್ಯಲು ಆ ಮನೆಗೆ ಹೋಗಿದ್ದಾಗ ಆಕೆ ತನ್ನಮೇಲೆ ಪ್ರಾಂಶುಪಾಲನು ಅತ್ಯಾಚಾರ ನಡೆಸಿದನೆಂದು ತಂದೆಗೆ ತಿಳಿಸಿದಳು ಎಂದು ಪೊಲೀಸರು ಹೇಳಿದ್ದಾರೆ.