ನವದೆಹಲಿ: ವಿರೋಧ ಪಕ್ಷಗಳಿಗೆ ಯಾವುದೇ ಮಾಹಿತಿ ನೀಡದೆ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 18-22 ರಂದು ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದ ಕಾರ್ಯಸೂಚಿಯನ್ನು ಕೋರಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಒಂಬತ್ತು ಪ್ರಮುಖ ವಿಷಯಗಳನ್ನು ಪಟ್ಟಿ ಮಾಡಿದ್ದು ಮುಂಬರುವ ವಿಶೇಷ ಅಧಿವೇಶನದಲ್ಲಿ ಅವುಗಳ ಬಗ್ಗೆ ಚರ್ಚೆಗೆ ಸಮಯಾವಕಾಶ ನೀಡಬೇಕು ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
ಸೋನಿಯಾ ಗಾಂಧಿ ಬರೆದಿರುವ ಪತ್ರದಲ್ಲಿ “ಸೆಪ್ಟೆಂಬರ್ 18 ರಿಂದ ನೀವು ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವನ್ನು ಕರೆದಿದ್ದೀರಿ ಆದರೆ ಈ ಅಧಿವೇಶನದ ಪ್ರಮುಖ ಅಜೆಂಡಾ ಏನೆಂದು ವಿರೋಧ ಪಕ್ಷಗಳಿಗೆ ಮಾಹಿತಿ ಇಲ್ಲ, ಹಾಗಾಗಿ ನಾವು ಕೆಲವೊಂದು ಪ್ರಮುಖ ವಿಚಾರಗಳನ್ನು ಪಟ್ಟಿ ಮಾಡಿದ್ದು ವಿಶೇಷ ಅಧಿವೇಶನದ ಅವಧಿಯಲ್ಲಿ ಈ ವಿಚಾರಗಳ ಚರ್ಚೆಗೂ ಅವಕಾಶ ನೀಡುವಂತೆ ಕೋರಿಕೊಂಡಿದ್ದಾರೆ.
ಚರ್ಚೆಗೆ ಸಂಬಂಧಿಸಿದಂತೆ ಒಂಬತ್ತು ವಿಷಯಗಳನ್ನು ಪಟ್ಟಿ ಮಾಡಿದ್ದು “ಈ ವಿಷಯಗಳ ಬಗ್ಗೆ ಚರ್ಚೆ ಮತ್ತು ಚರ್ಚೆಗೆ ಸೂಕ್ತ ನಿಯಮಗಳ ಅಡಿಯಲ್ಲಿ ಸಮಯವನ್ನು ನಿಗದಿಪಡಿಸುವಿರೆಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪ್ರಸ್ತುತ ಆರ್ಥಿಕ ಪರಿಸ್ಥಿತಿಯು ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಅಸಮಾನತೆಗಳ ಏರಿಕೆ, ಅದಾನಿ ವಿಷಯ ಸಂಬಂಧ ಜಂಟಿ ಸಂಸದೀಯ ಸಮಿತಿ ರಚನೆ, ಮಣಿಪುರ ಗಲಭೆ, ಹರಿಯಾಣ ಗಲಭೆ, ಚೀನಾ ಅತಿಕ್ರಮಣ ಮುಂತಾದ ವಿಷಯಗಳ ಬಗ್ಗೆ ಚರ್ಚೆಗೆ ಸಮಯಾವಕಾಶ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Udhayanidhi ವಿವಾದಾತ್ಮಕ ಹೇಳಿಕೆಗೆ ತಕ್ಕ ಉತ್ತರ ನೀಡಬೇಕು: ಸಚಿವರಿಗೆ ಪ್ರಧಾನಿ ಮೋದಿ