ವಾರ್ಧಾ : ಗಾಂಧಿ ಜಯಂತಿಯ ಈ ದಿನದಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಕೆಯ ಪುತ್ರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿನ ಸೇವಾಗ್ರಾಮದಲ್ಲಿ ಮಧ್ಯಾಹ್ನ ಭೋಜನ ಸ್ವೀಕರಿಸಿದ ಬಳಿಕ ತಾವು ಊಟ ಮಾಡಿದ ತಟ್ಟೆಯನ್ನು ತಾವೇ ತೊಳೆದು ಸ್ವಸಹಾಯ ತತ್ವಕ್ಕೆ ನಿದರ್ಶನ ತೋರಿದರು.
ಮಹಾತ್ಮ ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ಸೇವಾಗ್ರಾಮದಲ್ಲಿನ ಆಶ್ರಮದಲ್ಲಿ ಇಂದು ಮಂಗಳವಾರ ನಡೆದ ಪ್ರಾರ್ಥನಾ ಸಭೆಯಲ್ಲಿ ಸೋನಿಯಾ ಮತ್ತು ರಾಹುಲ್ ಭಾಗಿಯಾದರು.
ಇವರೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಕ್ರಿಯಾ ಸಮಿತಿಯ ಸದಸ್ಯರು ಕೂಡ ಭಾಗಿಯಾದರು. ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತದ ಕೊನೆಯ ವರ್ಷಗಳನ್ನು ಕಳೆದ “ಬಾಪು ಕುಟೀರ” ದಲ್ಲಿ ಪ್ರಾರ್ಥನಾ ಸಭೆ ನಡೆದಿತ್ತು.
1986ರಲ್ಲಿ ಇದೇ ಸೇವಾಗ್ರಾಮದಲ್ಲಿ ತನ್ನ ತಂದೆ ರಾಜೀವ್ ಗಾಂಧಿ ಅವರು ನೆಟ್ಟಿದ್ದ ವೃಕ್ಷಕ್ಕೆ ಸಮೀಪವೇ ರಾಹುಲ್ ಗಾಂಧಿ ಅವರಿಂದು ಸಸಿಯೊಂದನ್ನು ನೆಟ್ಟರು.
ರಾಹುಲ್ ಸೇವಾಗ್ರಾಮಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಈ ಹಿಂದೆ 2014ರ ಜನವರಿ 24ರಂದು ಇಲ್ಲಿಗೆ ಮೊದಲ ಭೇಟಿ ನೀಡಿದ್ದ ಸಂದರ್ಭದಲ್ಲೂ ರಾಹುಲ್ ಸಸಿಯೊಂದನ್ನು ನೆಟ್ಟಿದ್ದರು.