Advertisement

ಮತ್ತೆ ಗಾಂಧಿಗಿರಿ

08:42 AM Aug 12, 2019 | Team Udayavani |

ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ಸ್ಥಾನದ ಸಂಬಂಧ ಉಂಟಾಗಿದ್ದ ಗೊಂದಲಕ್ಕೆ ತಾತ್ಕಾಲಿಕ ತೆರೆಬಿದ್ದಿದ್ದು, ಸೋನಿಯಾ ಗಾಂಧಿ ಅವರೇ ಮಧ್ಯಾಂತರ ಅಧ್ಯಕ್ಷರಾಗಲಿ ದ್ದಾರೆ. ಈ ಮೂಲಕ ಮತ್ತೆ ಗಾಂಧಿ ಕುಟುಂಬವೇ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ.

Advertisement

ಸೋನಿಯಾ ಗಾಂಧಿ ಮುಂದಿನ ಅಧ್ಯಕ್ಷರ ನೇಮಕವಾಗುವವರೆಗೆ ಮಧ್ಯಾಂತರ ಹೊಣೆ ಹೊತ್ತಿರುತ್ತಾರೆ. ಶನಿವಾರವಿಡೀ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾತ್ರಿಯವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗಿರ ಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಮಧ್ಯಾಂತರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಉಪಸ್ಥಿತರಿರಲು ಸಾಧ್ಯವಿಲ್ಲ ಎಂದು ಹೇಳಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೊರಗೆ ಹೋಗಿದ್ದರು. ರಾತ್ರಿ 9 ಗಂಟೆ ವೇಳೆಗೆ ಮತ್ತೆ ಈ ಇಬ್ಬರೂ ನಾಯಕರು ಸಿಡಬ್ಲೂéಸಿ ಸಭೆಗೆ ವಾಪಸ್‌ ಬಂದಿದ್ದರು.

ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ರಾಹುಲ್‌ ಗಾಂಧಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಸೋನಿಯಾ ಅವರನ್ನು ಮಧ್ಯಾಂತರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಗ್ಗೆ ಪಕ್ಷದ ನಾಯಕರಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್‌ ಸುಜೇìವಾಲಾ ರಾತ್ರಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಿದರು.

ಮೂಡದ ಒಮ್ಮತ
ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಯಾವುದೇ ಕಾರಣಕ್ಕೂ ಗಾಂಧಿ ಕುಟುಂಬದ ಯಾರೂ ವಹಿಸಿಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದ ಹಿನ್ನೆಲೆಯಲ್ಲಿ ಮೇ ತಿಂಗಳಿಂದ ಇಲ್ಲಿಯವರೆಗೆ ಹೊಸ ಅಧ್ಯಕ್ಷರಿಗಾಗಿ ಹುಡುಕಾಟ ನಡೆದೇ ಇತ್ತು. ಆದರೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಐದು ಗುಂಪುಗಳಾಗಿ ವಿಂಗಡಣೆ
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಅಹ್ಮದ್‌ ಪಟೇಲ್, ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್‌ ಮತ್ತು ಪಿ. ಚಿದಂಬರಂ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಈಶಾನ್ಯ ವಲಯಗಳ ಕಾಂಗ್ರೆಸ್‌ ನಾಯಕರ ಸಲಹೆಗಳನ್ನು ತಿಳಿಯಲು ನಿರ್ಧರಿಸಲಾಯಿತು. ಅದಕ್ಕೆ ಪೂರಕವಾಗಿ, ಸಿಡಬ್ಲ್ಯುಸಿ ಸದಸ್ಯರನ್ನು 5 ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಮಧ್ಯಾಂತರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಿಂದ ರಾಹುಲ್ ಮತ್ತು ಸೋನಿಯಾ ದೂರ ಉಳಿದರೂ ಪ್ರಿಯಾಂಕಾ ವಾದ್ರಾ ಭಾಗಿಯಾಗಿದ್ದರು. ರಾತ್ರಿ 8 ಗಂಟೆ ವೇಳೆಗೆ ಮತ್ತೂಮ್ಮೆ ಸಭೆ ಸೇರಿದಾಗ ಈ ಎಲ್ಲ ಗುಂಪುಗಳು ರಾಹುಲ್ ಅವರೇ ಮುಂದುವರಿಯಬೇಕು ಎಂಬ ಅಭಿಪ್ರಾಯ ಮಂಡಿಸಿದವು. ಆದರೆ ರಾಹುಲ್ ಒಪ್ಪಲಿಲ್ಲ.

Advertisement

ಸಿಡಬ್ಲ್ಯುಸಿ
ಸಭೆಯಲ್ಲಿ 3 ನಿರ್ಣಯ
1. ರಾಹುಲ್‌ ಗಾಂಧಿ ಅವರು ಪಕ್ಷವನ್ನು ಇಷ್ಟು ದಿನ ಮುನ್ನಡೆಸಿದ್ದಕ್ಕೆ ಧನ್ಯವಾದ ಅರ್ಪಣೆ
2. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರು, ಕಾಂಗ್ರೆಸ್‌ ಶಾಸಕಾಂಗ ಪಕ್ಷಗಳ ನಾಯಕರು, ಪಕ್ಷದ ಪ್ರಧಾನ ಕಾರ್ಯ ದರ್ಶಿಗಳು ಮತ್ತು ಸಂಸತ್‌ ಸದಸ್ಯರ ಅಭಿಪ್ರಾಯದಂತೆ ರಾಹುಲ್‌ ಗಾಂಧಿ ಅವರೇ ಅಧ್ಯಕ್ಷರಾಗಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ರಾಹುಲ್‌ರಿಂದ ತಿರಸ್ಕಾರ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವವರೆಗೆ ಸೋನಿಯಾ ಗಾಂಧಿ ಅವರೇ ಮಧ್ಯಾಂತರ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಕೈಗೊಂಡ ನಿರ್ಣಯಕ್ಕೆ ಸೋನಿಯಾ ಒಪ್ಪಿಗೆ.
3. ಜಮ್ಮು- ಕಾಶ್ಮೀರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತೀವ್ರ ಕಳವಳ. ಅಲ್ಲಿನ ನಾಯಕರ ಬಂಧನಕ್ಕೆ ತೀವ್ರ ಖಂಡನೆ.

Advertisement

Udayavani is now on Telegram. Click here to join our channel and stay updated with the latest news.

Next