Advertisement

ಮಸೂದೆಗೆ ಮುನ್ನೂರು ಅಡ್ಡಿ

06:59 AM Aug 11, 2018 | Team Udayavani |

ಹೊಸದಿಲ್ಲಿ: ತ್ರಿವಳಿ ತಲಾಖ್‌ ನಿಷೇಧಿಸುವ ಮಸೂದೆಗೆ ಮಳೆಗಾಲದ ಅಧಿವೇಶನದಲ್ಲೂ ಅಡ್ಡಿಯುಂಟಾಗಿದ್ದು, ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಪಕ್ಷಗಳಲ್ಲಿ ಒಮ್ಮತ ಮೂಡದ್ದರಿಂದ ಮಸೂದೆ ಮಂಡಿಸದಿರಲು ಸರಕಾರ ತೀರ್ಮಾನಿಸಿತು. ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಆಕ್ಷೇಪಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಲಾಗಿತ್ತಾದರೂ, ಮಸೂದೆಯನ್ನು ರಾಜ್ಯಸಭೆ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿಯಿತು. ಅಲ್ಲದೆ ಈ ಮಸೂದೆ ಮಂಡಿಸುವುದಕ್ಕೆ ಅವಕಾಶವಾಗದಂತೆ ರಫೇಲ್‌ ಡೀಲ್‌ ವಿಚಾರವನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ತೀವ್ರ ಗದ್ದಲ ಉಂಟುಮಾಡಿತು. 

Advertisement

ತ್ರಿವಳಿ ತಲಾಖ್‌ ಪ್ರಕರಣದಲ್ಲಿ ಪತಿ ಪರಿಹಾರ ನೀಡಲು ಸಮ್ಮತಿಸಿದರೆ ಜಾಮೀನು ನೀಡುವ ಸಂಬಂಧ ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ 2017 ಕ್ಕೆ ಗುರುವಾರ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಈ ಮಸೂದೆ ರಾಜ್ಯಸಭೆ ಯಲ್ಲಿ ಅನುಮೋದನೆ ಪಡೆದ ನಂತರ, ಪುನಃ ಲೋಕಸಭೆಯಲ್ಲಿ ಮಂಡಿಸುವ ಅಗತ್ಯ ಉಂಟಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿತ್ತು.

ರಫೇಲ್‌ ವಿಮಾನ ನಾನೇ ತಯಾರಿಸುತ್ತೇನೆ!: ನಾನೇ ರಫೇಲ್‌ ಯುದ್ಧವಿಮಾನವನ್ನು ಇನ್ನೂ ಚೆನ್ನಾಗಿ ತಯಾರಿಸು ತ್ತೇನೆ. ನನಗೇ ಗುತ್ತಿಗೆ ನೀಡಿ ಎಂದು ಕಾಂಗ್ರೆಸ್‌ ಸಂಸದ ರಾಜೇಶ್‌ ಜಖಾರ್‌ ವ್ಯಂಗ್ಯ ವಾಗಿ ಹೇಳಿದ್ದಾರೆ. ಶೂನ್ಯ ವೇಳೆ ಯಲ್ಲಿ ಮಾತನಾಡಿದ ರಾಜೇಶ್‌, ಕಾಗದದಲ್ಲಿ ತಯಾರಿ ಸಿದ ವಿಮಾನ ತೋರಿಸುತ್ತಾ, ರಫೇಲ್‌ ಯುದ್ಧ ವಿಮಾನದ ಪ್ರತಿ ಕೃತಿ ಯನ್ನು ಸದನದಲ್ಲಿ ಪ್ರದರ್ಶಿಸಲು ನಾನು ಅವಕಾಶ ಕೋರು ತ್ತೇನೆ. ಯುದ್ಧವಿಮಾನ ತಯಾರಿಕೆಯಲ್ಲಿ ನನಗೆ ಸ್ವಲ್ಪವೂ ಅನುಭವವಿಲ್ಲ. ಆದರೆ ಉತ್ತಮ ವಿಮಾನ ತಯಾರಿಸ ಬಲ್ಲೆ. ನಿನ್ನೆಯಿಂದ ಪ್ರಯತ್ನಿಸುತ್ತಾ ಇದ್ದೇನೆ ಎಂದು ಹೇಳಿದ್ದಾರೆ.

ಮೋದಿ ಪ್ರಸ್ತಾಪಿಸಿದ ಪದಗಳನ್ನು ಕಡತದಿಂದ ತೆಗೆದು ಹಾಕಿದ ಸಭಾಪತಿ: ಗುರುವಾರ ರಾಜ್ಯಸಭೆ ಉಪಸಭಾಪತಿ ಚುನಾವಣೆ ಬಳಿಕ ಹರಿವಂಶ್‌ಗೆ ಅಭಿನಂದಿಸುವ ವೇಳೆ ಪ್ರಧಾನಿ ಮೋದಿ, ವಿಪಕ್ಷದ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಕುರಿತು ಮಾತನಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಸಭಾಪತಿ ವೆಂಕಯ್ಯ ನಾಯ್ಡು ಕಡತದಿಂದ ತೆಗೆದುಹಾಕಿದ್ದಾರೆ. ಪ್ರಧಾನಿ ಮಾತುಗಳನ್ನು ಕಡತದಿಂದ ತೆಗೆದುಹಾಕುವುದು ಅಪರೂಪದ ಪ್ರಕರಣವಾಗಿದ್ದು, ಕಾಂಗ್ರೆಸ್‌ನ ಕೆಲವು ಸಂಸದರು ಮೋದಿ ಹೇಳಿಕೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ರಫೇಲ್‌ ಡೀಲ್‌: ಪ್ರತಿಭಟನೆ
ರಫೇಲ್‌ ಡೀಲ್‌ಗೆ ಸಂಬಂಧಿಸಿ ಶುಕ್ರವಾರ ಸಂಸತ್‌ ಭವನದ ಗಾಂಧಿ ಪ್ರತಿಮೆ ಎದುರು ತೀವ್ರ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಹಾಗೂ ವಿಪಕ್ಷಗಳ ಸಂಸದರು, ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಇದಕ್ಕೂ ಮುನ್ನ ಎರಡೂ ಸದನಗಳಲ್ಲಿ ಕಾಂಗ್ರೆಸ್‌ ಗದ್ದಲ ಎಬ್ಬಿಸಿದ ಕಾರಣ ಬೆಳಗಿನ ಕಲಾಪವನ್ನು ಎರಡು ಬಾರಿ ಮುಂದೂಡುವಂತಾಗಿತ್ತು. ಅಷ್ಟೇ ಅಲ್ಲ, ಮೋದಿಯ ರಫೇಲ್‌ ಗೇಟ್‌ ಹಾಗೂ ಜೆಪಿಸಿ ಸೆಟಪ್‌ ಮಾಡಿ ಎಂದು ಘೋಷಣೆ ಕೂಗುತ್ತಾ ಕಾಂಗ್ರೆಸ್‌ ಸಂಸದರು ಉಭಯ ಸದನಗಳಿಂದ ಸಭಾತ್ಯಾಗವನ್ನೂ ಮಾಡಿದ್ದರು.

Advertisement

2000 ನಂತರದಲ್ಲೇ ಹೆಚ್ಚು ಫ‌ಲ ನೀಡಿದ ಅಧಿವೇಶನ
ಶುಕ್ರವಾರ ಕೊನೆಗೊಂಡ ಸಂಸತ್ತಿನ ಮಳೆಗಾಲದ ಅಧಿವೇಶನ 2000ನೇ ಇಸ್ವಿಯ ನಂತರದಲ್ಲೇ ಅತಿ ಹೆಚ್ಚು ಫ‌ಲ ನೀಡಿದ ಅಧಿವೇಶನ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ ಸಂಸ್ಥೆ ಹೇಳಿದೆ. 17 ದಿನಗಳ ಅಧಿವೇಶನದಲ್ಲಿ 20 ಮಸೂದೆ ಮಂಡಿಸಲಾಗಿದ್ದು, 12 ಮಸೂದೆಗಳು ಲೋಕಸಭೆಯಲ್ಲಿ ಅನುಮೋದನೆಗೊಂ ಡಿವೆ. ಲೋಕಸಭೆಯು ಶೇ. 110ರಷ್ಟು ಸಮಯ ಹಾಗೂ ರಾಜ್ಯಸಭೆಯು ಶೇ. 66ರಷ್ಟು ಸಮಯ ಕೆಲಸ ಮಾಡಿದೆ. ಕೇವಲ ಶೇ. 26ರಷ್ಟು ಮಸೂದೆಗಳನ್ನು ಸಂಸದೀಯ ಸಮಿತಿಗೆ ಕಳುಹಿಸಲಾಗಿದೆ. 8 ಗಂಟೆ 26 ನಿಮಿಷಗಳಷ್ಟು ಕಲಾಪಕ್ಕೆ ಅಡ್ಡಿ ಉಂಟಾಗಿದ್ದರೆ, ಹೆಚ್ಚುವರಿ 21 ಗಂಟೆಗಳವರೆಗೆ ಕೆಲಸ ಮಾಡಿದೆ. ಒಟ್ಟು 4,140 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಒಟ್ಟು 128 ಖಾಸಗಿ ಮಸೂದೆಯನ್ನು ಮಂಡಿಸಲಾಗಿದೆ.

ಮಸೂದೆ ಪಾಸಾಗದ್ದಕ್ಕೆ ಕಾಂಗ್ರೆಸ್‌ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯೇ ಕಾರಣ. ಕಾಂಗ್ರೆಸ್‌ ತನ್ನ ದ್ವಂದ್ವ ನೀತಿಯಿಂದಾಗಿ ಲೋಕಸಭೆಯಲ್ಲಿ ಅನುಮೋದನೆ ನೀಡಿ, ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದೆ.
ಅನಂತಕುಮಾರ್‌ ಸಂಸದೀಯ ವ್ಯವಹಾರಗಳ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next