ಮಣಿಪಾಲ : ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾಗಾಂಧಿ ಆಯ್ಕೆಗೊಂಡಿದ್ದಾರೆ.
ಪಕ್ಷದ ನೂತನ ಅಧ್ಯಕ್ಷರ ಆಯ್ಕೆಗಾಗಿ ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. ಇಡೀ ದಿನದ ಸುದೀರ್ಘ ಚರ್ಚೆಯ ಬಳಿಕ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಲಷ್ಟೇ ಸಾಧ್ಯವಾಗಿದೆ.
ಬೆಳಗ್ಗೆ ಸಭೆ ಆರಂಭವಾಗುತ್ತಿದ್ದಂತೆಯೇ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಭೆಯಿಂದ ಹೊರಗುಳಿದಿದ್ದರು. ಉಳಿದ ಸದಸ್ಯರು ಮುಕ್ತವಾಗಿ ಚರ್ಚೆ ನಡೆಸಿ ಸೂಕ್ತವಾದವರನ್ನು ಆಯ್ಕೆ ಮಾಡಲೆಂದು ತಾವು ಸಭೆಯಿಂದ ಹೊರಗುಳಿದಿರುವುದಾಗಿ ರಾಹುಲ್ ಗಾಂಧಿ ಮಾಧ್ಯಮಗಳಿಗೆ ತಿಳಿಸಿದ್ದರು.
1998 ರ ಮಾರ್ಚ್ ನಲ್ಲಿ ಸೋನಿಯಾಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಡಿಸೆಂಬರ್ 2017 ರವರೆಗೆ ಪಕ್ಷವನ್ನು ಮುನ್ನಡೆಸಿದ್ದರು. ಬಳಿಕ ಅವರ ಪುತ್ರ ರಾಹುಲ್ ಗಾಂಧಿ ಕಾಂಗ್ರೆಸ್ ಆಧ್ಯಕ್ಷಗಿರಿಯನ್ನು ಒಪ್ಪಿಕೊಂಡಿದ್ದರು. 2019 ರ ಲೋಕಸಭಾ ಚುನಾವಣೆ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಪಕ್ಷದ ಹಲವು ಮುಖಂಡರು ಅಧ್ಯಕ್ಷ ಸ್ಥಾನವನ್ನು ನಿರ್ವಹಿಸುವಂತೆ ಕೇಳಿಕೊಂಡರೂ ರಾಹುಲ್ ಒಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹಲವು ಯುವ ಮುಖಂಡರ ಹೆಸರೂ ಸಹ ಪಕ್ಷದ ಅಧ್ಯಕ್ಷಗಿರಿಗೆ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಸೋನಿಯಾಗಾಂಧಿಯವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕಯಾಗಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಕಾಯಂ ಅಧ್ಯಕ್ಷ ಪದವಿಗೆ ಚುನಾವಣೆ ನಡೆದು ಹೊಸಬರ ಆಯ್ಕೆಯಾಗುವವರೆಗೆ ಸೋನಿಯಾಗಾಂಧಿಯವರನ್ನೇ ಹಂಗಾಮಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಲು ಸಮಿತಿ ಸಭೆ ಒಕ್ಕೊರಲಿನಿಂದ ತೀರ್ಮಾನಿಸಿತು ಎಂದು ತಿಳಿಸಿದರು.