Advertisement

ಗುಜರಾತ್ ಗಲಭೆ ಹಿಂದೆ ಅಹ್ಮದ್ ಪಟೇಲ್, ಸೋನಿಯಾ ಪಿತೂರಿ: SIT; ಆರೋಪ ತಳ್ಳಿಹಾಕಿದ ಕಾಂಗ್ರೆಸ್

04:04 PM Jul 16, 2022 | Team Udayavani |

ನವದೆಹಲಿ: 2002ರ ಗುಜರಾತ್ ಗಲಭೆ ನಂತರ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರ ನಿರ್ದೇಶನದ ಮೇರೆಗೆ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹಾಗೂ ಮತ್ತಿತರರು ಸಂಚು ರೂಪಿಸಿದ್ದರು ಎಂದು ಎಸ್ ಐಟಿ ಕೋರ್ಟ ಗೆ ಸಲ್ಲಿಸಿರುವ ಅಫಿದವಿತ್ ನಲ್ಲಿ ಆರೋಪಿಸಿದೆ.

Advertisement

ಇದನ್ನೂ ಓದಿ:ಕಾಟಾಚಾರಕ್ಕೆ ಸಿಎಂ ರಾಜ್ಯ ಪ್ರವಾಸ, ಸಚಿವರು, ಶಾಸಕರು ಹೋಟೆಲಲ್ಲಿ: ಸಿದ್ದರಾಮಯ್ಯ ಟೀಕೆ

ಈ ಸಂಚಿನ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈವಾಡ ಇದ್ದಿರುವುದು ಎಸ್ ಐಟಿ ಅಫಿದವಿತ್ ನಿಂದ ಬಯಲಾಗಿದ್ದು, ತಮ್ಮ ಕೈಗೊಂಬೆಯಾಗಿದ್ದ ಅಹ್ಮದ್ ಪಟೇಲ್ ಮೂಲಕ ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರವನ್ನು ಉರುಳಿಸಲು ಸಂಚು ಹೂಡಿರುವುದಾಗಿ ಬಿಜೆಪಿ ಆರೋಪಿಸಿದೆ.

ಎಸ್ ಐಟಿ ಹೇಳಿದ್ದೇನು:

ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವನ್ನು ಉರುಳಿಸಲು ಅಹ್ಮದ್ ಪಟೇಲ್ ಅವರ ದೊಡ್ಡ ಪಿತೂರಿಯಾಗಿದ್ದು, ತೀಸ್ತಾ ಸೆಟಲ್ವಾಡ್ ಅದರ ಭಾಗವಾಗಿದ್ದಾರೆ ಎಂದು ಎಸ್ ಐಟಿ ಕೋರ್ಟ್ ಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ತೀಸ್ತಾ ಜಾಮೀನು ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸೋಮವಾರ ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

Advertisement

ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ತಿರುಚಿದ ಆರೋಪದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಮಾಜಿ ಐಪಿಎಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದರು.

ತೀಸ್ತಾ ಅವರ ಖಾತೆಗೆ ಅಹ್ಮದ್ ಪಟೇಲ್ ಅವರಿಂದ 30 ಲಕ್ಷ ರೂಪಾಯಿ ಹಣ ಪಾವತಿಯಾಗಿರುವುದಾಗಿ ಎಸ್ ಐಟಿ ತಿಳಿಸಿದೆ. ತೀಸ್ತಾ ಸೆಟಲ್ವಾಡ್ ಗೆ ಜಾಮೀನು ನೀಡಬಾರದು ಎಂದು ಎಸ್ ಐಟಿಯ ಎಸಿಪಿ ಸೋಲಂಕಿ ಅವರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳಾದ ಮಿತೇಶ್ ಅಮಿನ್ ಮತ್ತು ಅಮಿತ್ ಪಟೇಲ್ ಸೆಷನ್ಸ್ ಕೋರ್ಟ್ ಗೆ ಅಫಿದವಿತ್ ಸಲ್ಲಿಸಿದ್ದರು.

ಸೋನಿಯಾ ಗಾಂಧಿ ಪಿತೂರಿ:

ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಎಸ್ ಐಟಿ ಅಫಿದವಿತ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಈ ಪ್ರಕರಣದಲ್ಲಿ ಅಹ್ಮದ್ ಪಟೇಲ್ ಕೇವಲ ನೆಪ ಮಾತ್ರ, ಆದರೆ ಇದರ ಮುಖ್ಯ ಪಾತ್ರಧಾರಿ ಸೋನಿಯಾ ಗಾಂಧಿ ಎಂದು ಆರೋಪಿಸಿದರು. ಸೋನಿಯಾ ಗಾಂಧಿ ಗುಜರಾತ್ ಹೆಸರಿಗೆ ಕಳಂಕ ತರುವ ಮೂಲಕ ನರೇಂದ್ರ ಮೋದಿ ಅವರನ್ನು ಅವಮಾನಿಸಲು ಯತ್ನಿಸಿದ್ದು, ಇಡೀ ಪಿತೂರಿಯ ರೂವಾರಿ ಸೋನಿಯಾ ಗಾಂಧಿ ಎಂದು ದೂರಿದರು.

ಇದೊಂದು ದುರುದ್ದೇಶಪೂರಿತ ಆರೋಪ: ಕಾಂಗ್ರೆಸ್

ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ದಿವಂಗತ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ವಿರುದ್ಧ ಗುಜರಾತ್ ಪೊಲೀಸರ ಆರೋಪ ದುರುದ್ದೇಶಪೂರ್ವಕದ್ದಾಗಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

2002ರ ಗುಜರಾತ್ ಗಲಭೆಯ ಕಳಂಕದ ಹೊಣೆಯಿಂದ ನುಣುಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ವ್ಯವಸ್ಥಿತ ತಂತ್ರವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಹ್ಮದ್ ಪಟೇಲ್ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಅಹ್ಮದ್ ಪಟೇಲ್ ಪುತ್ರಿ ಮುಮ್ತಾಜ್ ಪಟೇಲ್ ಎಸ್ ಐಟಿ ಆರೋಪವನ್ನು ತಳ್ಳಿಹಾಕಿದ್ದಾರೆ. ಗುಜರಾತ್ ಗಲಭೆಯ ಹಿಂದೆ ದೊಡ್ಡ ಪಿತೂರಿ ನಡೆಸಲಾಗಿದೆ ಎಂದಾದರೆ 2020ರವರೆಗೂ ನನ್ನ ತಂದೆಯನ್ನು ಯಾಕೆ ವಿಚಾರಣೆಗೆ ಗುರಿಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next