Advertisement

ಸೋನಿಯಾ, ಸ್ಮೃತಿ ನಾಮಪತ್ರ ಸಲ್ಲಿಕೆ

12:20 PM Apr 13, 2019 | mahesh |

ದಶಕಗಳಿಂದ ಕಾಂಗ್ರೆಸ್ಸಿನ ಭದ್ರಕೋಟೆಗಳೆಂದೇ ಪ್ರತೀತಿಯಾಗಿರುವ ರಾಯ್‌ ಬರೇಲಿ ಹಾಗೂ ಅಮೇಠಿಯಲ್ಲಿ ಕ್ರಮವಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮತಿ ಇರಾನಿ ತಮ್ಮ ಉಮೇದುವಾರಿಕೆಗಳನ್ನು ಸಲ್ಲಿಸಿದ್ದಾರೆ. ರಾಜಕೀಯವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಾಲಿಗೆ ಜಿದ್ದಾಜಿದ್ದಿಯ ರಣಕಣಗಳಾಗಿರುವ ಈ ಎರಡೂ ಕ್ಷೇತ್ರಗಳ ಮತದಾರರ ಒಲವು ಯಾರ ಕಡೆಗಿದೆ ಎಂಬುದು ಮೇ 6ರಂದು ಮತಯಂತ್ರಗಳಲ್ಲಿ ದಾಖಲಾಗಲಿದೆ.

Advertisement

5ನೇ ಗೆಲುವಿನ ನಿರೀಕ್ಷೆಯಲ್ಲಿ ಯುಪಿಎ ಅಧ್ಯಕ್ಷೆ
ರಾಯ್‌ಬರೇಲಿ: ಸತತ ಐದನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ರಾಯ್‌ಬರೇಲಿಯಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಪುತ್ರ ರಾಹುಲ್‌ ಗಾಂಧಿ, ಪುತ್ರಿ ಪ್ರಿಯಾಂಕಾ ವಾದ್ರಾ ಜತೆಗೆ ಆಗಮಿಸಿದ ಅವರು ನಾಮಪತ್ರ ಪ್ರಕ್ರಿಯೆ ಮುಗಿಸಿದರು. ಅಳಿಯ ರಾಬರ್ಟ್‌ ವಾದ್ರಾ, ಮೊಮ್ಮಕ್ಕಳಾದ ರೈಹಾನ್‌, ಮಿರೇ ಸಹ ಈ ಸಂದರ್ಭದಲ್ಲಿ ಜತೆಗಿದ್ದರು.

ಇದಕ್ಕೂ ಮುನ್ನ ರಾಯ್‌ಬರೇಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಅವರು, ಆನಂತರ ರೋಡ್‌ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ರೋಡ್‌ ಶೋ ವೇಳೆ ದಾರಿಯ ಎರಡೂ ಕಡೆ ಜನಸಾಮಾನ್ಯರು, ಕಾರ್ಯಕರ್ತರು ಸೋನಿಯಾ ಅವರಿಗೆ ಜಯಕಾರ ಹಾಕಿದರು. ಮೇ 6ರಂದು ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಇತ್ತೀಚೆಗೆ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ದಿನೇಶ್‌ ಪ್ರತಾಪ್‌ ಸಿಂಗ್‌, ಸೋನಿಯಾರ ಪ್ರಬಲ ಎದುರಾಳಿಯಾಗಿದ್ದಾರೆ.

ಆಸ್ತಿ ಮೌಲ್ಯ 11.82 ಕೋಟಿ
ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ತಾವು 11.82 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖೀಸಿದ್ದಾರೆ. 2014ರ ಚುನಾ ವಣೆಯಲ್ಲಿ ಅವರ ಆಸ್ತಿ ಮೌಲ್ಯ 9.28 ಕೋಟಿ ರೂ. ಆಗಿತ್ತು. ಅವರು 60 ಲಕ್ಷ ರೂ. ನಗದು ಹಾಗೂ 16.5 ಲಕ್ಷ ರೂ. ಬ್ಯಾಂಕ್‌ ಠೇವಣಿ ಹೊಂದಿದ್ದಾರೆ. ಪುತ್ರ ರಾಹುಲ್‌ ಗಾಂಧಿಗೆ 5 ಲಕ್ಷ ರೂ. ಸಾಲ ನೀಡಿರುವುದಾಗಿಯೂ ಉಲ್ಲೇಖೀಸಿದ್ದಾರೆ. ಸೋನಿಯಾ ವಿರುದ್ಧ ಒಂದು ಕ್ರಿಮಿನಲ್‌ ಪ್ರಕರಣವಿದೆ.

“2004ರ ಫ‌ಲಿತಾಂಶ ಮರೆಯಬೇಡಿ’
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರು ಕೇಳಿದ “ಈ ಬಾರಿಯೂ ಮೋದಿ ಸೋಲಿಲ್ಲದ ಸರದಾರರೇ’ ಎಂಬ ಪ್ರಶ್ನೆಯನ್ನು ತಳ್ಳಿಹಾಕಿದ ಸೋನಿಯಾ, “2004ರ ಚುನಾವಣಾ ಫ‌ಲಿತಾಂಶವನ್ನು ಮರೆಯಬೇಡಿ. ಆಗಲೂ, ವಾಜಪೇಯಿ ಸೋಲಿಲ್ಲದ ಸರದಾರರೆಂದೇ ಪರಿಗಣಿಸಲ್ಪ ಟ್ಟಿದ್ದರು. ಆದರೆ, ಫ‌ಲಿತಾಂಶ ಕಾಂಗ್ರೆಸ್‌ ಪರವಾಗಿ ಬಂದಿತ್ತು’ ಎಂದರು. ತಾಯಿಯ ಮಾತನ್ನು ಉದ್ಧರಿಸಿದ ರಾಹುಲ್‌, “ಕಳೆದೈದು ವರ್ಷಗಳಲ್ಲಿ ಮೋದಿ ಸರಕಾರ ಜನತೆಗೆ ಏನನ್ನೂ ಕೊಟ್ಟಿಲ್ಲ. ಹಾಗಾಗಿ, ಅವರು ಸೋಲಿಲ್ಲದ ಸರದಾರ ಎನಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

Advertisement

ರಾಜಕೀಯ ವ್ಯಕ್ತಿಗಳು ತಮ್ಮ ಕ್ಷೇತ್ರದ ಜನತೆಗಾಗಿ ಹೇಗೆ ತಮ್ಮನ್ನು ತಾವು ಮುಡಿಪಿಡಬೇಕು ಎಂಬುದನ್ನು ನಮ್ಮ ತಾಯಿಯನ್ನು ನೋಡಿ ಕಲಿಯಬೇಕು. ದೇಶದ ಪ್ರತಿಯೊಬ್ಬ ರಾಜಕಾರಣಿಯೂ ಈ ದೇಶದ ಜನತೆಗೆ ಋಣಿಯಾಗಿರಬೇಕು.
ಪ್ರಿಯಾಂಕಾ ವಾದ್ರಾ

ಅಮೇಠಿಯಲ್ಲಿ ಇರಾನಿ ಮತ್ತೆ ಅದೃಷ್ಟ ಪರೀಕ್ಷೆ
ಅಮೇಠಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಎದುರಾಳಿಯಾಗಿ ಅಮೇಠಿಯಲ್ಲಿ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ, ಗುರುವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಗೌರಿಗಂಜ್‌ನಲ್ಲಿರುವ ಬುಧಾನ್‌ಮಾಯಿ ದೇಗುಲದಲ್ಲಿ ಸ್ಮತಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪತಿ ಝುಬಿನ್‌ ಇರಾನಿ ಇದ್ದರು. ಆನಂತರ, ನಡೆದ ರೋಡ್‌ ಶೋನಲ್ಲಿ ಪಾಲ್ಗೊಂಡ ಸ್ಮತಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ರೋಡ್‌ ಶೋ ವೇಳೆ ಸ್ಮತಿ ದಂಪತಿ ಸಂಗಡ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಇದ್ದರು. ಬುಧ ವಾ ರ ರಾಹುಲ್‌ ಗಾಂಧಿ ಈ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ರೋಡ್‌ ಶೋ ನಡೆಸಿದ್ದು, ಅದೇ ಹಾದಿಯಲ್ಲೇ ಸ್ಮತಿಯವರ ರೋಡ್‌ ಶೋ ಸಹ ಸಾಗಿ ಬಂದದ್ದು ಗಮನಾರ್ಹ. ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಸ್ಮತಿ, ಸತತ ಮೂರು ಬಾರಿ ಗೆದ್ದಿದ್ದರೂ ಅಮೇಠಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿಲ್ಲ ಎಂದು ರಾಹುಲ್‌ ವಿರುದ್ಧ ಕಿಡಿಕಾರಿದರು.

ಆಸ್ತಿ ಮೌಲ್ಯ 4.71 ಕೋಟಿ ರೂ.
ಸಚಿವೆ ಸ್ಮತಿ ತಾವು 4.71 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. 1.75 ಕೋಟಿ ರೂ.ಗಳ ಚರಾಸ್ತಿ, 2.96 ಕೋಟಿ ರೂ.ಗಳ ಸ್ಥಿರಾಸ್ತಿ ಇದೆ ಎಂದು ಉಲ್ಲೇಖೀಸಿದ್ದಾರೆ. 6.24 ಲಕ್ಷ ರೂ.ಗಳ ನಗದು ಕೈಯ್ಯಲ್ಲಿದ್ದು, ಬ್ಯಾಂಕ್‌ ಠೇವಣಿ ರೂಪದಲ್ಲಿ 89 ಲಕ್ಷ ರೂ.ಗಳಿವೆ ಎಂದೂ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ತಮ್ಮ ವಿದ್ಯಾರ್ಹತೆ ಬಗ್ಗೆ ಇದ್ದ ವಿವಾದಕ್ಕೆ ಸ್ಮೃತಿ ತೆರೆ ಎಳೆದಿದ್ದಾರೆ. ಸ್ಮತಿ ಪದವೀಧರೆ ಅಲ್ಲ ಎಂಬ ವಿಪಕ್ಷಗಳ ಆರೋಪವನ್ನು ಈವರೆಗೆ ತಳ್ಳಿಹಾಕುತ್ತಲೇ ಬಂದಿರುವ ಇರಾನಿ, ಈಗ ತಾವು ದಿಲ್ಲಿ ವಿವಿಯಲ್ಲಿ ಪದವಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದೆಯಾದರೂ ಕೋರ್ಸ್‌ ಪೂರ್ಣಗೊಳಿಸಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ರಾಹುಲ್‌ ವಿರುದ್ಧ ಯೋಗಿ ಟೀಕೆ
ಸ್ಮತಿ ಆರೋಪಗಳಿಗೆ ದನಿಗೂಡಿಸಿದ ಯೋಗಿ ಆದಿತ್ಯನಾಥ್‌, “ನಾನು ಉತ್ತರ ಪ್ರದೇಶ ಸಿಎಂ ಆದ ನಂತರ ಅಮೇಠಿ ಕ್ಷೇತ್ರದ ಅಭಿವೃದ್ಧಿಗೆ ಏನಾದರೂ ಪ್ರಸ್ತಾವನೆ ನೀಡಿ ಎಂದು ಹಲವಾರು ಬಾರಿ ರಾಹುಲ್‌ ಅವರನ್ನು ಕೇಳಿದ್ದುಂಟು. ಆದರೆ, ಅವರು ಯಾವ ಪ್ರಸ್ತಾವನೆಯನ್ನೂ ಸಲ್ಲಿಸಲಿಲ್ಲ. ಆದರೆ, ಸ್ಮತಿ ಮಾತ್ರ ಯಾವಾಗ ಭೇಟಿಯಾದರೂ ಅಮೇಠಿ ಜನತೆ ಹಾಗೂ ಇಲ್ಲಿನ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತಾರೆ. ಈ ಬಾರಿ ಸ್ಮತಿ ಬೆಹನ್‌ ಅವರು ಗೆದ್ದರೆ ಅಮೇಠಿಯ ಚಿತ್ರಣ ಖಂಡಿತವಾಗಿಯೂ ಬದಲಾಗುತ್ತದೆ’ ಎಂದರು.

ನಮ್ಮ ಪಕ್ಷ ಈ ಬಾರಿಯೂ ಕೇಂದ್ರದಲ್ಲಿ ಅಧಿಕಾರ ಹಿಡಿದರೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿರುವಂಥ ಗೆದ್ದಲು ಹುಳುಗಳನ್ನು ಮೊದಲು ದೇಶದಿಂದ ಒಧ್ದೋಡಿಸಲಾಗುವುದು.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next