Advertisement

UV Fusion: ಹಾಡು-ಪಾಡು

09:55 AM Sep 26, 2023 | Team Udayavani |

ಜೀವನ ಅಂದರೇನು?

Advertisement

ಬದುಕು ಅಂದರೇನು?

ತುಂಬಾ ತೂಕದ ಪ್ರಶ್ನೆಗಳಿವು. ಈ ಪ್ರಶ್ನೆಗಳಿಗೆ ತಲೆಗೊಂದರಂತೆ ಅಲ್ಲಲ್ಲ, ತಲೆಗೆ ನೂರರಂತೆಯೂ ಉತ್ತರ ಸಿಗಬಹುದು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿ ಪ್ರತೀ ಸಂದರ್ಭದಲ್ಲಿಯೂ ಅನೇಕ ದೃಷ್ಟಿಕೋನದಿಂದ ಬದುಕನ್ನು ನೋಡ್ತಾನೆ, ಆಸ್ವಾದಿಸುತ್ತಾನೆ. ಹಿಮಾಲಯದಲ್ಲಿ ಮೂಗು ಮುಚ್ಚಿ ತಪಕ್ಕೆ ಕುಳಿತ ಯೋಗಿಯೋರ್ವ ಜೀವನದ ಕುರಿತು ನೀಡುವ ವಾಖ್ಯಾನಕ್ಕೂ, ತನ್ನ ನಿಲಯದಲ್ಲಿ ಮಡದಿ ಮಕ್ಕಳೊಂದಿಗೆ ಸಂಸಾರ ನಡೆಸುವ ಭೋಗಿಯೋರ್ವ ಜೀವನದ ಕುರಿತು ನೀಡುವ ವಾಖ್ಯಾನಕ್ಕೂ ವ್ಯತ್ಯಾಸವಿರಬಹುದು. ಇದ್ದೇ ಇರುತ್ತದೆ ಕೂಡ. ಭಿಕ್ಷುಕನೋರ್ವನಿಗೆ ದಿನದ ಹೊಟ್ಟೆಪಾಡೇ ಜೀವನದ ಮಹಾರ್ಥವಾಗಿರಬಹುದು. ಧನಿಕನೋರ್ವನಿಗೆ ಮತ್ತಿಷ್ಟು ಅರ್ಥ ಸಂಗ್ರಹದ ಅರ್ಥಾತ್‌ ಹಣ ಸಂಚಯಗೊಳಿಸುವ ಆಲೋಚನೆಯೇ ಬದುಕಾಗಿ ಕಾಣಿಸಬಹುದು.

ಒಟ್ಟಾರೆಯಾಗಿ ಹುಟ್ಟಿದ ಘಳಿಗೆಯಿಂದ ಚಟ್ಟದವರೆಗಿನ ಚುಟುಕಾದ ಅವಧಿಯನ್ನು ಜೀವನವೆಂದುಕೊಳ್ಳೋಣ. ಈ ಜೀವನವನ್ನು ಹಳ್ಳಿಯವರು ಅಥವಾ ಗ್ರಾಮೀಣ ಭಾಗದವರು, ಪಟ್ಟಣ ಪ್ರದೇಶದವರು ನೋಡುವ ಬಗೆ ವಿಭಿನ್ನವಾದುದು. ಇದೇನು ನಿಮಗೆ ಹೊಸ ವಿಷಯವಲ್ಲ ಆದರೆ ಜೀವನೋತ್ಸಾಹ. ನನ್ನನ್ನು ಕೇಳಿದರೆ ಗ್ರಾಮೀಣ ಭಾಗದವರಿಗೆ ಜೀವನೋತ್ಸಾಹ ಜಾಸ್ತಿ. ಅದ್‌ ಹೇಗ್‌ ಹೇಳ್ತಿಯಪ್ಪಾ ಅಂತ ಕೇಳ್ತೀರಾ..? ಅದಕ್ಕೆ ಸಾಕ್ಷಿ ಜಾನಪದ ಕಲೆಗಳು.

ಜಾನಪದ ಕಲೆಗಳು ಕೇವಲ ಜನಪದರ ಮನೋರಂಜನಾ ಕಮ್ಮಟವಲ್ಲ. ಅದು ಸ್ವರ ಬದುಕಿನ ಅತ್ಯಾಪ್ತ ಒಡನಾಡಿ. ನಾನೊಬ್ಬ ಕರಾವಳಿಗನಾಗಿ, ಕುಂದಗನ್ನಡಿಗನಾಗಿ ಎಲ್ಲವನ್ನೂ ಮೀರಿ ಒಬ್ಬ ಗ್ರಾಮೀಣ ಪ್ರದೇಶದ ವ್ಯಕ್ತಿಯಾಗಿ ನಾ ಕಂಡ ಗ್ರಾಮೀಣ ಬದುಕನ್ನು ನಿಮ್ಮ ಮುಂದಿಡುವ ಪ್ರಯತ್ನವಿದಷ್ಟೇ. ಗ್ರಾಮೀಣ ಭಾಗದ ಜಾನಪದ ಕಲೆಗಳೆಂದರೆ ನಿಮಗೆ ಹೊಸತಲ್ಲ. ಯಕ್ಷಗಾನ, ಕೋಲ, ಆಟಿ ಕಳಂಜ, ಕಂಸಾಳೆ, ಕೋಲಾಟ ಎಲ್ಲವೂ ಜಾನಪದದೊಳಬರುವ ವಸ್ತುಗಳೇ. ಆದರೇ ನಾನೀಗ ಹೇಳಹೊರಟಿರುವುದು ನಮ್ಮ ಹೆಮ್ಮೆಯ ಶ್ರೀಮಂತ ಮೌಖೀಕ ಸಾಹಿತ್ಯ ಪರಂಪರೆಯ ಒಂದು ಮೇರು ರತ್ನ ಅದುವೇ ಭತ್ತ ಕುಟ್ಟುವ ಹಾಡುಗಳ ಕುರಿತು.

Advertisement

ಜಾನಪದದಲ್ಲಿ ಹೆಣ್ಣು ಮಗಳೊಬ್ಬಳು ಭತ್ತ ಕುಟ್ಟುತ್ತಾ ಹಾಡ್ತಾಳೆ.

ಬೈಣಿಯ ಒನಕಿಗೂ ದಬ್ಬಣ್‌ ಸಾಲಿ ಭತ್ತಕ್ಕೂ ನನ್‌ ಜೀವ್‌ ಇಂದೇ ಹೋಗಾಲಿ..

ಬೈಣಿಯ ಒನಕಿಗೂ ದಬ್ಬಣ್‌ ಸಾಲಿ ಭತ್ತಕ್ಕೂ ನನ್‌ ಜೀವ್‌ ಇಂದೇ ಹೋಗಾಲಿ..

ಮೈಟಿಯ ಮೀನಿಗೂ ಗೆಯಿrಯ ಕಳ್ಳಿಗೂ ನನ್‌ ಜೀವ್‌ ಇಂದೇ ಉಳಿಯಲಿ..!

ಅರರೆ… ಏನಾಶ್ಚರ್ಯ ನೋಡಿ. ದಪ್ಪ ಸಿಪ್ಪೆಯ ಭತ್ತ ಭಾರವಾದ ಒನಕೆಯಿಂದ ಭತ್ತ ತುಳಿದು ಸುಸ್ತಾಗಿ ಜೀವ ಹೋಗಲಿ ಎನ್ನುವವಳೇ ಮುಂದಿನ ಸಾಲಿನಲ್ಲಿ ಮೀನು ಮತ್ತು ಕುಡಿವ ಕಳ್ಳಿನ ಆಸೆಗೆ ಜೀವ ಉಳಿಯಲಿ ಎನ್ನುತ್ತಾಳೆ. ಇದಲ್ವೇ ಜೀವನೋತ್ಸಾಹ ಅಂದ್ರೆ? ಅಲ್ಲಿಗೆ ನಿಲ್ಲಲಿಲ್ಲ ಸ್ವಾಮಿ ಮುಂದಿದೆ ಕೇಳಿ. ಸುಮ್ಮನೆ ಹೇಳಿಲ್ಲ ಕುರಿತೋದದೆಯುಂ ಕಾವ್ಯಪರಿಣಿತಮತಿಗಳ್‌ ಎಂದು ನಮ್ಮ ಜಾನಪದರನ್ನು. ನೀತಿ ಪಾಠಗಳಿಗೂ ಕಡಿಮೆಯಿಲ್ಲ ಭತ್ತ ಕುಟ್ಟುವ ಹಾಡುಗಳಲ್ಲಿ,

ಹಾದಿಮೇಲ್‌ ಹ್ವಾಪನೇ ಹರಗಿ ಸಪ್ಪಿನ ಕಳ್ಳ

ಈ ಬುದ್ಧಿ ನಿನಗೆ ತರುವಲ್ಲ ಈ ಬುದ್ಧಿ ನಿನಗೆ ತರುವಲ್ಲ

ನಮ್ಮನಿ ನಾಯಿಗಿದ್‌ ಬುದ್ಧಿ ನಿನಗಿಲ್ಲ..!

ಅದರರ್ಥ ಇಷ್ಟೇ ಅನುಮಾನ ಒಳ್ಳೆದಲ್ಲ ಅಂತ.

ಭಯವಿರೋದು ಒಂದೇ, ತಾಂತ್ರಿಕತೆ ಆಧುನಿಕತೆಯ ಪ್ರಭಾವವೇನೋ ಎಂಬಂತೆ ಗ್ರಾಮೀಣ ಭಾಗದಲ್ಲೂ ಈಗೀಗ ಭತ್ತ ತುಳಿಯುವ ವ್ಯವಸ್ಥೆಯಿಲ್ಲ. ಒರಳು ಒನಕೆಗಳನ್ನು ಮಿಲ್‌ಗ‌ಳು ಮೂಲೆಗೊತ್ತಿಬಿಟ್ಟಿದೆ. ಹೀಗಿರುವಾಗ ಇಂತಹ ಹಾಡುಗಳು ಹಾಡಿನೊಂದಿಗಿನ ಜೀವನ ಪಾಠ ಮುಂದಿನ ಪೀಳಿಗೆಗೆ ದೊರೆಯುವ ಬಗೆಯಾದರೂ ಎಂತು?

ಹಾದಿ ಮೇಲ್‌ ಹ್ವಾಪರೆ ಹಾಡೆಂದು ನಿಲಬೇಡಿ…

ಹಾಡಲ್ಲ ನನ್ನ ಒಡಲುರಿ…

ಹಾಡಲ್ಲ ನನ್ನ ಒಡಲುರಿ ಹ್ವಾಪರೆ…

ಬೆವರಲ್ಲ ನನ್ನ ಕಣ್ಣೀರು…!

ಇನ್ನೊಬ್ಬರ ಜೀವನವನ್ನು ದೂರದಿಂದ ನೋಡಿ ಚೆನ್ನ ಎಂದುಕೊಳ್ಳಬೇಡಿ. ಅವರವರ ನೋವು ಅವರವರಿಗೆ ಮಾತ್ರ ಅರಿವಿರುತ್ತೆ ಅನ್ನೋದೆ ಇದರ ತಾತ್ಪರ್ಯ. ಮತ್ತೂಮ್ಮೆ ಮತ್ತಷ್ಟು ಹಾಡುಗಳೊಂದಿಗೆ ಜತೆಯಾಗೋಣ. ನಿಮ್ಮಿಂದಲೂ ಇಂತಹ ಹಾಡುಗಳ ನೆನಪ ಲಹರಿ ಬರಹದಲ್ಲಿ ಹರಿದರೇ ನನಗೊಂದಷ್ಟು ಸಾರ್ಥಕತೆಯ ಭಾವ.

-ಶರತ್‌ ಶೆಟ್ಟಿ

ವಂಡ್ಸೆ

Advertisement

Udayavani is now on Telegram. Click here to join our channel and stay updated with the latest news.

Next