Advertisement

ಸಾರ್ವಜನಿಕರ ಮಡಿಲಿಗೆ ಹಾಡು

12:30 AM Jan 04, 2019 | Team Udayavani |

ಅದು “ಸಾರ್ವಜನಿಕರಲ್ಲಿ ವಿನಂತಿ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ. ಹಾಡಿನ ಕಾರ್ಯಕ್ರಮವೆಂದರೆ ಅಲ್ಲಿ ಬರೀ ಹಾಡು, ಮಾತಿಗಷ್ಟೇ ಜಾಗವಿರಲಿಲ್ಲ. ಸಮ್ಕಾ ಫ್ಯಾಷನ್‌ ತಂಡದಿಂದ ಫ್ಯಾಷನ್‌ ಶೋ ಕೂಡ ನಡೆದದ್ದು ವಿಶೇಷ. ಯೋಗರಾಜ್‌ ಭಟ್‌ ಮತ್ತು ಯೋಗಿ ಆಕರ್ಷಣೆಯಾಗಿದ್ದರು. ಅಂದು ಭಟ್ಟರು ಆಡಿಯೋ ಸಿಡಿ ಬಿಡುಗಡೆ ಮಾಡಿ, ಹೊಸಬರ ಚಿತ್ರಕ್ಕೆ ಶುಭಕೋರಿದರು. “ಹೊಸಬರ ಚಿತ್ರಗಳ ಬಗ್ಗೆ ನನಗೆ ನಿರೀಕ್ಷೆ ಹೆಚ್ಚು. ಅವರಲ್ಲಿ ಹೊಸತನ ಇರುತ್ತದೆ. ಈಗೀಗ ಬರುವ ಹೊಸಬರ ಚಿತ್ರಗಳಲ್ಲಿ ಅದು ಸಾಬೀತಾಗಿದೆ. ತುಂಬಾನೇ ಕಷ್ಟಪಟ್ಟು ಒದ್ದಾಡಿ, ಗುದ್ದಾಡಿ ಸಿನಿಮಾ ಮಾಡಿರುತ್ತಾರೆ. ಈ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಸೇರಿದಂತೆ ಇಡೀ ತಂಡಕ್ಕೆ ಗೆಲುವು ಕೊಡಲಿ’ ಎಂದರು ಯೋಗರಾಜ್‌ಭಟ್‌.

Advertisement

ಯೋಗಿ ಕೂಡ ಅಂದು ಅತಿಥಿಯಾಗಿ ಆಗಮಿಸಿದ್ದರು. ಚಿತ್ರತಂಡ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಅದು ನನಗಂತೂ ಕುತೂಹಲ ಮೂಡಿಸಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಅಂದರು ಯೋಗಿ.

ನಿರ್ದೇಶಕ ಕೃಪಸಾಗರ್‌ ಅವರಿಗೆ ಇದು ಮೊದಲ ಚಿತ್ರ. “ಇಲ್ಲಿ ಮನರಂಜನೆ ಜೊತೆಗೆ ಸಮಾಜಕ್ಕೊಂದು ಸಂದೇಶವೂ ಇದೆ. ಒಂದು ವರ್ಷದ ಕನಸು ಈಗ ನನಸಾಗುತ್ತಿದೆ. ಕಥೆ ಬಗ್ಗೆ ಹೇಳುವುದಾದರೆ, ಇದೊಂದು ಕ್ರೈಂ, ಥ್ರಿಲ್ಲರ್‌ ಚಿತ್ರ. ಕೊಲೆ, ದರೋಡೆ, ಸಮಾಜ ಘಾತುಕ ಕೆಲಸ ಮಾಡಿದವರಷ್ಟೇ ಅಪರಾಧಿಗಳಲ್ಲ ಎಂಬ ವಿಷಯವೂ ಇಲ್ಲಿದೆ. ಇನ್ನು, ಈ ಚಿತ್ರದಲ್ಲಿ ವಿಶೇಷವಾದಂತಹ ಪಾತ್ರವಿದೆ. ಅದನ್ನು  ತೆರೆಯಮೇಲೆ ನೋಡಬೇಕು. ಸಾರ್ವಜನಿಕರು ಪೊಲೀಸ್‌ ಇಲಾಖೆ ಜೊತೆಗೆ ಕೈ ಜೋಡಿಸಿದರೆ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೇಗೆ ಕಡಿಮೆಯಾಗುತ್ತವೆ ಎಂಬುದನ್ನು ಇಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ನಮ್ಮ ಮೊಬೈಲ್‌ ಅನ್ನು ಬೇರೆಯವರಿಗೆ ಕೊಟ್ಟಾಗ ಅವರು ಏನು ಮಾಡಬಲ್ಲರು, ಅದರಿಂದ ಏನೆಲ್ಲಾ ಆಗುತ್ತದೆ ಎಂಬ ಅಂಶವೂ ಇಲ್ಲಿದೆ’ ಎಂಬುದು ನಿರ್ದೇಶಕ ಕೃಪಾಸಾಗರ್‌ ಮಾತು.

ಅನಿಲ್‌ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಆ ಪೈಕಿ ಒಂದು ಹಾಡನ್ನು ಪೊಲೀಸ್‌ ಇಲಾಖೆಗೆ ಅರ್ಪಿಸಲಾಗಿದೆ. ನಾಗೇಂದ್ರ ಪ್ರಸಾದ್‌ ಮತ್ತು ಚೇತನ್‌ ಗೀತೆ ರಚಿಸಿದ್ದಾರೆ. ಮದನ್‌ ನಾಯಕರಾದರೆ,  ಮೈಸೂರು ಮೂಲದ ಅಮೃತಾ ನಾಯಕಿಯಾಗಿದ್ದಾರೆ. ಇವರಿಬ್ಬರಿಗೂ ಮೊದಲ ಚಿತ್ರವಿದು. ಚಿತ್ರದಲ್ಲಿ ರಮೇಶ್‌ ಪಂಡಿತ್‌, ಮಂಡ್ಯ ರಮೇಶ್‌ ಸೇರಿದಂತೆ ಇತರರು ನಟಿಸಿದ್ದಾರೆ. ಉಮಾ ನಂಜುಂಡರಾವ್‌ ನಿರ್ಮಾಪಕರು.

Advertisement

Udayavani is now on Telegram. Click here to join our channel and stay updated with the latest news.

Next