ಸಿನಿಮಾ ಮೇಲಿನ ಪ್ರೀತಿಯೇ ಹಾಗೆ. ತನ್ನೊಳಗಿರುವ ಪ್ರತಿಭೆಯನ್ನು ತೋರಿಸಬೇಕೆಂಬ ಹಲವು ಪ್ರತಿಭಾವಂತರು ಈಗಾಗಲೇ ಕಿರುಚಿತ್ರ, ವೀಡೀಯೋ ಆಲ್ಬಂ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಡಲು ಸಜ್ಜಾಗುತ್ತಿದ್ದಾರೆ. ಅಂತಹ ಹೊಸ ಪ್ರತಿಭೆಗಳ ಸಾಲಿಗೆ ದಿಲೀಪ್ ಕೂಡ ಸೇರಿದ್ದಾರೆ. ಹೌದು, ದಿಲೀಪ್ ಈಗ “ಸ್ಟಾರ್ ದಿಲೀಪ್’ ಎಂಬ ಆಲ್ಬಂ ಸಾಂಗ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಇಷ್ಟೇ ಹೇಳಿದ್ದರೆ, “ಸ್ಟಾರ್ ದಿಲೀಪ್’ ಆಲ್ಬಂನ ವಿಶೇಷತೆ ಇರುತ್ತಿರಲಿಲ್ಲ. ಈ ವೀಡಿಯೋ ಹಾಡಲ್ಲಿ ಕಾಣಿಸಿಕೊಂಡಿರುವ ದಿಲೀಪ್ ಒಬ್ಬ ಗಾರೆ ಕೆಲಸಗಾರ. ಮನೆ ಗೋಡೆ ಕಟ್ಟುವ ಮೂಲಕ ಗಟ್ಟಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿರುವ ದಿಲೀಪ್‌ಗೆ ಲೈಫ್ನಲ್ಲೊಂದು ಸಾಧನೆ ಮಾಡುವ ಆಸೆ ಚಿಗುರಿದೆ. ಆ ಆಸೆಯೇ “ಸ್ಟಾರ್ ದಿಲೀಪ್’ ಎಂಬ ಆಲ್ಬಂ ಸಾಂಗ್.
ಹೌದು, ದಿಲೀಪ್ ಗಾರೆ ಕೆಲಸ ಮಾಡುತ್ತಲೇ, ತಾನು ಸಿನಿಮಾ ರಂಗಕ್ಕೆ ಕಾಲಿಡಬೇಕೆಂಬ ಕನಸು ಕಂಡರು. ಅಲ್ಲಿಗೆ ಹೋಗುವ ಮುನ್ನ, ದಿಲೀಪ್ ದುಡಿಯುವ ಸಂದರ್ಭದಲ್ಲೇ ಬಿಡುವು ಮಾಡಿಕೊಂಡು, ಅಭಿನಯ, ಡ್ಯಾನ್ಸ್ ತರಬೇತಿ ಪಡೆದುಕೊಂಡರು. ಆ ಬಳಿಕ ಅವರ ಪ್ರತಿಭೆ ಕಂಡ ಸೌಮ್ಯ ಅವರು ಆಲ್ಬಂ ಸಾಂಗ್ ನಿರ್ಮಾಣ ಮಾಡಲು ಮುಂದಾದರು. ಅಂದಹಾಗೆ, ಈ ಆಲ್ಬಂ ವೀಡಿಯೋ ಸಾಂಗ್‌ಗೆ ಹೊನ್ನವಳ್ಳಿ ಕೃಷ್ಣ ಅವರ ಪುತ್ರ ಶ್ರೀಕಾಂತ್ ಹೊನ್ನವಳ್ಳಿ ನಿರ್ದೇಶಕರು.
ಇನ್ನು, ಕುಚುಪುಡಿ ಕುಮಾರ್ ಆ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ದಿಲೀಪ್ ಅವರಿಗೆ ಜೋಡಿಯಾಗಿ ಇಂದು ಲೇಖ ಕಾಣಿಸಿಕೊಂಡಿದ್ದಾರೆ. ಎಸ್.ಆರ್.ರಾಮಕೃಷ್ಣ ಸಂಗೀತ ನಿರ್ದೇಶನವಿದೆ. ಮಡಿಕೇರಿ ಮುಖೇಶ್ ಹಾಡಿದ್ದರೆ. ವಿ.ಎ.ಎನ್.ಮೂರ್ತಿ ಮತ್ತು ಸತೀಶ್‌ರಾಜೇಂದ್ರನ್ ಛಾಯಾಗ್ರಹಣವಿದೆ. ದುರ್ಗಪ್ರಸಾದ್ ಸಂಕಲನ ಮಾಡಿದ್ದಾರೆ. ಮೂರು ದಿನಗಳ ಕಾಲ ಚಿತ್ರೀಕರಿಸಿರುವ ಈ ಆಲ್ಬಂ ಸಾಂಗ್ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿದೆ.