Advertisement
ಹೌದು. ಕರಾವಳಿಗೆ ಯಕ್ಷಗಾನ ಆಪ್ತವಾದಷ್ಟು ಅನ್ಯಾನ್ಯ ಅಭಿಜಾತೀಯ ಸಂಗೀತವೋ ಅಥವಾ ನೃತ್ಯವೋ ಹತ್ತಿರವಾದದ್ದಿಲ್ಲ. ಅದು ಯಕ್ಷಗಾನದ ಅನನ್ಯತೆಯೂ ಹೌದು. ಕರಾವಳಿಯಲ್ಲಿ ತಿಪ್ಪರಲಾಗ ಹಾಕಿದರೂ ಯಕ್ಷಗಾನವನ್ನು ಪಕ್ಕಕ್ಕೆ ಸರಿಸಿಯೋ, ಮೀರಿಯೋ ಮುಂದೆ ಹೋಗಲಿಕ್ಕಾಗದು ಎಂಬ ನುಡಿ ಅಕ್ಷರಶಃ ದಿಟ. ಆದ್ದರಿಂದಲೋ ಏನೋ ಉಳಿದ ಕಲೆಗಳು ಯಕ್ಷಗಾನದ ಅನಂತರದ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಕರ್ನಾಟಕ ಸಂಗೀತ ಮತ್ತು ಭರತನಾಟ್ಯ ಬಹುವಾಗಿ ಪ್ರಚುರವಾದ ಈ ಕಾಲಕ್ಕೂ ಯಕ್ಷಗಾನ ಈ ನಾಡಿನ ವಿರಾಡ್ರೂಪ. ಅಷ್ಟರಮಟ್ಟಿಗೆ ಯಕ್ಷಗಾನ ಸಂಪೂರ್ಣ ಕ್ರೀಡನೀಯಕ ಕಲೆ.
Related Articles
Advertisement
ಇದನ್ನು ಬೇರೊಂದು ಬಗೆಯಲ್ಲಿ ಅವಲೋಕಿಸುವುದಾದರೆ ತಮಿಳುನಾಡಿನಿಂದ ಬಂದರೇನೇ ಕಲೆ, ಕಲೆಯ ತವರೂರೆಂದರೆ ತಮಿಳುನಾಡು. ಅಲ್ಲಿಗೆ ಹೋಗಿ ಕಲಿತುಕೊಂಡರೆ, ಅಲ್ಲಿಂದ ಸ್ವೀಕೃತವೆನಿಸಿಕೊಂಡರೇನೇ ಪರಿಪೂರ್ಣ ಎಂಬ ಮಟ್ಟಿಗಿನ ಧೋರಣೆ. ಇನ್ನೊಂದಿಷ್ಟು ಕಲಾವಿದರಂತೂ ಪ್ರಚಲಿತದಲ್ಲಿರುವ ತಮಿಳುದೇಶೀಯ ಕಲಾವಿದರ ಶೈಲಿಯನ್ನು ಅನುಕರಿಸುವುದರಲ್ಲಿಯೇ ಪರಮಾರ್ಥ ಕಂಡಿದ್ದೂ ಇದೆ. ಅದೇನೇ ಇರಲಿ, ಒಳ್ಳೆಯದು ಎಂಬುದಿದ್ದರೆ ಅದಕ್ಕೆ ಕಾಲ-ದೇಶದ ಹಂಗು ಏತಕ್ಕೆ? ಪ್ರಭಾವ-ಪ್ರೇರಣೆ ಯಾವ ದಿಕ್ಕಿನಿಂದ ಬಂದರೂ ಸರಿಯೇ ಸಂಸ್ಕೃತಿ-ಸಂಸ್ಕಾರದ ದೃಷ್ಟಿ ವಿಶಾಲವಾಗುತ್ತಾ ಪ್ರತಿಭೆಯು ಸ್ವಂತಿಕೆಯ ದೀವಟಿಗೆಯಲ್ಲಿ ಪ್ರಕಾಶಿಸುವುದಿದ್ದರೆ ಅದು ಎಂದೆಂದಿಗೂ ಸ್ವಾಗತಾರ್ಹ.
ಈ ನಡುವಿನಲ್ಲಿ ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿ ಕಳೆದ ಸುಮಾರು 20 ವರ್ಷಗಳನ್ನು ಅತ್ಯಂತ ಮಹತ್ವದ ಕಾಲವನ್ನಾಗಿ ಪರಿಗಣಿಸಬಹುದೆನಿಸುತ್ತದೆ. 90ರ ದಶಕದಲ್ಲಿ ಉಭಯ ಜಿಲ್ಲೆಗಳಲ್ಲಿ ಕೆಲವು ಸಂಘಟನಾ ಸಂಸ್ಥೆಗಳು ಹುಟ್ಟಿಕೊಂಡು ಅತ್ಯಂತ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ್ದವು. ಸಂಗೀತ ಪರೀಕ್ಷೆಗಳಲ್ಲಿ ಹಲವು ಕೋಗಿಲೆಗಳ ಕೂಜನ ಮೊದಲಾಯಿತು. ವಿದ್ವತ್, ಎಂ.ಮ್ಯೂಸಿಕ್ ಪದವಿ ಪರೀಕ್ಷೆಗಳನ್ನು ಆಸಕ್ತಿಯಿಂದ ಧ್ಯಾನಿಸುವ ಪ್ರವೃತ್ತಿ ಹೆಚ್ಚಿತು. ಉಡುಪಿ ಪರ್ಯಾಯಗಳಲ್ಲಿ ಅಷ್ಟಮಠಗಳ ಆಯೋಜಕತ್ವದ ಧನ್ಯತೆಯಲ್ಲಿ ಕರಾವಳಿಯ ಪ್ರತಿಭೆಗಳಷ್ಟೇ ಅಲ್ಲದೆ ಸಮಗ್ರ ಕರ್ನಾಟಕದ ಕಲಾವಿಸ್ತೀರ್ಣದ ವ್ಯಾಸವನ್ನು ಪರಿಚಯಿಸುವಂತಾಯಿತು.
ಅಂದಿಗೆ ಕೀರ್ತಿಶಾಲಿ ಪ್ರತಿಭಾನ್ವಿತ ಕಲಾವಿದರ ಕಛೇರಿಗಳನ್ನು ಒಳಗಿಳಿಸಿಕೊಂಡ ಮೊಳಕೆ ಇಂದು ಬೆಳೆದು ಮರವಾಗುವ ಲಕ್ಷಣ. ಕೇಳ್ಮೆಯಿಂದಲೂ ಪ್ರೇಕ್ಷಣತ್ವದಿಂದಲೂ ಕಲೆಯ ಸೆಲೆ ಬಲವಾಗುತ್ತದೆ ಎಂಬುದು ಇದಕ್ಕೇ ಅಲ್ಲವೇ? ಹಾಗಾಗಿ ಪ್ರೇಕ್ಷಕತ್ವದಿಂದ ಕಲಾವಿದನಾಗುವತ್ತ ಮುಂಬಡ್ತಿ ಸಿಕ್ಕಿದೆ ಕರಾವಳಿಗರಿಗೆ. ಅದರಲ್ಲೂ 2000ನೇ ಇಸವಿ ಕರಾವಳಿಯ ಕರ್ನಾಟಕ ಸಂಗೀತದಲ್ಲಿ ಸುವರ್ಣಾಕ್ಷರಗಳಿಂದ ದಾಖಲಿಸಬೇಕಾದ ವರ್ಷ. ರಾಗಧನ, ಸಂಗೀತಪರಿಷತ್, ಶಾಸ್ತ್ರೀಯ ಸಂಗೀತ ಸಭಾ ಸಂಸ್ಥೆಗಳಿಗೆ ಕಾರ್ಯಕ್ರಮ ನೀಡಲು ಬರುತ್ತಿದ್ದ ಹೊರನಾಡಿನ ಕಲಾವಿದರನ್ನು ಕಂಡು-ಕೇಳಿ ತಾವೂ ಅವರಂತೆಯೇ ಆಗಬೇಕೆಂಬ ಹಂಬಲ ಹೊತ್ತ ಹುಟ್ಟಿಕೊಂಡ ದಿನಗಳಾಗಿದ್ದವು. ಸಂಗೀತಕ್ಕೇ ಸಂಬಂಧಿಸಿ ಶಿಸ್ತಿನ ಓದು ಮತ್ತು ಗ್ರಹಿಕೆಗೆ ಮಾಸಿಕಗಳು ಪ್ರಕಟವಾಗತೊಡಗಿದವು. ಚಿಣ್ಣರು, ಪ್ರೌಢರು, ಯುವಕರು, ವೃದ್ಧರು ಎಂಬ ಬೇಧವಿಲ್ಲದೆ ಪ್ರೇಕ್ಷಕ ಕಲಾವಿದನಾಗುವತ್ತ ಹೆಜ್ಜೆ ಇರಿಸಿದ್ದ. ಇದೇ ಸಂದರ್ಭ ಚೆಂಗ್ಲಪೇಟ್ ರಂಗನಾಥನ್ ಉಡುಪಿಯಲ್ಲಿ ಒಂದು ವಾರ ಕಾಲ ಕಲಾವಿದರಿಗಾಗಿಯೇ ಕಾರ್ಯಾಗಾರ ನಡೆಸಿದರು. ಅಲ್ಲಿಂದ ಮುಂದಿನ ನಡೆಗಳೆಲ್ಲ ಕರಾವಳಿಯ ಕರ್ನಾಟಕ ಸಂಗೀತ ಪ್ರಪಂಚದ ಮಟ್ಟಿಗೆ ಕ್ರಾಂತಿಯೇ ಸರಿ.
ಇಂದು ಪೂರ್ಣ ಪ್ರಮಾಣದ ಸಂಗೀತ ಕಛೇರಿ ನೀಡಬಲ್ಲ ಹಲವಷ್ಟು ಯುವ ಕಲಾವಿದರು ನಮ್ಮ ಜಿಲ್ಲೆಗಳಲ್ಲಿ ಸಿದ್ಧವಾಗುತ್ತಿದ್ದಾರೆ. ಹೊರನಾಡುಗಳಲ್ಲೂ ಕಲಾವಿದರು ಮಿಂಚುತ್ತಿದ್ದಾರೆ. ಸಂಗೀತಾಭ್ಯಾಸಕ್ಕಾಗಿ ಚೆನ್ನೈಗೆ ಪ್ರಯಾಣ, ಅಲ್ಲಿನ ಸಂಗೀತ ಪ್ರಪಂಚದಲ್ಲಿ ಗುರುತಿಸಿಕೊಳ್ಳುವುದು ಇಂದು ಸರ್ವೇಸಾಮಾನ್ಯವಾಗಿದೆ. ಇನ್ನು ಮೃದಂಗ, ಪಿಟೀಲು, ಘಟ ಇತ್ಯಾದಿ ವಾದ್ಯವಿಭಾಗದಲ್ಲಿಯೂ ಕಲಾವಿದರು ಒಂದಷ್ಟು ಮಂದಿ ತಯಾರಾಗಿಬಿಟ್ಟಲ್ಲಿಗೆ ಕರಾವಳಿ ಸಂಗೀತಸಂಸ್ಕೃತಿಯ ಪ್ರಭಾವಳಿ ಶೋಭಾಯಮಾನ.
ಇವೆಲ್ಲ ಬೆಳವಣಿಗೆಗಳನ್ನು ಪ್ರೋತ್ಸಾಹಪೂರ್ವಕವಾಗಿ ಕಾಪಿಡುವ ನಿಟ್ಟಿನಲ್ಲಿ ಇದೇ ಮೊದಲಬಾರಿಗೆ ಭಾರತೀಯ ವಿದ್ಯಾಭವನ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ ನೇತೃತ್ವದಲ್ಲಿ ಯುವ ಸಂಗೀತೋತ್ಸವ ಆಗಸ್ಟ್ 26-27ರಂದು ಪುರಭವನದಲ್ಲಿ ಆಯೋಜನೆ ಯಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ, ದಾಖಲಾರ್ಹವಾಗಿ ಭವಿಷ್ಯ ದಲ್ಲೂ ಅವಿರತವಾಗಿ ಕೊಂಡೊಯ್ಯುವ ಧ್ಯೇಯವೂ ಜತೆಗೂಡಿದೆ. ಆಯ್ದ ಕಲಾವಿದ ರನ್ನು ಚೆನ್ನೈನಲ್ಲಿ ನಡೆಯಲಿರುವ ಯುವ ಸಂಗೀತೋತ್ಸವದಲ್ಲಿಯೂ ಭಾಗವಹಿಸುವಂತೆ ಮಾಡಲಾಗುತ್ತಿದೆ. ಅಂತೆಯೇ ನವೆಂಬರ್ 3-4-5ರಂದು ರಾಗಸುಧಾರಸ-2017 ಸಂಗೀತೋತ್ಸವವೂ ಸಂಪನ್ನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ನಾಡು-ಹೊರನಾಡುಗಳ ಪ್ರಸಿದ್ಧರ ಸಂಗೀತ ಕಛೇರಿಗಳಲ್ಲಿ ಭರವಸೆಯನ್ನು ಮೂಡಿಸಿರುವ ಯುವಮಾರ್ದಂಗಿಕ, ಕಲಾವಂತ ನಿಕ್ಷಿತ್ ಪುತ್ತೂರು ಇವರಿಗೆ ಯುವಕಲಾಮಣಿ-2017ನೇ ಪ್ರಶಸ್ತಿಯನ್ನು ನೀಡುವ ಸಂಕಲ್ಪ ಒಮ್ಮತದಿಂದ ಮೂಡಿದೆ. ಈ ಎಲ್ಲ ಉಪಕ್ರಮಗಳು ಉತ್ಸವರೂಪದಲ್ಲಿ ಸಂಗೀತ ಪ್ರಪಂಚದಲ್ಲಿ ಮಹಣ್ತೀಪೂರ್ಣ ಇತಿಹಾಸವನ್ನು ಬರೆಯಲಿ.
ಡಾ| ಮನೋರಮಾ ಬಿ.ಎನ್.