ವಾಟ್ಸಾಪ್ ಗ್ರೂಪ್: ಎಸ್ಸೆಸ್ಸೆಲ್ಸಿ 2005 ಬ್ಯಾಚ್
ಅಡ್ಮಿನ್: ಚಿದಾನಂದ
ಎಸ್ಸೆಸ್ಸೆಲ್ಸಿ ಮುಗಿದ ಬಳಿಕ, ನಮ್ಮ ಗೆಳೆತನವೆಲ್ಲ ದೂರವಾಗಿ, ಒಬ್ಬೊಬ್ಬರು ಒಂದೊಂದು ದಿಕ್ಕಿನತ್ತ ನಡೆದೆವು. ಎಲ್ಲರಿಗೂ ಅವರವರ ವಿದ್ಯಾಭ್ಯಾಸದ ಗುರಿ ಮುಟ್ಟುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿತ್ತು. ಆಗೊಮ್ಮೆ ಈಗೊಮ್ಮೆ ಎಂಬಂತೆ ವರ್ಷಕ್ಕೊಮ್ಮೆ ಒಂದಿಬ್ಬರು ಸಿಗುತ್ತಿದ್ದೆವಷ್ಟೇ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ, ಅವರೊಂದಿಗೆ ಮಾತಾಡಬೇಕಾದರೆ, ವಾಟ್ಸಾéಪ್ ಬರಬೇಕಾಯಿತು. ಒಂದೊಂದು ದಿಕ್ಕಿಗೆ ನಡೆದ ಗೆಳೆಯರನ್ನು ಒಂದೇ ಸೂತ್ರದಡಿ ಹಿಡಿದಿಟ್ಟಿದ್ದೇ, “ಎಸ್ಸೆಸ್ಸೆಲ್ಸಿ 2005 ಬ್ಯಾಚ್’ ಎಂಬ ವಾಟ್ಸಾಪ್ ಗ್ರೂಪ್.
ಗೆಳೆಯನೊಬ್ಬ ಪರಿಚಯವಿದ್ದ ಐದಾರು ಗೆಳೆಯರ ನಂಬರ್ ಸೇರಿಸಿ, ಒಂದು ವಾಟ್ಸಾಪ್ ಗ್ರೂಪ್ ಮಾಡಿದ. ಈ ಐದಾರು ಗೆಳೆಯರು ತಮಗೆ ಪರಿಚಯವಿದ್ದ ಗೆಳೆಯರ ವಾಟ್ಸಾಪ್ ನಂಬರ್‌ಗಳನ್ನು ಗ್ರೂಪ್‌ಗೆ ಸೇರಿಸಿದರು. ಹೀಗೆ ಒಬ್ಬರಿಂದೊಬ್ಬರಿಗೆ ಬೆಸೆದುಕೊಂಡ ಗೆಳೆತನದ ಸರಪಳಿ, ಎಲ್ಲ ಗೆಳೆಯರ ನಂಬರನ್ನೂ ಸೇರಿಸಿಕೊಂಡಿತು. ನಿತ್ಯದ ಹಾಡು ಹರಟೆಗೆ ಅದು ವೇದಿಕೆ ಆಯಿತು. ಈ ವಾಟ್ಸಾಪ್ ಗ್ರೂಪ್‌ನಿಂದ ಒಂದಾದ ನಾವೆಲ್ಲ, ಒಂದು ಪ್ರವಾಸಿ ಸ್ಥಳಕ್ಕೆ ಒಟ್ಟಿಗೆ ಹೋಗುವಂತಾಯಿತು. ಶಾಲೆಯಲ್ಲಿ ಒಂದೇ ರೂಮ್‌ನಲ್ಲಿ ಒಟ್ಟಿಗೆ ಕುಳಿತಂತೆ, ಹಸಿರು ಪರಿಸರದ ನಡುವೆ ಕುಳಿತು, ಬದುಕಿನ ಸಿಹಿ ಘಟನೆಗಳನ್ನು ಹಂಚಿಕೊಂಡೆವು.
ಸಣ್ಣಮಾರಪ್ಪ, ದೇವರಹಟ್ಟಿ