ನವದೆಹಲಿ: ದೇಶದ ಯಾವುದೇ ಭಾಗದಲ್ಲೂ ಬುಲ್ಡೋಜರ್ ಕಾರ್ಯಾಚರಣೆ ನಡೆಸಬಾರದು ಎಂಬ ಸುಪ್ರೀಂಕೋರ್ಟ್ ಆದೇಶದ ನಡುವೆಯೂ ಕಾರ್ಯಾಚರಣೆ ಮುಂದುರಿಸಿದ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೋಮವಾರ (ಸೆ.230) ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ.
ಅಕ್ಟೋಬರ್ 1ರವರೆಗೆ ಬುಲ್ಡೋಜರ್ ಬಳಸಿ ಯಾವುದೇ ಕಟ್ಟಡ ಧ್ವಂಸಗೊಳಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸಿರುವ ರಾಜ್ಯ ಸರ್ಕಾರದ ವಿರುದ್ಧ 47 ನಿವಾಸಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ.
ಸುಪ್ರೀಂಕೋರ್ಟ್ ನ ಮಧ್ಯಂತರ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದಾಗಿ ಆರೋಪಿಸಿ ಸೋನಾಪುರ್ ನಿವಾಸಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಅಸ್ಸಾಂ ಸರ್ಕಾರ ಸೋನಾಪುರ್ ನಲ್ಲಿನ ಧ್ವಂಸ ಕಾರ್ಯಾಚರಣೆ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನಿರ್ದೇಶನ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿರುವುದಾಗಿ ವರದಿ ವಿವರಿಸಿದೆ.
ಸುಪ್ರೀಂಕೋರ್ಟ್ ಜಸ್ಟೀಸ್ ಬಿಆರ್ ಗವಾಯಿ ಮತ್ತು ಜಸ್ಟೀಸ್ ಕೆವಿ ವಿಶ್ವನಾಥನ್ ಅವರಿದ್ದ ಪೀಠ, ರಾಜ್ಯ ಸರ್ಕಾರ ಮೂರು ವಾರದೊಳಗೆ ಪ್ರತಿಕ್ರಿಯೆಯ ವರದಿಯನ್ನು ನೀಡಬೇಕೆಂದು ಸೂಚನೆ ನೀಡಿದೆ.