Advertisement

ಸೋನಾಲ್‌ ಸೊಗಸು

12:30 AM Mar 20, 2019 | |

“ಪಂಚತಂತ್ರ’ದ ಅರಗಿಣಿ ಪಿಸುಗುಟ್ಟಿದ್ದೇನು?
ಮಂಗಳೂರು, ಬೆಂಗಳೂರು ಎಲ್ಲೇ ಬಂದ್ರೂ ಬಿಂದಾಸ್‌
ಅಮ್ಮನಿಗಿಂತ ಹೀರೋ ಬೇಕೇನ್ರೀ?
ಮುಂಬೈಗೆ ಹೊರಟ ಕರಾವಳಿ ಪೊಣ್ಣು 

Advertisement

ಸಿನಿಮಾ ನಟಿಯಾಗಬೇಕೆಂಬ ಅಮ್ಮನ ಕನಸನ್ನು ನನಸು ಮಾಡಲೆಂದು ಬಂದು ಸದ್ಯ ಕನ್ನಡದಲ್ಲಿ “ಗಾಳಿಪಟ’ ಹಾರಿಸಲು ಸಿದ್ಧವಾಗಿ ಬಾಲಿವುಡ್‌ಗೆ ಲಗ್ಗೆಯಿಡುತ್ತಿರುವ ಸೋನಲ್‌, ಕರಾವಳಿ ಬೆಡಗಿ. ಸ್ನೇಹಿತರ ಜೊತೆಗೂಡಿ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯೊಂದನ್ನು ನಡೆಸುತ್ತಿರುವ ಸೋನಲ್‌ ಮಹತ್ವಾಕಾಂಕ್ಷಿ ಮತ್ತು ಅತೀವ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಆ್ಯಕ್ಟಿಂಗ್‌, ಕಂಪನಿ ನಿರ್ವಹಣೆ, ಆಡಿಷನ್‌ ಹೀಗೆ ಬ್ಯುಸಿಯಾಗಿರುವ ಸೋನಲ್‌ಗೆ ಅಮ್ಮ ಎಂದರೆ ಪುಳಕವಾಗುತ್ತದೆ. ಯಾವುದೇ ಕೆಲಸ ತನ್ನಿಂದ ಆಗುವುದಿಲ್ಲ ಎಂದುಕೊಂಡಾಗಲೆಲ್ಲ, ಸೋತು ವಾಪಸ್ಸಾಗುವ ಸಂದರ್ಭಗಳಲ್ಲೆಲ್ಲಾ ಅವರಿಗೆ ಸ್ಫೂರ್ತಿ ತುಂಬಿದ್ದು ಅಮ್ಮ. ತನ್ನ ಪಯಣದಲ್ಲಿ ಅಮ್ಮನ ಕಾಣಿಕೆಯನ್ನು ನೆನೆಯುವ ಅವರ ಸಂದರ್ಶನ ಇಲ್ಲಿದೆ…

ಸಿನಿಮಾ ರಂಗಕ್ಕೆ ಬರುವ ಯೋಚನೆ ಬಂದಿದ್ದು ಯಾವಾಗ?
ಕ್ಲಿನಿಕಲ್‌ ಸೈಕಾಲಜಿಸ್ಟ್‌ ಆಗಬೇಕು ಎನ್ನುವುದು ನನ್ನಾಸೆಯಾಗಿತ್ತು. ಸಿನಿಮಾ ಬಗ್ಗೆ ಯೋಚಿಸಿಯೇ ಇರಲಿಲ್ಲ. ನಾನು ನಟಿಯಾಗಬೇಕು ಎಂಬುದು ಅಮ್ಮನ ಮಹದಾಸೆ. ಮೊದಲ ಸಿನಿಮಾ ಒಪ್ಪಿಕೊಂಡಿದ್ದು ಕೂಡ ಅಮ್ಮನ ಒತ್ತಾಸೆಯ ಮೇರೆಗೆ. ಇಂದು ನಾನು ಸಿನಿಮಾರಂಗದಲ್ಲಿದ್ದೇನೆ ಅಂತಂದರೆ ಅಮ್ಮನ ಕನಸನ್ನು ಈಡೇರಿಸಲು. ಈಗೀಗ ನನಗೂ ನಟಿಯಾಗಿ ದೊಡ್ಡ ಹೆಸರು ಮಾಡಬೇಕು, ಒಳ್ಳೊಳ್ಳೆ ಚಿತ್ರಗಳಲ್ಲಿ ನಟಿಸಬೇಕು ಅಂತ ಅನ್ನಿಸುತ್ತಿದೆ.

ಭಟ್ಟ ರ ಸಿನಿಮಾದಲ್ಲಿ ನಟಿಸಿದ ಅನುಭವ ಹೇಗಿತ್ತು?
ಭಟ್ಟರ ಸಿನಿಮಾದಲ್ಲಿ ನಟಿಸಿದರೆ ವೃತ್ತಿಜೀವನದಲ್ಲಿ ಒಂದು ಟರ್ನಿಂಗ್‌ ಪಾಯಿಂಟ್‌ ದೊರೆತಂತೆ. ಕಾಲೇಜಿನಲ್ಲಿದ್ದಾಗ ಯೋಗರಾಜ್‌ ಭಟ್‌ ಅವರ ಸಿನಿಮಾಗಳನ್ನು ಥಿಯೇಟರ್‌ಗೆ ಹೋಗಿ ನೋಡುತ್ತಿದ್ದೆ. “ಭಟ್ರ ಸಿನಿಮಾದಲ್ಲಿ ನಿನಗೆ ಅವಕಾಶ ಸಿಗಬೇಕು’ ಅಂತ ಅಮ್ಮನೂ ಹೇಳುತ್ತಿದ್ದರು. ಅಮ್ಮ ಅಂದುಕೊಂಡಿದ್ದು ನಿಜವಾಯಿತು. ಈ ಚಿತ್ರದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಸ್ವತಃ ಅವರೇ ನಟಿಸಿ ನಮಗೆ ತೋರಿಸುತ್ತಿದ್ದರು. ಸೆಟ್‌ನಲ್ಲಿ ತುಂಬಾ ತಮಾಷೆ ಇರ್ತಾ ಇತ್ತು. ಇದಕ್ಕೂ ಮೊದಲು ಕನ್ನಡದಲ್ಲಿ ನಾನು “ಅಭಿಸಾರಿಕೆ’ ಮತ್ತು “ಎಂಎಲ್‌ಎ’ ಚಿತ್ರಗಳಲ್ಲಿ ನಟಿಸಿದ್ದೆ. ಅವೂ ನನಗೆ ಉತ್ತಮ ಅನುಭವ ನೀಡಿದವು. 

ಸಿನಿಮಾ ಜರ್ನಿ ಆರಂಭವಾಗಿದ್ದು ಹೇಗೆ?
ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಅಮ್ಮ “ಮಿಸ್‌ ಮಂಗಳೂರು’ ಸೌಂದರ್ಯ ಸ್ಪರ್ಧೆಗೆ ನನಗೆ ಗೊತ್ತಿಲ್ಲದಂತೆ ನನ್ನ ಫೋಟೋ ಕಳಿಸಿದ್ದರು. ಅದರಲ್ಲಿ ಪಾಲ್ಗೊಂಡೆ. ಅಲ್ಲಿಂದ ಮುಂದೆ ತುಳು ಸಿನಿಮಾದ ಆಫ‌ರ್‌ ಬಂತು. ನನಗೆ ಸಿನಿಮಾ ಒಪ್ಪಿಕೊಳ್ಳಲು ಸ್ವಲ್ಪವೂ ಇಷ್ಟ ಇರಲಿಲ್ಲ. ಅಮ್ಮನ ಒತ್ತಾಯಕ್ಕೆ ಒಪ್ಪಿದೆ. ಆಗ ನಾನು ತುಂಬಾ ಚಿಕ್ಕವಳಿದ್ದೆ. ಜೊತೆಗೆ ನನಗೆ ತುಳು ಮಾತನಾಡಲು ಬರುತ್ತಿರಲಿಲ್ಲ. ನಮ್ಮ ಮನೆ ಭಾಷೆ ಕೊಂಕಣಿ. ಹೊರಗಡೆ ಕನ್ನಡ ಮಾತನಾಡುತ್ತಿದ್ದೆ. ತುಳು ಸಿನಿಮಾ ನಟಿಗೆ ತುಳುವೇ ಬರುವುದಿಲ್ಲ ಎಂದು ಅನೇಕರು ಎಲ್ಲಾ ಗೇಲಿ ಮಾಡಿದ್ದರು. ಇದೇ ನಿನ್ನ ಮೊದಲ ಮತ್ತು ಕಡೇ ಸಿನಿಮಾ ಎಂದು ಮುಖಕ್ಕೆ ಹೊಡೆದಂತೆ ಹೇಳಿದವರೂ ಇದ್ದಾರೆ. ಅವರ ಮೇಲಿನ ಸಿಟ್ಟನ್ನೆಲ್ಲಾ ಅಮ್ಮನ ಜೊತೆ ಜಗಳವಾಡಿ ತೀರಿಸಿಕೊಂಡಿದ್ದೆ “ನೋಡು ನಿನ್ನಿಂದ ನಾನು ಇಂಥ ಮಾತೆಲ್ಲ ಕೇಳಬೇಕಾಯ್ತು’ ಅಂತ. ಆಗ ಅಮ್ಮ ಹೇಳಿದ್ದು ಒಂದೇ ಮಾತು, “ನಿನ್ನನ್ನು ನಿಕೃಷ್ಟ ಮಾಡಿದವರ ಮುಂದೆ ಏನಾದರೂ ಸಾಧಿಸಿ ತೋರಿಸಬೇಕು’ ಎಂದು. ನನಗಷ್ಟು ಸಾಕಾಯ್ತು. ಮುಂದೆ ತುಳು ಕಲಿತೆ. 3 ತುಳು ಸಿನಿಮಾ ಮಾಡಿದೆ. ಈಗ ಮೂರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದೇನೆ. ಇನ್ನೆರಡು ಕನ್ನಡ ಚಿತ್ರಗಳಿಗೆ ಸಹಿ ಹಾಕಿದ್ದೇನೆ.

Advertisement

ಸದ್ಯದಲ್ಲೇ ಬಾಲಿವುಡ್‌ಗೆ ಹಾರಲಿದ್ದೀರಂತೆ. ಬಾಲಿವುಡ್‌ ಅವಕಾಶ ಗಿಟ್ಟಿಸಿಕೊಂಡ ಬಗೆ ಹೇಳಿ.
ಯಾವ ಅವಕಾಶವೂ ಸುಲಭವಾಗಿ ಸಿಗುವುದಿಲ್ಲ. ನಾನು ಮತ್ತು ಅಮ್ಮ ಒಂದು ವರ್ಷ ಮುಂಬೈಗೆ ಹೋಗಿ ನೆಲೆಸಿದ್ದೆವು. ಪ್ರತೀ ದಿನ ನಾನು ಆಡಿಷನ್‌ಗಳನ್ನು ಕೊಡುತ್ತಿದ್ದೆ. ಒಮ್ಮೆ ಮರಾಠಿ ಸಿನಿಮಾಗೆ ಆಡಿಷನ್‌ ಕೊಡಲು ಹೋಗಿದ್ದೆ, ಆಡಿಷನ್‌ ಕೊಟ್ಟು ಬಂದ ಬಳಿಕ ತಿಳಿಯಿತು, ನಾನು ಹಿಂದಿ ಸಿನಿಮಾಕ್ಕೆ ಆಯ್ಕೆ ಆಗಿದ್ದೇನೆ ಎಂದು. “ಸಾಜನ್‌ ಚಲೋ ಸಸುರಾಲ್‌ -2′ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ. ದೊಡ್ಡ ತಾರಾಗಣ ಇರುವ ಚಿತ್ರ. ಸಹಜವಾಗಿ ತುಂಬಾ ಎಕ್ಸೆ„ಟ್‌ ಆಗಿದ್ದೇನೆ.

ಸ್ವಂತ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯನ್ನೂ ನಡೆಸುತ್ತಿದ್ದೀರಂತೆ…
ಹೌದು. “ಫ್ಯಾಷನ್‌- ಎಬಿಸಿಡಿ’ ಎಂಬ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯನ್ನು ನಾನು ಮತ್ತು ನನ್ನ ಸ್ನೇಹಿತರು ಸೇರಿ ನಡೆಸುತ್ತಿದ್ದೇವೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ಶೋ, ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸುತ್ತೇವೆ. ನಾನು ಶೋ ಡೈರೆಕ್ಟ್ ಮಾಡುತ್ತೇನೆ. ನಮ್ಮದೇ ಕಂಪನಿಯಾದ್ದರಿಂದ ಹಲವು ಜವಾಬ್ದಾರಿಗಳಿರುತ್ತವೆ. ಜೊತೆಗೆ ಸಿನಿಮಾ ಡೇಟ್ಸ್‌ಗೂ ಹೊಂದಾಣಿಕೆಯಾಗುವಂತೆ ಆ ಕೆಲಸಗಳನ್ನು ನಿರ್ವಹಿಸಬೇಕು. ಕೆಲವೊಮ್ಮೆ ಸಾಕಷ್ಟು ಒತ್ತಡವಿರುತ್ತದೆ. ಏನಿದ್ದರೂ ನಿಭಾಯಿಸುವ ಆತ್ಮವಿಶ್ವಾಸವಿದೆ. ಕೆಲವೊಮ್ಮೆ ಬೆಂಗಳೂರು, ಮುಂಬೈ, ಮಂಗಳೂರಿನ ಮಧ್ಯೆ ಓಡಾಡುವುದರಲ್ಲಿಯೇ ಸಮಯ ಕಳೆದಿರುತ್ತೇನೆ. ನಾನೂ ಮಾಡೆಲ್‌ ಆಗಿದ್ದು ಈ ಫೀಲ್ಡ್‌ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅನುಕೂಲವಾಯಿತು.

“ಪಂಚತಂತ್ರ’ ಸಿನಿಮಾದಲ್ಲಿ ಅಷ್ಟೊಂದು ಕಷ್ಟದ ಡ್ಯಾನ್ಸ್‌ ಮಾಡಿದ್ದೀರಿ? ಮೂಲತಃ ನೀವು ಡ್ಯಾನ್ಸರ್ರಾ?
ಇಲ್ಲಪ್ಪಾ… ನಾನು ಸಿಂಗರ್‌, ತುಳು ಚಿತ್ರಗಳಿಗೆ ಹಾಡಿದ್ದೇನೆ. “ಪಂಚತಂತ್ರ’ದ ಆ ನೃತ್ಯಕ್ಕೆ 25 ದಿನಗಳ ಕಾಲ ಅಭ್ಯಾಸ ಮಾಡಿದ್ದೆವು. ಅದೂ ಬೆಳಗ್ಗೆ ಮುಂಚೆ ಖಾಲಿ ಹೊಟ್ಟೆಯಲ್ಲಿ. ಆ ಹಾಡಿನ ಶೂಟಿಂಗ್‌ ಮುಗಿದ ಬಳಿಕ ನಾನು ಮತ್ತು ಹೀರೊ ಇಬ್ಬರಿಗೂ ಜ್ವರ ಬಂದಿತ್ತು. ಶೂಟಿಂಗ್‌ ಮಧ್ಯೆ ಸ್ನಾಯು ಮುರಿತ ಎಲ್ಲಾ ಆಗಿತ್ತು. 

ನಿಮ್ಮ ಸೌಂದರ್ಯದ ರಹಸ್ಯ
ನಾನು ತ್ವಚೆ ರಕ್ಷಣೆಗೆ ಬಳಸುವ ಶೇ.98 ರಷ್ಟು ಉತ್ಪನ್ನಗಳು ನನ್ನ ಅಡುಗೆ ಮನೆಯದ್ದು. ಬಿಸಿಲಿನಲ್ಲಿ ಶೂಟಿಂಗ್‌ ಮಾಡಿ ಬಂದರೆ ತಪ್ಪದೇ ಮೊಸರು ಹಚ್ಚುತ್ತೇನೆ. ಅದು ಬಿಟ್ಟರೆ ಪಪಾಯ ಹಚ್ಚುವುದು, ಜೇನುತುಪ್ಪ ಮತ್ತು ಸಕ್ಕರೆ ಬಳಸಿ ನಾನೇ ಸðಬ್‌ ತಯಾರಿಸುತ್ತೇನೆ. ಮೊಸರು, ಗೋದಿ ಹಿಟ್ಟು, ಅರಿಶಿಣದ ಫೇಸ್‌ಪ್ಯಾಕ್‌ ಎಲ್ಲದಕ್ಕಿಂತ ಹೆಚ್ಚು ಪರಿಣಾಮಕಾರಿ. ಜೊತೆಗೆ ಹೆಚ್ಚು ನೀರು ಕುಡಿಯುತ್ತೇನೆ. ಕೆಲವೊಮ್ಮೆ ಈವೆಂಟ್‌ ಆರ್ಗನೈಸಿಂಗ್‌, ಸಿನಿಮಾ ಶೂಟಿಂಗ್‌ ಅಂತ ತುಂಬಾ ಬ್ಯುಸಿ ಇರುತ್ತೇನೆ. ಆಗೆಲ್ಲ ನಿದ್ದೆಯಿಲ್ಲದೇ ಮುಖದಲ್ಲಿ ಫ್ರೆಶ್‌ನೆಸ್‌ ಇರುವುದಿಲ್ಲ. ಮುಖ ಫ್ರೆಶ್‌ ಕಾಣಲು ಒಂದು ಉಪಾಯವಿದೆ. ಒಂದು ಬಟ್ಟಲಿಗೆ ನೀರು ಮತ್ತು ಐಸ್‌ಕ್ಯೂಬ್‌ ಹಾಕಿ ಮುಖವನ್ನು ಅದರಲ್ಲಿ ಎದ್ದಬೇಕು. ಆಗ ಮುಖ ಸ್ವಲ್ಪ ಫ್ರೆಶ್‌ ಕಾಣುತ್ತದೆ. ಜೀವನದಲ್ಲಿ ಫಿಟ್‌  ಆಗಿರುವುದು ಕೂಡಾ ಬಹಳ ಮುಖ್ಯ. ಅದಕ್ಕಾಗಿ ನಾನು ಹೆಚ್ಚು ಸರ್ಕಸ್‌ ಮಾಡುವುದಿಲ್ಲ. ಮನೆಯಲ್ಲೇ ಇಂಟರ್‌ನೆಟ್‌ ನೋಡಿಕೊಂಡು ವ್ಯಾಯಾಮ ಮಾಡುತ್ತೇನೆ.

ಬೆಂಗಳೂರಿನಲ್ಲಿ ನಿಮ್ಮ ಫೇವರೆಟ್‌ ರೆಸ್ಟೊರೆಂಟ್‌ ಯಾವುದು?
ನಾನು ಕುಡ್ಲದ ಮಗಳು, ಹೀಗಾಗಿ ಮೀನು ನನ್ನ ಫೇವರೀಟ್‌. ಸೀ ರಾಕ್‌ ಹೋಟೆಲ್‌ನಲ್ಲಿ ಮಂಗಳೂರು ಶೈಲಿಯ ಸೀ ಫ‌ುಡ್‌ ಚೆನ್ನಾಗಿರುತ್ತದೆ. ಅದು ಬಿಟ್ಟರೆ ನಾನು ಮತ್ತು ಅಕ್ಕ ಜಯನಗರದ “ಚಟ್ನಿ ಚಾಂಗ್‌’ಗೆ ಹೋಗಿ ಊಟ ಮಾಡುತ್ತೇವೆ. ಅಲ್ಲಿ ಡೆಸರ್ಟ್ಸ್ ತುಂಬಾ ಚೆನ್ನಾಗಿರುತ್ತದೆ. ನಾನೇ ಮನೆಯಲ್ಲಿ ಪಾಸ್ತಾ, ಇಟಾಲಿಯನ್‌ ಫ‌ುಡ್‌, ಕ್ಯಾರಮೀಲ್‌ ಕಸ್ಟರ್ಡ್‌ ತಯಾರಿಸುತ್ತೇನೆ. 

ಶಾಪಿಂಗ್‌ ಮೋಹ ಹೇಗಿದೆ?
ನಾನು ಫ್ಯಾಷನ್‌ನಲ್ಲಿ ಅಪ್‌ಡೇಟೆಡ್‌ ಇಲ್ಲ. ನನಗೆ ಕಂಫ‌ರ್ಟ್‌ ಎನಿಸುವ ಡ್ರೆಸ್‌ ಖರೀದಿಸುತ್ತೇನೆ. ಹೀಗಾಗಿ ನಾನು ಬಟ್ಟೆ ಶಾಪಿಂಗ್‌ಗೆ ಹೋಗುವುದು ಕಮ್ಮಿ. ಕಾಸೆಟಿಕ್ಸ್‌ ಶಾಪಿಂಗ್‌ ಮಾಡಲು ತುಂಬಾ ಇಷ್ಟ. ನನ್ನ ಹತ್ತಿರ ಬಹುತೇಕ ಬ್ರಾಂಡ್‌ಗಳ ಎಲ್ಲಾ ಬಣ್ಣಗಳ ಲಿಪ್‌ಸ್ಟಿಕ್‌ ಇವೆ. 

ಮನೆಯಲ್ಲಿ ಅಮ್ಮನ ಮಗಳು
ಅಮ್ಮ ಫ‌ುಲ್‌ ಖುಷ್‌. ಯೋಗರಾಜ್‌ ಭಟ್‌ಅವರ “ಗಾಳಿಪಟ-2′ ಸಿನಿಮಾಕ್ಕೆ ಆಯ್ಕೆ ಆಗಿದ್ದು ಅವರಿಗೆ ಹೆಚ್ಚು ಖುಷಿ ತಂದಿದೆ. ನಾನು ಅಮ್ಮನ ಕನಸು ನೆರವೇರಿಸುತ್ತಿದ್ದೇನೆ. ಭಟ್ಟರು ನನ್ನ ಕನಸು ನೆರವೇರಿಸಿಕೊಳ್ಳಲು ಮತ್ತೂಂದು ಉತ್ತಮ ಅವಕಾಶ ನೀಡಿದ್ದಾರೆ. ಅಮ್ಮನಿಗೆ ನನ್ನ ಬಗ್ಗೆ ಎಷ್ಟೇ ಖುಷಿ ಇದ್ದರೂ ಮನೆಯಲ್ಲಿದ್ದಾಗ ನಾನು ಅವರ ಮಗಳಂತೆಯೇ ಇರಬೇಕೆಂದು ಬಯಸುತ್ತಾರೆ. “ಹೊರಗಡೆ ನೀನು ಏನಾಗಿದ್ದೀಯೋ ನನಗೆ ಬೇಕಿಲ್ಲ. ಮನೆಯಲ್ಲಿದ್ದೀಯ ಮನೆಗೆಲಸ ಮಾಡು’ ಅಂತ ಹೇಳ್ತಾರೆ. ಮನೆಯಲ್ಲಿ ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಎಲ್ಲವನ್ನೂ ಮಾಡುತ್ತೇನೆ. 

ಒಂಟಿತನ ಕಾಡುತ್ತಿತ್ತು…
ಮಂಗಳೂರು ಬಿಟ್ಟು 5 ವರ್ಷಗಳಾದವು. ಶುರುವಿನಲ್ಲಿ ಮಂಗಳೂರನ್ನು, ಮನೆಯಡುಗೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅಲ್ಲದೆ ಇಲ್ಲಿ ಯಾರೂ ಫ್ರೆಂಡ್ಸ್‌ ಇರಲಿಲ್ಲ. ಕೆಲವೊಮ್ಮೆ ತುಂಬಾ ಒಂಟಿತನ ಕಾಡುತ್ತಿತ್ತು. ಅಮ್ಮ ದಿನಕ್ಕೆ 10 ಬಾರಿ ಕಾಲ್‌ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಆಗೆಲ್ಲಾ ಹೆಚ್ಚಾಕಮ್ಮಿ ಅಮ್ಮನ ಜೊತೆ ಹರಟೆ ಹೊಡೆದೇ ಸಮಯ ಕಳೆಯುತ್ತಿದ್ದೆ. ಆಮೇಲೆ ಬೆಂಗಳೂರು ಅಭ್ಯಾಸ ಆಯಿತು. ಈಗಂತೂ “ಪಂಚತಂತ್ರ’ ಸಿನಿಮಾ ತಂಡದವರೆಲ್ಲರೂ ಕುಟುಂಬದವರಂತೆಯೇ ಆಗಿಬಿಟ್ಟಿದ್ದೇವೆ. ಈಗೇನಾದರೂ ಸಹಾಯ ಬೇಕಿದ್ದರೆ ಅವರಲ್ಲೇ ಯಾರಿಗಾದರೂ ಕರೆ ಮಾಡುತ್ತೇನೆ. 

ಹೋಂವರ್ಕ್‌ ಮಾಡ್ಕೊಂಡು, ಸೆಟ್‌ಗೆ ಹೋಗ್ತಿನಿ…
ಮೊದಮೊದಲಿಗೆ ಡೈಲಾಗ್‌ ಡೆಲಿವರಿ ಮಾಡುವಾಗ ಕಷ್ಟವಾಗ್ತಾ ಇತ್ತು. ಈಗೀಗ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ಸ್ಕ್ರಿಪ್ಟ್ 2 ದಿನಗಳ ಮೊದಲೇ ತರಿಸಿಕೊಂಡು ಮನೆಯಲ್ಲಿ ಅಭ್ಯಾಸ ಮಾಡಿಕೊಂಡು ಸೆಟ್‌ಗೆ ಹೋಗುತ್ತೇನೆ. ಅಲ್ಲಿ ಹೋಗಿ ಸಾಕಷ್ಟು ಟೇಕ್‌ ತೆಗೆದುಕೊಳ್ಳುವುದಕ್ಕಿಂತ ಮನೆಯಲ್ಲಿ ತಯಾರಾಗಿ ಹೋಗುವುದು ಒಳ್ಳೆಯದು. ಬೆಂಗಳೂರಲ್ಲಿದ್ದು ಈಗೀಗ ಬೆಂಗಳೂರು ಶೈಲಿಯ ಕನ್ನಡವೂ ಅಭ್ಯಾಸವಾಗುತ್ತಿದೆ.

ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next