ಮುದ್ದೇಬಿಹಾಳ: ನೀರ ಮೇಲಿನ ಗುಳ್ಳೆ ನಿಜವಲ್ಲ ಎನ್ನುವ ಹಾಗೆ ಮನುಷ್ಯನ ಜೀವನದಲ್ಲೂ ಕೂಡ ಯಾವುದೇ ಕ್ಷಣದಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು.ಇದು ಸಾಧನೆಯ ಶ್ರಮ ವಿಧಿಯಾಟದ ಮುಂದೆ ಮರೆಯಾಗಿ ಹೋದ ದುರಂತ ಸಾಧಕನ ಕಥೆ. ಎಲ್ಲರ ಕಣ್ಣಂಚನ್ನು ತೇವಗೊಳಿಸುವಂತಹ ಸುದ್ದಿ.ಹಲವಾರು ವರ್ಷ ಶ್ರಮ ಹಾಕಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆಯುವ ಹೊತ್ತಿಗೆ ಕೋವಿಡ್ ಮಹಾಮಾರಿಗೆ ಉಪನ್ಯಾಸಕರೊಬ್ಬರು ಬಲಿಯಾಗಿದ್ದು, ತಂದೆಯ ಪರವಾಗಿ ಮಗ ಪದವಿ ಸ್ವೀಕರಿಸಿದ್ದು ಎಲ್ಲರ ಕಣ್ಣಂಚಲ್ಲಿ ನೀರು ಜಿನುಗುವಂತೆ ಮಾಡಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಆಲೂರು ಗ್ರಾಮದ ರಾಘವೇಂದ್ರ ಗೂಳಿ ಅವರು ನಾಲತವಾಡದ ವೀರೇಶ್ವರ ಬಿಎಡ್ ಕಾಲೇಜಿನಲ್ಲಿ ಇಂಗ್ಲೀಷ್ ವಿಷಯದಲ್ಲಿ ಉಪನ್ಯಾಸಕ ವೃತ್ತಿ ಮಾಡುತ್ತಲೇ, ಡಾ. ಪ್ರಭಾ ಗುಡ್ಡದಾನೇಶ್ವರಿ ಅವರ ಮಾರ್ಗದರ್ಶನಲ್ಲಿ “IMPACTS OF DIALOGUE METHOD ON ACHIEVEMENT AND IMPROVEMENT IN ENGLISH LANGUAGE SKILLS OF NINTH STANDARD” ಎಂಬ ವಿಷಯದ ಮೇಲೆ ಪಿಎಚ್ ಡಿ ಗೆ ನೋಂದಾಯಿಸಿಕೊಂಡು ಮಹಾಪ್ರಬಂಧವನ್ನು ಮಂಡಿಸಿದ್ದರು. ಅವರು ಮಂಡಿಸಿದ್ದ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯ ಮನ್ನಣೆ ನೀಡಿ ರಾಘವೇಂದ್ರ ಅವರಿಗೆ ಡಾಕ್ಟರೇಟ್ ನೀಡಿತ್ತು.
ದುರಂತವೆಂದರೆ ಇದೇ ಮೇ 26 ರಂದು ಕೋವಿಡ್ ಸೋಂಕಿಗೆ ರಾಘವೇಂದ್ರ ಬಲಿಯಾಗಿದ್ದರು. ಸಾಯುವ ಮುನ್ನ ಮಂಡಿಸಿದ್ದ ಮಹಾಪ್ರಬಂಧ ಮನ್ನಿಸಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಶುಕ್ರವಾರ ಆಯೋಜಿಸಿದ್ದ 70 ಮತ್ತು 71 ನೇ ಘಟಿಕೋತ್ಸವದಲ್ಲಿ ನೀಡಿದ ಪಿಎಚ್ ಡಿ ಪದವಿ ಪ್ರಮಾಣ ಪತ್ರವನ್ನು 14 ವರ್ಷದ ಪುತ್ರ ಮಲ್ಲಿಕಾರ್ಜುನ ಗಣ್ಯರಿಂದ ಸ್ವೀಕರಿಸಿ ತಂದೆಯ ಆಸೆ ಈಡೇರಿಸಿದ್ದಾನೆ.
ಪಿಎಚ್ ಡಿ ಪದವಿ ಸ್ವೀಕರಿಸಲು ಹಾಜರಾಗುವಂತೆ ಪತ್ರ ಬಂದಾಗ ಗೂಳಿ ಕುಟುಂಬಕ್ಕೆ ಮತ್ತೊಂದು ಬಾರಿ ಶೋಕದ ಕಟ್ಟೆ ಒಡೆದಿತ್ತು. ರಾಘವೇಂದ್ರನೆ ಇಲ್ಲ ಅಂದ ಮೇಲೆ ಪದವಿಗೇನು ಬೆಲೆ ಎಂದು ನಿರಾಶರಾಗಿದ್ದರು. ಆದರೆ ಡಾ.ರಾಘವೇಂದ್ರರ ಪರಿಶ್ರಮ ವ್ಯರ್ಥವಾಗಬಾರದೆಂದು ಎಲ್ಲರೂ ತೀರ್ಮಾನಿಸಿ ಪ್ರಮಾಣ ಪತ್ರವನ್ನು ಅವರ ನೇರ ವಾರಸುದಾರನಾದ ಮಗ ಮಲ್ಲಿಕಾರ್ಜುನ ಪಡೆದರೆ ಅವರ ಆತ್ಮಕ್ಕೆ ಚಿರಶಾಂತಿ ದೊರಕುತ್ತದೆ ಎಂದು ತಿಳಿದು ಮಾವ ಮಲ್ಲಿಕಾರ್ಜುನಗೌಡ ಎಸ್ ಪಾಟೀಲ್ ಅವರ ನಿರ್ದೇಶನದಂತೆ ಸೋದರಮಾವಂದಿರಾದ ವಿಜಯಕುಮಾರ, ರವಿಚಂದ್ರ ಮತ್ತು ರಾಘವೇಂದ್ರನ ಮಿತ್ರರೆಲ್ಲರು ಘಟಿಕೋತ್ಸವದಲ್ಲಿ ಭಾಗವಹಿಸಿ ತಂದೆಯ ಸಾಧನೆಯ ಫಲವಾದ “ಪಿ.ಎಚ್.ಡಿ ಪ್ರಮಾಣ ಪತ್ರ” ವನ್ನು ಮಗ “ಮಲ್ಲಿಕಾರ್ಜುನ” ಸ್ವೀಕರಿಸುವುದನ್ನು ಸಾಕ್ಷಿಕರಿಸಿದರು.
ವೇದಿಕೆಯ ಮೇಲಿನ ಗಣ್ಯರು ಮತ್ತು ಸಭಾಸದರೆಲ್ಲರೂ ಮೂಕವಿಸ್ಮಿತರಾಗಿ, ಕಣ್ಣು ಎವೆಯಿಕ್ಕದೆ ನೋವಿನಿಂದ ವಿಧಿಯಾಟವನ್ನು ವೀಕ್ಷಿಸಿದರು ಪ್ರೇಕ್ಷಕ ವರ್ಗದ ಕಣ್ಣಂಚಿನಲ್ಲಿ ತೇವ ತುಂಬಿ, ಹೃದಯ ಭಾರವಾದಂತೆ ಭಾಸವಾಗಿದ್ದಂತು ಸತ್ಯ. ಇಂತಹ ಮನಮಿಡಿಯುವ ಸನ್ನಿವೇಶಗಳು ಯಾವ ವೈರಿಯ ಬಾಳಿನಲ್ಲಿಯೂ ಬರಬಾರದು ಎಂಬ ಅಭಿಪ್ರಾಯ ಅನೇಕರದಾಗಿತ್ತು.
ವರದಿ : ಡಿ.ಬಿ.ವಡವಡಗಿ