ಮಂಗಳೂರು: ವೃದ್ಧ ತಾಯಿಯನ್ನು ಆಕೆಯ ಪುತ್ರಿ ಮಧ್ಯ ರಾತ್ರಿ ಮನೆಯಿಂದ ಹೊರಗೆ ಹಾಕಿದ ಘಟನೆ ನಗರದ ಪಚ್ಚನಾಡಿಯಲ್ಲಿ ನಡೆದಿದ್ದು, ಈ ಪ್ರಕರಣವು ಈಗ ಮಂಗಳೂರಿನ ಹಿರಿಯ ನಾಗರಿಕರ ಸಹಾಯವಾಣಿಯ ಅಂಗಳದಲ್ಲಿದೆ.
ಪಚ್ಚನಾಡಿಯ ಮನೆಯೊಂದರಲ್ಲಿ ತಾಯಿ ಮತ್ತು ಪುತ್ರಿ ವಾಸವಾಗಿದ್ದು, ಹಲವು ಸಮಯದಿಂದ ಅವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಕೆಲವೊಮ್ಮೆ ಪುತ್ರಿಯು ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದಳು ಎಂದು ಆರೋಪಿಸಲಾಗಿದೆ.
ಶುಕ್ರವಾರ ರಾತ್ರಿ ಇವರ ನಡುವೆ ಜಗಳ ನಡೆದಿದ್ದು, ತಡರಾತ್ರಿ 1 ಗಂಟೆ ವೇಳೆಗೆ ಪುತ್ರಿಯು ತಾಯಿಯನ್ನು ಮನೆಯಿಂದ ಹೊರಗೆ ಹಾಕಿದ್ದಾಳೆ. ಆಗ ತುಂಬಾ ಮಳೆ ಬರುತ್ತಿದ್ದು, ಇಡೀ ರಾತ್ರಿಯನ್ನು ಮಹಿಳೆಯು ಮನೆಯ ಹೊರಗೆ ಕಳೆದಿದ್ದರು. ಶನಿವಾರ ಬೆಳಗ್ಗೆ ಆಸುಪಾಸಿನ ನಿವಾಸಿಗಳು ಪುತ್ರಿಯನ್ನು ತರಾಟೆಗೆ ತೆಗೆದುಕೊಂಡ ಬಳಿಕ ತಾಯಿಯನ್ನು ಮನೆಗೆ ಸೇರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ಥಳೀಯರು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರ ಗಮನಕ್ಕೆ ತಂದು, ಪುತ್ರಿಯ ವಿರುದ್ಧ ಕ್ರಮ ಜರಗಿಸಬೇಕು ಹಾಗೂ ತಾಯಿಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದರು. ಪೊಲೀಸರು ಈ ಪ್ರಕರಣದ ಬಗ್ಗೆ ಪರಿಶೀಲಿಸುವಂತೆ ಹಿರಿಯ ನಾಗರಿಕರ ಸಹಾಯವಾಣಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಅದರಂತೆ ಶನಿವಾರ ಸಂಜೆ ಹಿರಿಯ ನಾಗರಿಕರ ಸಹಾಯವಾಣಿಯ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಜತೆ ಚರ್ಚಿಸಿ ನಿರ್ಧಾರ
“ಸದ್ಯದ ಮಟ್ಟಿಗೆ ತಾಯಿಯನ್ನು ಪುತ್ರಿ ಮನೆಗೆ ಸೇರಿಸಿಕೊಂಡಿದ್ದಾರೆ. ಆದರೆ ತಾಯಿ- ಮಗಳ ನಡುವೆ ಹಲವು ಸಮಯದಿಂದ ಜಗಳ ನಡೆಯುತ್ತಿರುವ ಕಾರಣ ವಿವಾದ ಮರುಕಳಿಸುವುದನ್ನು ಅಲ್ಲಗಳೆಯಲಾಗದು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರವಿವಾರ ರಜಾ ದಿನವಾಗಿದ್ದರಿಂದ ಏನೂ ಮಾಡಲು ಸಾಧ್ಯವಾಗಿಲ್ಲ. ಸೋಮವಾರ ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ವಿವಾದ ಬಗೆಹರಿಸಲು ಪ್ರಯತ್ನಿಸ ಲಾಗುವುದು’ ಎಂದು ಹಿರಿಯ ನಾಗರಿಕರ ಸಹಾಯವಾಣಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.