Advertisement

ಕ್ರಿಕೆಟ್‌ ಅಂಗಳದ ಸಿಬಂದಿ ಪುತ್ರನಿಗೆ ಮುಂಬಯಿ ಪರ ಆಡುವ ಯೋಗ!

07:35 AM Dec 03, 2017 | Team Udayavani |

ಮುಂಬಯಿ: ಗ್ರೌಂಡ್ಸ್‌ಮ್ಯಾನ್‌ ಓರ್ವನ ಪುತ್ರನಿಗೆ ಮುಂಬಯಿ ಅಂಡರ್‌-16 ತಂಡದ ಬಾಗಿಲು ತೆರೆದಿದೆ. ಈ ಅದೃಷ್ಟಶಾಲಿ ಸತ್ಯಂ ಚೌಧರಿ. ಈತನ ತಂದೆ ಅರುಣ್‌ ಚೌಧರಿ ಮುಂಬಯಿಯ ಸಾಂತಾಕ್ರೂಜ್‌ ಲಯನ್ಸ್‌ ಕ್ಲಬ್‌ ಅಂಗಳದಲ್ಲಿ ಕಳೆದ 26 ವರ್ಷಗಳಿಂದ ಗ್ರೌಂಡ್ಸ್‌ಮ್ಯಾನ್‌ ಆಗಿ ದುಡಿಯುತ್ತಿದ್ದಾರೆ.

Advertisement

ಶುಕ್ರವಾರ ಬರೋಡ ವಿರುದ್ಧ ಆರಂಭಗೊಂಡ ಅಂಡರ್‌-16 “ವಿಜಯ್‌ ಮರ್ಚಂಟ್‌ ಟ್ರೋಫಿ’ ಪಂದ್ಯಾವಳಿಯಲ್ಲಿ ಸತ್ಯಂ ಚೌಧರಿ ಮುಂಬಯಿ ತಂಡವನ್ನು ಮೊದಲ ಸಲ ಪ್ರತಿನಿಧಿಸಿದರು. ಸತ್ಯಂ ಲೆಗ್‌ಸ್ಪಿನ್‌ ಬೌಲರ್‌ ಆಗಿದ್ದು, ಉತ್ತಮ ಕರಾಟೆ ಪಟುವೂ ಆಗಿದ್ದಾರೆ. ಅಂಡರ್‌-52, ಅಂಡರ್‌-65 ದೇಹತೂಕ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದ ಹಿರಿಮೆ ಇವರದ್ದಾಗಿದೆ.

ಹಗಲಿಡೀ ಕ್ರಿಕೆಟ್‌ ಆಡುವ ಸತ್ಯಂ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಂದೆ ಕರ್ತವ್ಯ ನಿಭಾಯಿಸುವ ಅಂಗಳದಲ್ಲೇ ಸತ್ಯಂ ಕ್ರಿಕೆಟಿನ ಪ್ರಾಥಮಿಕ ಪಾಠಗಳನ್ನು ಕಲಿತರು. ಭಾರತದ ಮಾಜಿ ಫ‌ುಟ್‌ಬಾಲಿಗ ದಿನೇಶ್‌ ನಾಯರ್‌, ಅನಿಲ್‌ ಮುಜುಮಾªರ್‌ ಮತ್ತು ನೀಲೇಶ್‌ ವಲವಲ್ಕರ್‌ ಅವರೆಲ್ಲ ಸತ್ಯಂ ಪಾಲಿನ ಕ್ರೀಡಾ ಪೋಷಕರು.
“ನಾನು 3 ವರ್ಷಗಳ ಹಿಂದೆ ಕ್ರಿಕೆಟ್‌ ಆಡಲಾರಂಭಿಸಿದಾಗ ಮುಜುಮಾªರ್‌ ಮತ್ತು ವಲವಲ್ಕರ್‌ ಸರ್‌ ಅವರು ಲೆಗ್‌ ಸ್ಪಿನ್‌ ಬೌಲಿಂಗ್‌ ನಡೆಸುವಂತೆ ಸೂಚಿಸಿದರು. ದಿನೇಶ್‌ ಸರ್‌ ನನಗೆ ಕ್ರಿಕೆಟ್‌ ಪರಿಕರಗಳನ್ನು ಕೊಡಿಸಿದರು’ ಎಂದು ಸತ್ಯಂ ನೆನಪಿಸಿಕೊಳ್ಳುತ್ತಾರೆ.

ಶಿವಾಲ್ಕರ್‌ ತರಬೇತಿ
ಮುಂಬಯಿಯ ಲೆಗ್‌ಸ್ಪಿನ್‌ ಲೆಜೆಂಡ್‌ ಪದ್ಮಾಕರ್‌ ಶಿವಾಲ್ಕರ್‌ ಅವರಿಂದ ಸತ್ಯಂ ಚೌಧರಿ “ಶಿವಾಜಿ ಪಾರ್ಕ್‌’ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಂಡರ್‌-16 “ಪಯ್ಯಡೆ ಟ್ರೋಫಿ’ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸುನೀಲ್‌ ಗಾವಸ್ಕರ್‌ ಇಲೆವೆನ್‌ ತಂಡದ ಪರ ಸರ್ವಾಧಿಕ 21 ವಿಕೆಟ್‌ ಕೀಳುವ ಮೂಲಕ ಸತ್ಯಂ “ವಿಜಯ್‌ ಮರ್ಚಂಟ್‌ ಟ್ರೋಫಿ’ಗೆ ಆಯ್ಕೆಯಾದರು. ಆದರೆ ಭಾರತದ ಕ್ರೀಡಾ ಇತಿಹಾಸದಲ್ಲಿ ಗ್ರೌಂಡ್ಸ್‌ಮ್ಯಾನ್‌ ಮಕ್ಕಳು ಕ್ರಿಕೆಟಿಗರಾಗುತ್ತಿರುವುದು ಇದೇ ಮೊದಲಲ್ಲ. ಏಕನಾಥ ಸೋಲ್ಕರ್‌, ಅಂಕುಶ್‌ ಜೈಸ್ವಾಲ್‌ ಅವರಂಥ ದೊಡ್ಡ ಹೆಸರು ಈ ಯಾದಿಯಲ್ಲಿ ರಾರಾಜಿಸುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next