ಶಿರಸಿ: “ಮಗನನ್ನು ಆರಿಸಿ ಕಳಿಸಿದ್ದು ಕೆನರಾ ಕ್ಷೇತ್ರದ ಜನ. ಈಗ ಅವನ ಮೇಲೆ ದೇಶದ ಜವಾಬ್ದಾರಿಯಿದೆ. ಅಂವ ದೇಶದ ಹಾಗೂ ಜನರ ಹಿತ ಕಾಯುವ ಕೆಲಸ ಮಾಡಲಿ, ಮಾಡುತ್ತಾನೆ’ ಇದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತಾಯಿ ಲಲಿತಾ ಅವರ ಮಾತು.
ಮಗನಿಗೆ ಅಮ್ಮ ಎಂದರೆ ಅಚ್ಚು ಮೆಚ್ಚು. ಸಚಿವರ ತಮ್ಮ ಕೃಷ್ಣಮೂರ್ತಿ ಹೆಗಡೆಯವರ ಯಲ್ಲಾಪುರದ ನಿವಾಸದಲ್ಲಿರುವ ಲಲಿತಾ ಹಾಗೂ ತಂದೆ ದತ್ತಾತ್ರೇಯ ಹೆಗಡೆ ಹಾಗೂ ಅವರ ಕುಟುಂಬದ ಎಲ್ಲರಿಗೂ ಅನಂತ ಸಚಿವರಾಗಿದ್ದು ಅಪಾರ ಸಂತಸ ತಂದಿದೆ. ಸಂಬಂಧಿಗಳು, ಕಾರ್ಯಕರ್ತರು,
ಅಭಿಮನಿಗಳು ಮನೆಗೆ ಬಂದು ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ. ಉದಯವಾಣಿ ಜತೆ ಮಾತನಾಡಿದ ಲಲಿತಮ್ಮ, “ಮಗ ಕೇಂದ್ರ ಸರಕಾರದ ಸಚಿವನಾಗಿದ್ದು ಖುಷಿ ಆಗಿದೆ. ನಿನ್ನೆ ಫೋನ್ ಮಾಡಿ ತಿಳಿಸಿದ್ದ. ನಮಗೆ ಬಡತನವಿತ್ತು. ಅವನು ಕೆಲಸ ಮಾಡಲಿ ಎಂದಿತ್ತು. ರಾಜಕಾರಣ ಸೇರಿದ. ಅದರಲ್ಲೂ ಹೆಸರು ಮಾಡಿದ. ಜನ ಸೇವೆ ಮಾಡುತ್ತಿದ್ದಾನೆ. ನಮಗೂ ಖುಷಿಯಿದೆ.
ನಮಗೆ ಅಂವ ಮಂತ್ರಿ ಆಗುತ್ತಾನೆ ಎಂದು ಗೊತ್ತಿರಲಿಲ್ಲ. ಅವನ ಜವಾಬ್ದಾರಿ ಕೂಡ ಹೆಚ್ಚಿದೆ. ಏನೇ ತೊಂದರೆಯಾದರೂ ಅವ ಮತದಾರರಿಗೆ, ದೇಶದ ಹಿತಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂಬ ಮಾತುಗಳನ್ನು ಬಿಚ್ಚಿಟ್ಟರು. ಸಚಿವರ ತಂದೆ ದತ್ತಾತ್ರೇಯ ಹೆಗಡೆ, “ಐದು ಬಾರಿ ಸಂಸದನಾಗಿದ್ದಕ್ಕೆ ಈಗ ಮಂತ್ರಿ ಸ್ಥಾನ ಸಿಕ್ಕಿದೆ. ದೇಶದ ಜವಾಬ್ದಾರಿ ಇದ್ದರೂ ಕ್ಷೇತ್ರದ ಮತದಾರರನ್ನು ನಿರ್ಲಕ್ಷ ಮಾಡಬಾರದು. ಎಂಥದ್ದೇ ಕಷ್ಟ ಬಂದರೂ, ತ್ರಾಸು ಆದರೂ ಮಗನಿಗೆ ಎದುರಿಸುವ ಛಲ, ಶಕ್ತಿ ಇದೆ. ಎಲ್ಲೇ ಆದರೂ ಭಾರತಾಂಬೆಯ ರಕ್ಷಣೆಗೆ ನಿಲ್ಲುತ್ತಾನೆ. ಮಾತೃಭೂಮಿಗಾಗಿ ಕೆಲಸ ಮಾಡಬೇಕು’ ಎಂದರು.
ಅತ್ತೆಯಲ್ಲೂ ಸಂಭ್ರಮ: ಕಷ್ಟ ಪಟ್ಟು ಮೇಲೆ ಬಂದವ. ಈಗ ಅವನ ಸಾಧನೆಗೆ ಸಿಕ್ಕ ಫಲ ಇದಾಗಿದೆ. ಮನೆಯಿಂದ ಹೊರಡುವಾಗ ಭಾವುಕನಾಗಿದ್ದ ಎಂದು ಅನಂತಕುಮಾರ ಹೆಗಡೆ ಅವರ ಅತ್ತೆ ಕೆ.ವಿಜಯವಾಣಿ ಸುಬ್ಬರಾವ್ ಮನದ ಮಾತು ಬಿಚ್ಚಿಟ್ಟು ಭಾವುಕರಾದರು. “ನಮಗೆ ಗೊತ್ತಿರಲಿಲ್ಲ. ನಾಡಿದ್ದು ವಿಶೇಷವಿದೆ. ಅದರ ಗಡಿಬಿಡಿಯಲ್ಲಿದ್ದೆವು. ನನ್ನ ಸ್ನೇಹಿತರೊಬ್ಬರು ದೂರವಾಣಿ ಕರೆ ಮಾಡಿ ಹೇಳಿದರು. ಆಗಲೇ ಗೊತ್ತಾಯಿತು. ಇದಾದ ಎರಡೇ ನಿಮಿಷದಲ್ಲಿ ಅಣ್ಣನೂ ಫೋನ್ ಮಾಡಿದ. ನಮಗೆ ಖುಷಿ ಇಮ್ಮಡಿಯಾಗಿದೆ. ಅಮ್ಮ, ಅಪ್ಪನ ಜೊತೆಗೂ ಮಾತನಾಡಿದ’ ಎಂದು ಸಚಿವರ ಸಹೋದರ ಕೃಷ್ಣಮೂರ್ತಿ ಹೆಗಡೆ ಹೇಳಿದರು.
ರಾಘವೇಂದ್ರ ಬೆಟ್ಟಕೊಪ್ಪ