Advertisement
ಚನ್ನಗಿರಿ ತಾಲೂಕಿನ ಕಾರಿಗನೂರಿನ ಬಡ ಕುಟುಂಬದಿಂದ ಬಂದಿರುವ ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್ ಸರ್ಕಾರಿ ಶಾಲೆಯಲ್ಲಿ ಓದಿದವರು. ಜೀವನದಲ್ಲಿ ಎದುರಾದ ಕಹಿ ಘಟನೆಗಳನ್ನು ಇತರರು ಎದುರಿಸು ವಂತಾಗಬಾರದು. ಮಧ್ಯಮ ವರ್ಗದಿಂದ ಬಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ಮಹೋನ್ನತ ಉದ್ದೇಶದೊಂದಿಗೆ 2004ರಲ್ಲಿ ದಾವಣಗೆರೆಯಲ್ಲಿ ಶ್ರೀ ಸೋಮೇಶ್ವರ ವಿದ್ಯಾಲಯ, 2012ರಲ್ಲಿ ಗೋಣಿವಾಡದಲ್ಲಿ ಶ್ರೀ ಸೋಮೇಶ್ವರ ರೆಸಿಡೆನ್ಸಿಯಲ್ ಸ್ಕೂಲ್ ಆರಂಭಿಸುವ ಮೂಲಕ ತಾವು ಅಂದುಕೊಂಡಿದ್ದನ್ನು ಯಶಸ್ವಿಯಾಗಿ ಸಾಕಾರಗೊಳಿಸುತ್ತಿದ್ದಾರೆ.
ಶ್ರೀ ಸೋಮೇಶ್ವರ ರೆಸಿಡೆನ್ಸಿಯಲ್ ಸ್ಕೂಲ್ ಆವರಣದಲ್ಲಿ 40 ಜಾತಿಯ ವಿವಿಧ ಗಿಡಗಳಿವೆ. 4 ಸಾವಿರಕ್ಕೂ ಹೆಚ್ಚು ಮರಗಳಿವೆ. ಮನಸ್ಸಿಗೆ ಮುದ ನೀಡುವ ಸುಂದರ ಪರಿಸರ ಹೊಂದಿದ ವಸತಿಯುತ ಶಾಲೆಯ ಪ್ರವೇಶಕ್ಕೆ ಅತ್ಯಧಿಕ ಬೇಡಿಕೆ ಬಂದರೂ 100 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಜತೆಗೆ ಮಿಲಿಟರಿ ಶಾಲೆಯಂತೆ ರೋಪ್ ವೇ ಇತರೆ ತರಬೇತಿಯನ್ನೂ ನೀಡಲಾಗುತ್ತದೆ. ದಿನವಹಿ ಪೌಷ್ಟಿಕಾಂಶದ ತಿಂಡಿ, ಊಟ, 300 ಮಕ್ಕಳ ಸಾಮರ್ಥ್ಯದ ವಿಶಾಲ ಸಭಾಂಗಣ, ಅತ್ಯಾಧುನಿಕ ಸೌಲಭ್ಯದ ಒಳಾಂಗಣ ಕ್ರೀಡಾಂಗಣ, ಗ್ರಂಥಾಲಯ ಸೌಲಭ್ಯ ಇಲ್ಲಿವೆ. ಶೇ.90 ಗ್ರಾಮೀಣ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಶ್ರೀ ಸೋಮೇಶ್ವರ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಎರಡೂ ಶಾಲೆಯಲ್ಲಿ ನೈಪುಣ್ಯತೆ, ಅನುಭವಿ ಶಿಕ್ಷಕರ ಸಮೂಹವೇ ಇದೆ. ಪ್ರತಿ ಮಗುವಿನ ಕಲಿಕೆ, ಶಿಕ್ಷಕರ ಬೋಧನಾ ವಿಧಾನ ಇತರೆ ಅಗತ್ಯ ಅಂಶಗಳ ಪರಿಶೀಲನಾ ತಂಡವೂ ಇದೆ. ರಾಜ್ಯ ಪಠ್ಯಕ್ರಮ ಶಾಲೆ ಆರಂಭವಾದಾಗಿನಿಂದಲೂ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ದಾಖಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮೂಲಕ ಜೀವನದಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
Related Articles
Advertisement
ಪ್ರತಿ ವರ್ಷ ಸೋಮೇಶ್ವರ ಉತ್ಸವ ಮೂಲಕ ವಿವಿಧ ಕ್ಷೇತ್ರದಲ್ಲಿನ ಸಾಧಕರು, ಮಕ್ಕಳಿಗೆ ಶ್ರೀ ಸೋಮೇಶ್ವರ ಸಿರಿ ಪ್ರಶಸ್ತಿಯೊಂದಿಗೆ ಗೌರವಿಸಲಾಗುತ್ತದೆ. ಅತ್ಯಧಿಕ ಅಂಕ ಪಡೆದವರಿಗೆ 25 ಸಾವಿರ, ಶೇ.90ಅಂಕ ಪಡೆದ ಮಕ್ಕಳಿಗೆ 10 ಸಾವಿರ ನಗದು ನೀಡುವ ಮೂಲಕ ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಎರಡೂ ಶಾಲೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿಯೇ ಶಿಕ್ಷಣ ನೀಡಲಾಗುತ್ತಿದೆ. ಶಾಲೆಯಲ್ಲಿ ಡಿ ಗ್ರೂಪ್ ಸಿಬ್ಬಂದಿಯೊಬ್ಬರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜತೆಗೆ ಪಾಲಿಟೆಕ್ನಿಕ್ ಮತ್ತು ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವಲ್ಲಿ ನೆರವಾದವರು ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್.
ಸೋಮೇಶ್ವರೋತ್ಸವ…ಎಂಬ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಗಾರುಡಿಗ ಡಾ| ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಂ.ಡಿ. ಪಲ್ಲವಿ, ಪ್ರೊ| ಕೃಷ್ಣೇಗೌಡ, ರಾಮ ಮೂಲಗಿ ಮುಂತಾದ ದಿಗ್ಗಜರು ಭಾಗವಹಿಸಿ ದ್ದಾರೆ. ಮಕ್ಕಳಿಗೆ ವಿವಿಧ ಕ್ಷೇತ್ರದ ದಿಗ್ಗಜರು ಮಾದರಿ ಆಗಬೇಕು. ಹಾಗಾಗಿಯೇ ಈವರೆಗೆ ಯಾವ ರಾಜಕಾರಣಿ ಗಳಿಂದ ಸೋಮೇಶ್ವರೋತ್ಸವ ಉದ್ಘಾಟಿಸಿದ ಉದಾಹರಣೆ ಇಲ್ಲ. ಸಾಧಕರು ಮಕ್ಕಳ ಸಾಧನೆಯ ಪ್ರೇರಕರು ಮತ್ತು ಪ್ರೇರಣೆಯಾಗಬೇಕು ಎಂಬುದು ನಮ್ಮ ಅಭಿಲಾಷೆ ಎನ್ನುತ್ತಾರೆ ಕೆ.ಎಂ.ಸುರೇಶ್.
ಹಣವೇ ಪ್ರಧಾನ ಆಗಬಾರದು. ಸಾಮಾಜಿಕ ಕಾಳಜಿಯೂ ಇರಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂಬ ಸೇವಾ ಮನೋಭಾವ ಅಗತ್ಯ. ನಮ್ಮ ಎರಡೂ ಶಾಲೆಯಲ್ಲಿ ಕಡಿಮೆ ಶುಲ್ಕ ಪಡೆದು, ಗುಣಮಟ್ಟದ ಶಿಕ್ಷಣ ನೀಡುವ ತೃಪ್ತಿ ಇದೆ. ಏಕೆಂದರೆ ನಾವೂ ಸಹ ಅತಿ ಕಡು ಬಡತನದಲ್ಲಿ ಬೆಳೆದು ಬಂದವರು. ಹಾಗಾಗಿ ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಥಮಾದ್ಯತೆ. ಶಾಲಾ- ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಬೇಕು. ಭವ್ಯವಾದ ಕಟ್ಟಡ, ಸೌಲಭ್ಯಕ್ಕಿಂತಲೂ ಗುಣಮಟ್ಟದ ಶೈಕ್ಷಣಿಕ ವಾತಾವರಣ ಅತೀ ಪ್ರಮುಖ ಎಂಬುದು ನಮ್ಮ ಭಾವನೆ. ಹಾಗಾಗಿಯೇ ಶ್ರೀ ಸೋಮೇಶ್ವರ ವಿದ್ಯಾಲಯ, ತಾಲೂಕಿನ ಗೋಣಿವಾಡದ ಶ್ರೀ ಸೋಮೇಶ್ವರ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಭಾರತೀಯ ಸಂಸ್ಕೃತಿಯ ಸಮ್ಮಿಳಿತದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣ ಜೀವನದ ಮಾರ್ಗದರ್ಶಿ ಆಗಬೇಕೆಂಬ ಅಭಿಲಾಷೆ ಹೊತ್ತಿರುವ ಕೆ.ಎಂ.ಸುರೇಶ್ ಅವರ ದೂರದೃಷ್ಟಿತ್ವದಲ್ಲಿ ಎರಡೂ ಶಾಲೆಗಳು ಮಕ್ಕಳ ಪಾಲಿನ ಜ್ಞಾನದೇಗುಲಗಳಾಗಿ ಸಾಗುತ್ತಿವೆ.