Advertisement

ಸೋಮೇಶ್ವರ ಪುರಸಭೆ ವಾರ್ಡ್‌ಗಳಿಗೆ ಚುನಾವಣೆ ಮೀಸಲಾತಿ ಪ್ರಕಟ

11:24 PM Feb 24, 2021 | Team Udayavani |

ಸೋಮೇಶ್ವರ: ರಾಜ್ಯದ ಅತೀ ದೊಡ್ಡ ಗ್ರಾ.ಪಂ. ಆಗಿದ್ದ ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿ ಎರಡು ವರ್ಷ ಕಳೆದ ಬಳಿಕ ಪ್ರಥಮ ಚುನಾವಣೆಗೆ ಅಣಿಯಾಗುತ್ತಿದೆ. ಈ ಹಿಂದೆ ಗ್ರಾ.ಪಂ. ಇದ್ದಾಗ 20 ವಾರ್ಡ್‌ಗಳಲ್ಲಿ 61 ಸದಸ್ಯ ಬಲವನ್ನು ಹೊಂದಿತ್ತು. ಇದೀಗ ನೂತನ ಪುರಸಭೆಯಲ್ಲಿ 23 ವಾರ್ಡ್‌ಗಳ ರಚನೆಯಾಗಿದ್ದು, ಎಲ್ಲ 23 ವಾರ್ಡ್‌ಗಳಿಗೆ ಸರಕಾರ ಮೀಸಲಾತಿ ಘೋಷಿಸಿದ್ದು ಪ್ರಥಮ ಪುರಸಭೆ ಚುನಾವಣೆಗೆ ಸೋಮೇಶ್ವರದಲ್ಲಿ ರಾಜಕೀಯ ತಾಲೀಮು ಆರಂಭಗೊಳ್ಳಲಿದೆ.

Advertisement

ಬಿಜೆಪಿ ಭದ್ರಕೋಟೆಯೆಂದೇ ಪರಿಗಣಿತವಾಗಿರುವ ಸೋಮೇಶ್ವರ ಮತ್ತು ಕುಂಪಲ ಗ್ರಾಮವನ್ನು ಒಳಗೊಂಡಿರುವ ಸೋಮೇಶ್ವರದಲ್ಲಿ 2011ರ ಜನಗಣತಿಯಂತೆ 24,066 ಜನಸಂಖ್ಯೆಯಿದ್ದು, 6,580ಕ್ಕೂ ಹೆಚ್ಚು ವಸತಿಗಳಿದ್ದು, ಜನಸಂಖ್ಯೆಯ ಆಧಾರದಲ್ಲಿ ಪಂಚಾಯತ್‌ನ್ನು ಮೇಲ್ದರ್ಜೆಗೇರಿಸುವಂತೆ ಜನಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದು, ಈ ನಡುವೆ ಚುನಾವಣ ಬಹಿಷ್ಕಾರಗಳು ನಡೆದಿದ್ದವು. ಸೋಮೇಶ್ವರಕ್ಕಿಂತ ಸಣ್ಣ ಗ್ರಾಮವಾಗಿದ್ದ ಕೋಟೆಕಾರು ಗ್ರಾ.ಪಂ. ನಾಲ್ಕು ವರ್ಷಗಳ ಹಿಂದೆ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದಾಗ ಸೋಮೇಶ್ವರವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಮತ್ತು ಗ್ರಾಮದ ಜನರ ಒತ್ತಡ ಹೆಚ್ಚಿತ್ತು. 2018ರ ಆಗಸ್ಟ್‌ ತಿಂಗಳಲ್ಲಿ ರಾಜ್ಯ ಸರಕಾರ ಸೋಮೇಶ್ವರವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. 2019 ಜುಲೈಯಿಂದ ಪುರಸಭೆಯ ಕಾರ್ಯ ಆರಂಭಗೊಂಡಿದ್ದು ತಿಂಗಳ ಬಳಿಕ ಮುಖ್ಯಾಧಿಕಾರಿಯಾಗಿ ವಾಣಿ ಆಳ್ವ ಅವರನ್ನು ನೇಮಕಗೊಳಿಸಿತ್ತು.

ಮೀಸಲಾತಿ ವಿವರ
1ನೇ ವಾರ್ಡ್‌ ಮುಂಡೋಳಿ (ಹಿಂದುಳಿದ ವರ್ಗ (ಎ)ಮಹಿಳೆ), 2ನೇ ವಾರ್ಡ್‌ ಪ್ರಕಾಶ್‌ನಗರ ( ಸಾಮಾನ್ಯ), 3ನೇ ವಾರ್ಡ್‌ ಲಕ್ಷ್ಮೀ ಗುಡ್ಡೆ-ಪ್ರಕಾಶ್‌ನಗರ (ಹಿಂದುಳಿದ ವರ್ಗ (ಬಿ) ಮಹಿಳೆ, 4ನೇ ವಾರ್ಡ್‌ ಪಿಲಾರು( ಸಾಮಾನ್ಯ), 5ನೇ ವಾರ್ಡ್‌ ಆಶ್ರಯ ಕಾಲನಿ(ಹಿಂದುಳಿದ ವರ್ಗ ಎ), 6ನೇ ವಾರ್ಡ್‌ ಬಗಂಬಿಲ (ಪರಿಶಿಷ್ಠ ಪಂಗಡ), 7ನೇ ವಾರ್ಡ್‌ ಮಡ್ಯಾರ್‌(ಪರಿಶಿಷ್ಠ ಜಾತಿ), 8ನೇ ವಾರ್ಡ್‌ ಕೃಷ್ಣನಗರ (ಸಾಮಾನ್ಯ ಮಹಿಳೆ) 9ನೇ ವಾರ್ಡ್‌ ಪಿಲಾರು ಅಂಬಿಕಾರೋಡ್‌(ಹಿಂದುಳಿದ ವರ್ಗ ಬಿ.), 10ನೇ ವಾರ್ಡ್‌ ಚೇತನ ನಗರ (ಹಿಂದುಳಿದ ವರ್ಗ (ಎ) ಮಹಿಳೆ), 11ನೇ ವಾರ್ಡ್‌ ಹನುಮಾನ್‌ನಗರ (ಸಾಮಾನ್ಯ), 12ನೇ ವಾರ್ಡ್‌ ಕುಜುಮಗದ್ದೆ (ಸಾಮಾನ್ಯ), 13ನೇ ವಾರ್ಡ್‌ ಕುಂಪಲ (ಹಿಂದುಳಿದ ವರ್ಗ ಎ), 14ನೇ ವಾರ್ಡ್‌ ಸರಸ್ವತ ಕಾಲನಿ ಲಾಲ್‌ಬಾಗ್‌ (ಸಾಮಾನ್ಯ ಮಹಿಳೆ), 15ನೇ ವಾರ್ಡ್‌ ನೆಹರೂನಗರ (ಹಿಂದುಳಿದ ವರ್ಗ (ಎ) ಮಹಿಳೆ), 16ನೇ ವಾರ್ಡ್‌ ಕನೀರುತೋಟ ಕೊಲ್ಯ (ಸಾಮಾನ್ಯ), 17ನೇ ವಾರ್ಡ್‌ ಪರ್ಯತ್ತೂರು ಕೊಲ್ಯ (ಸಾಮಾನ್ಯ) 18ನೇ ವಾರ್ಡ್‌ ಪೆರಿಬೈಲು (ಹಿಂದುಳಿದ ವರ್ಗ ಎ), 19ನೇ ವಾರ್ಡ್‌ ಬೀರಿ (ಸಾಮಾನ್ಯ ಮಹಿಳೆ), 20ನೇ ವಾರ್ಡ್‌ ಸಂಕೊಳಿಗೆ (ಸಾಮಾನ್ಯ), 21ನೇ ವಾರ್ಡ್‌ ಉಚ್ಚಿಲ (ಸಾಮಾನ್ಯ ಮಹಿಳೆ), 22ನೇ ವಾರ್ಡ್‌ ಕಾಟಂಗರೆಗುಡ್ಡೆ (ಸಾಮಾನ್ಯ ಮಹಿಳೆ), 23ನೇ ವಾರ್ಡ್‌ ಬಟ್ಟಪ್ಪಾಡಿ (ಸಾಮಾನ್ಯ ಮಹಿಳೆ)ಮೀಸಲಾತಿ ಹೊರಬಿದ್ದಿದ್ದು ಈ ಹಿಂದೆ ಇದ್ದ ಸದಸ್ಯರಲ್ಲಿ ಕೆಲವು ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಪಡೆದುಕೊಂಡರೆ, ಕೆಲವರು ಮೀಸಲಾತಿ ಸಮಸ್ಯೆಯಿಂದ ಸ್ಪರ್ಧೆಯಿಂದ ಹೊರಗುಳಿಯುವ ಸ್ಥಿತಿ ನಿರ್ಮಾಣವಾಗಿದೆ.

ಸ್ವಚ್ಛ ಸೋಮೇಶ್ವರಕ್ಕೆ ಆದ್ಯತೆ
ಸೋಮೇಶ್ವರ ಪುರಸಭೆಯಲ್ಲಿ ಇರುವ ಪೌರಕಾರ್ಮಿಕರು ಮತ್ತು ಸಿಬಂದಿ ಸಹಕಾರದೊಂದಿಗೆ ಸ್ವಚ್ಛ ಸೋಮೇಶ್ವರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರತೀ ಮನೆಯಿಂದ ಹಸಿಕಸ, ಒಣಕಸ ಬೇರ್ಪಡಿಸಿ ವಿಲೇವಾರಿ ಮಾಡಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದೆ. ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ತರಕಾರಿ ಇ-ಕೃಷಿಗೆ ಚಾಲನೆ ನೀಡಲಾಗಿದೆ. ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆಯಾಗುತ್ತಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ.

ಮೂಲಸೌಕರ್ಯ, ಸಿಬಂದಿ ಕೊರತೆ
ಸೋಮೇಶ್ವರ ಪುರಸಭೆಯಾಗಿ ಕಾರ್ಯಾರಂಭ ಮಾಡಿ 18 ತಿಂಗಳಾಗಿದ್ದು, ಮುಖ್ಯಾಧಿಕಾರಿ ವಾಣಿ ಆಳ್ವ ಮತ್ತು ಕಚೇರಿ ವ್ಯವಸ್ಥಾಪಕರು ಮಾತ್ರ ಪುರಸಭೆ ಹಂತದ ಖಾಯಂ ಸಿಬಂದಿಗಳಿದ್ದು, ಸೋಮೇಶ್ವರ ಪಂಚಾಯತ್‌ನ ನಾಲ್ವರು ಸಿಬಂದಿಗಳನ್ನು ಪುರಸಭೆ ಹಂತದ ಸಿಬಂದಿಗಳನ್ನಾಗಿ ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದು, ಉಳಿದಂತೆ ಗುತ್ತಿಗೆ ಆಧಾರದ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ಸೋಮೇಶ್ವರ ಪುರಸಭೆಗೆ ಈಗಿನ ಜನಸಂಖ್ಯೆ ಆಧಾರದಲ್ಲಿ 35 ಪೌರ ಕಾರ್ಮಿಕರು ಸಹಿತ ಒಟ್ಟು 97 ಸಿಬಂದಿಗೆ ಅನುಮೋದನೆಯಿದ್ದರೂ ಪ್ರಸ್ತುತ ಪಂಚಾಯತ್‌ ಸಿಬಂದಿ 4, ಪುರಸಭೆಯಿಂದ ನೇಮಕಗೊಂಡ ಸಿಬಂದಿ 2 ಉಳಿದೆಲ್ಲ , ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರಸಭೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಕಟ್ಟಡ ನಿರ್ಮಾಣ, ಮೂಲಸೌಕರ್ಯ ಆಗಬೇಕಾಗಿದೆ. ಪ್ರಸ್ತುತ ಉಳ್ಳಾಲ ನಗರಸಭೆಯ ಜೂನಿಯರ್‌ ಎಂಜಿನಿಯರ್‌ ವಾರದಲ್ಲಿ ಒಂದು ದಿನ ಸೋಮೇಶ್ವರ ಪುರಸಭೆಗೆ ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸೋಮೇಶ್ವರ ಪುರಸಭೆಯ ಅಭಿವೃದ್ಧಿ ಕಾರ್ಯಗಳ ಯೋಜನೆ ರೂಪಿಸಲು ಪೂರ್ಣಾವಧಿ ಎಂಜಿಯರ್‌ ಅಗತ್ಯ ಇದೆ.

Advertisement

Udayavani is now on Telegram. Click here to join our channel and stay updated with the latest news.

Next