Advertisement

ಕೆಲವೆಡೆ ಟ್ರಾಫಿಕ್‌ ಜಾಮ್‌: ಸವಾರರಿಗೆ ಕಿರಿಕಿರಿ

10:03 AM Jun 15, 2018 | |

ಮಹಾನಗರ: ನಗರದ ಕೆಲವು ಕಡೆಗಳಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಿದರು. ಅಪರಾಹ್ನ ಸುಮಾರು 1.30ರಿಂದ 3 ಗಂಟೆಯವರೆಗೆ ನಗರದ ಪ್ರಮುಖ ರಸ್ತೆಗಳಾದ ಲಾಲ್‌ಬಾಗ್‌, ಪಿವಿಎಸ್‌ ವೃತ್ತ, ಬಂಟ್ಸ್‌ ಹಾಸ್ಟೆಲ್‌, ಜ್ಯೋತಿ ಸರ್ಕಲ್‌, ಹಂಪನಕಟ್ಟೆ, ಕಂಕನಾಡಿ, ಪಂಪ್‌ವೆಲ್‌, ಬೆಂದೂರ್‌ವೆಲ್‌ ಸಹಿತ ನಗರದ ಕೆಲವು ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಅದರಲ್ಲಿಯೂ ಜ್ಯೋತಿ ವೃತ್ತ, ಬಂಟ್ಸ್‌ ಹಾಸ್ಟೆಲ್‌ ವೃತ್ತದಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗಿದ್ದು, ಟ್ರಾಫಿಕ್‌ ಪೊಲೀಸರು ಮಳೆಯ ನಡುವೆಸಾಲುಗಟ್ಟಿ ನಿಂತಿದ್ದ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಸಿಕೊಡುವಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದ ದೃಶ್ಯ ಕೂಡ ಕಂಡುಬಂತು.

Advertisement

ಶಾಲೆ ಮಕ್ಕಳಿಗೂ ತಟ್ಟಿದ ಟ್ರಾಫಿಕ್‌ ಬಿಸಿ
ಎಂ.ಜಿ. ರೋಡ್‌ನ‌ಲ್ಲಿ ಪಿವಿಎಸ್‌ ವೃತ್ತದಿಂದ ಲಾಲ್‌ಬಾಗ್‌ ವೃತ್ತದವರೆಗೂ ಅಲ್ಲಲ್ಲಿ ಜಾಮ್‌ ಉಂಟಾಗಿತ್ತು. ಮಧ್ಯಾಹ್ನ ಕಚೇರಿಯಿಂದ ಊಟಕ್ಕೆ ಹೊರಗಡೆ ಹೋಗುವವರಿಗೆ ಹಾಗೂ ಶಾಲೆಗಳಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುವವರಿಗೆ ಈ ಟ್ರಾಫಿಕ್‌ ಜಾಮ್‌ನ ಬಿಸಿ ಹೆಚ್ಚು ತಟ್ಟಿತ್ತು. ಸಾಮಾನ್ಯ ದಿನಗಳಲ್ಲಿ ಲಾಲ್‌ಬಾಗ್‌ನಿಂದ ಸ್ಟೇಟ್‌ಬ್ಯಾಂಕ್‌ಗೆ ತೆರಳಲು ಸುಮಾರು 20 ನಿಮಿಷ ಸಾಕಾಗುತ್ತದೆ. ಆದರೆ ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದ ಕಾರಣದಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾಯಿತು.

ಬಿಟ್ಟು ಬಿಟ್ಟು ಮಳೆ
ನಗರದಲ್ಲಿ ಗುರುವಾರ ಬೆಳಗ್ಗೆಯಿಂದ ಬಿಟ್ಟು ಬಿಟ್ಟು ಮಳೆಯಾಗಿದ್ದು, ಈ ಕಾರಣಕ್ಕೂ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುವುದಕ್ಕೂ ಕಾರಣವಾಗಿತ್ತು. 

ತೋಡಿನ ಕಾಮಗಾರಿ
ಈ ನಡುವೆ, ನಗರದ ಕುದ್ರೋಳಿ ಬಳಿ ತೋಡಿನ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣದಿಂದಾಗಿ ಕುದ್ರೋಳಿ ಕಡೆ ತೆರಳುವ ವಾಹನಗಳು ನವ ಭಾರತ್‌ ವೃತ್ತದಿಂದ ತೆರಳಬೇಕಾಗಿದೆ. ಗುರುವಾರ ಸಂಜೆ ಮತ್ತು ಮಧ್ಯಾಹ್ನದ ವೇಳೆ ನವ ಭಾರತ್‌ ವೃತ್ತದ ಬಳಿಯೂ ವಾಹನ ದಟ್ಟಣೆ ಹೆಚ್ಚಾಗಿತ್ತು.

ಟ್ರಾಫಿಕ್‌ ಪೊಲೀಸರ ಸಹಕಾರ
ಟ್ರಾಫಿಕ್‌ ಜಾಮ್‌ ಬಗ್ಗೆ ‘ಸುದಿನ’ಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ಟ್ರಾಫಿಕ್‌ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ‘ರಮ್ಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಊರಿನ ಮಂದಿ ಶಾಪಿಂಗ್‌ಗೆ ನಗರಕ್ಕೆ ಆಗಮಿಸುತ್ತಾರೆ. ಇದೇ ಕಾರಣದಿಂದಾಗಿ ನಗರದ ಅನೇಕ ಪ್ರದೇಶಗಳಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಈ ವೇಳೆಯಲ್ಲಿ ಎಲ್ಲ ಪ್ರಮುಖ ಸಿಗ್ನಲ್‌ ಹಾಗೂ ವಾಹನಗಳ ದಟ್ಟಣೆ ಜಾಸ್ತಿ ಇದ್ದ ರಸ್ತೆಗಳಲ್ಲಿ ಸುಗಮ ಸಂಚಾರವನ್ನು ಯಥಾಸ್ಥಿತಿಗೆ ತರುವಲ್ಲಿ ನಮ್ಮ ಟ್ರಾಫಿಕ್‌ ಪೊಲೀಸರು ಸಹಕರಿಸಿದ್ದಾರೆ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next