ಜೀವನದ ನಿಜವಾದ ಅರ್ಥವೇನು? ಬರಿ ಕಲ್ಲು-ಮುಳ್ಳುಗಳ ಪಯಣವೆ? ವಿಶ್ರಾಂತಿಯಿಲ್ಲದ ದುಡಿಮೆಯೆ? ಅಂಕವೇ ಇಲ್ಲದ ಪರೀಕ್ಷೆಯೆ? ಉತ್ತರವೇ ಇಲ್ಲದ ಪ್ರಶ್ನೆಯೆ? ನಲಿವೇ ಇಲ್ಲದ ಬರಿ ನೋವೆ? ನಗುವೇ ಇಲ್ಲದ ಬರಿ ಅಳುವೆ? ಕನ್ನಡಿಯೊಳಗಿನ ಗಂಟೆ? ನೀರ ಮೇಲಿನ ಗುಳ್ಳೆಗಳೆ? ಇರಿಯುವಂತಹ ಶೂಲವೆ? ಗುರಿಯಿಲ್ಲದ ಪಯಣವೆ? ಗೆಲುವೇ ಇಲ್ಲದೆ ಬರೀ ಸೋಲೆ? ಮುಗಿಯದ ಗೋಳಿನ ಕಥೆಗಳೆ? ಅನುಭವಿಸಿದಷ್ಟೂ ಮುಗಿಯದ ದುಃಖದ ಹಾಡುಗಳೆ? ವ್ಯಥೆಗಳ, ಕಂಬನಿಗಳ ಬಿಂದುವೇ? ಅಹಂಕಾರದ ಪ್ರತೀಕವೆ? ಅಜ್ಞಾನದ ಪ್ರತಿಬಿಂಬವೆ? ಮೂರ್ಖತೆಯ ಮೆಟ್ಟಿಲೆ? ಅಧಿಕಾರದ ದಾಹವೆ? ಕೋಪವೆ? ದ್ವೇಷವೆ? ಏನು ಹಾಗಾದರೆ…? ಹಾಗಲ್ಲ…
ಬದುಕು ಹೂವಿನ ಹಾಸಿಗೆಯಂತೆಯೂ ಆಗಬಹುದು. ಬರೀ ನೋವು-ದುಃಖಗಳೇ ಬದುಕಲ್ಲ. ನಗುವಿನ ನಿಜವಾದ ಅರ್ಥ ತಿಳಿದಿರುವವರಿಗೆ ಬದುಕಿನ ಅರ್ಥವೂ ತಿಳಿದಿರುತ್ತದೆ ಎನ್ನುವುದು ನನ್ನ ಭಾವನೆ. ಜೀವನವನ್ನು ಅಥವಾ ಬದುಕನ್ನು ಇದ್ದ ಹಾಗೆ ಸ್ವೀಕರಿಸದೆ ನಮಗೆ ಬೇಕಾದ ರೀತಿಯಲ್ಲಿ ನಮ್ಮದೇ ಥರದಲ್ಲಿ ರೂಪಿಸಿಕೊಳ್ಳಬಹುದು. ಮನಸ್ಸಿದ್ದಂತೆ ಮಹಾದೇವ ಎನ್ನುವಂತೆ ಬದುಕು ಹಲವರಿಗೆ ಹಲವು ಬಗೆ. ಕೆಲವರಿಗೆ ಬದುಕೊಂದು ಸುಂದರ ಮುಗಿಯದ ಕಥನ. ಬದುಕೆಂಬುದು ಕಾಲಕ್ಕೆ ಅನುಸಾರವಾಗಿ ಬದಲಾಗಬಹುದು. ಕ್ಷಣದಿಂದ ಕ್ಷಣಕ್ಕೆ ಬದಲಾಗಲೂಬಹುದು. ಪರಿವರ್ತನೆ ಜಗದ ನಿಯಮ ಆಗಿರುವಾಗ ಇದು ಕೂಡ ಬದಲಾಗ ದಿರುವುದೇ? ಯಾವ ಕ್ಷಣವೂ ಶಾಶ್ವತವಲ್ಲ. ಯಾರು ಕೂಡ ಶಾಶ್ವತ ವಲ್ಲ. ಆದರೆ ಈ ಪರಿಸರದೊಳಗಿನ ನಮ್ಮ ಬಾಂಧವ್ಯದ ನೆನಪು ಎಂದಿಗೂ ಶಾಶ್ವತ. ಕೆಲವೊಮ್ಮೆ ಕೆಲವರ ಮಾತು ನಮ್ಮ ಮನಸ್ಸಿನಾಳಕ್ಕೆ ಇಳಿದು ಬಿಡುತ್ತದೆ. ಎಂದೋ, ಎಲ್ಲೋ ಕೇಳಿದ ಮಾತುಗಳು ನಮ್ಮ ಬದುಕಿಗೆ ಬಹಳ ಹತ್ತಿರವೇನೋ ಎಂದೆನಿಸುತ್ತದೆ.
“ಮಾತಿನಿಂದ ಸಂತೋಷ ಕಾಣು, ಸಂತೋಷ ಪಡುವ ಹಾಗೆ ಮಾತನಾಡು, ಈ ಮಾತಿನಿಂದಲೇ ಸರ್ವಶಕ್ತಿ ಅಡಗಿದೆ’ ಎನ್ನುತ್ತದೆ ಆರ್ಯೋಕ್ತಿ. ಸದಾ ಇತರರ ಮಾತಿಗೆ, ಚುಚ್ಚು ನುಡಿಗೆ ಅಳುತ್ತಾ ಕೂರಬಾರದೆಂಬುದು ಸರ್ವಜ್ಞರ ಅಭಿಪ್ರಾಯ. ಹುಟ್ಟುವಾಗಲೇ ಎಲ್ಲರೂ ಸರ್ವಜ್ಞಾನಿಯಾಗಿರುವುದಿಲ್ಲ. ಕಾಲಾಂತರವಾಗಿ ಒಂದೊಂದೇ ವಿಚಾರವನ್ನು ತಿಳಿದುಕೊಳ್ಳುತ್ತ ಹೋಗುತ್ತಾರೆ. ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕಾದರೆ ತಿಳಿಯದೇ ಇರುವ ವಿಷಯವನ್ನು ಇನ್ನೊಬ್ಬರಿಂದ ಕೇಳಿ ಕಲಿಯಬಹುದಲ್ಲ . ಉತ್ತಮ ಉದಾಹರಣೆ ಎಂದರೆ ಏಕಲವ್ಯನಿಗೆ ದ್ರೋಣರು ಬಿಲ್ವಿದ್ಯೆ ಕಲಿಸಲು ಒಪ್ಪದಿದ್ದಾಗ ಆತ ಧೃತಿಗೆಡದೆ ಅವರನ್ನೇ ತನ್ನ ಗುರುಗಳಾಗಿ ಸ್ವೀಕರಿಸಿ ತನ್ನಷ್ಟಕ್ಕೆ ತಾನೇ ಬಿಲ್ವಿದ್ಯೆ ಕಲಿತು ಉತ್ತಮ ಬಿಲ್ವಿದ್ಯೆ ಪಾರಂಗತನಾಗಲಿಲ್ಲವೆ?
ಇದು ಸ್ವಾರ್ಥಿಗಳ ಯುಗ, ಎಲ್ಲರೂ ಕೇವಲ ತಮ್ಮ ಸ್ವಾರ್ಥ ತನವನ್ನು ಸಾಧಿಸಿಕೊಳ್ಳಲು ಕಾಯುತ್ತಿರುತ್ತಾರೆ. ಬರೀ ಸ್ವಾರ್ಥಕ್ಕೋಸ್ಕರ ಬದುಕುವ ಬದುಕು ಬದುಕಲ್ಲ ಎಂದು ಅವರು ಎಂದಿಗೂ ಅರ್ಥ ಮಾಡಿಕೊಳ್ಳುವುದೇ ಇಲ್ಲ, ಕೊನೆಗೂ ಸ್ವಾರ್ಥತೆಯಲ್ಲಿಯೇ ಅವರ ಬದುಕು ಮುಗಿದು ಹೋಗುತ್ತದೆ. ಇಂತಹವರಿಗೆ ಎಂದಿಗೂ ಇನ್ನೊಬ್ಬರ ಬಗ್ಗೆ ಚಿಂತೆ ಇರುವುದಿಲ್ಲ. ಕೆಲವೊಮ್ಮೆ ಯಾರಧ್ದೋ ತಪ್ಪಿನಿಂದ ಯಾರಿಗೋ ದುಃಖ-ನೋವು ಅವಮಾನ ಆಗುತ್ತದೆ. ಎಲ್ಲರ ವರ್ತನೆಗಳು, ಭಾವನೆಗಳು ಎಲ್ಲರಿಗೂ ಸರಿ ಕಾಣುವುದಿಲ್ಲ. ಜೀವನದಲ್ಲಿ ಕೆಲವು ಸಮಸ್ಯೆಗಳು ನಿಜವಾಗಿಯೂ ಸಮಸ್ಯೆಗಳೇ ಆಗಿರುವುದಿಲ್ಲ.
-ಅಶ್ವಿತಾ ಎಸ್. ಶೆಟ್ಟಿ
ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ,
ಭಂಡಾರ್‌ಕಾರ್ಸ್ ಕಾಲೇಜು, ಕುಂದಾಪುರ