ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಇಂಥವರನ್ನು ಸಂಜೆಯೊಳಗೆ ಬಂಧಿಸಲು ಸೂಚನೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಾತಿ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿರುವವರ ವಿರುದ್ಧ ಕ್ರಮದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಹೇಳಿದ್ದೀರಿ. ಇದರ ಬಗ್ಗೆ ನಿಮಗೆ ಅಭಿನಂಧಿಸುತ್ತೇನೆ. ಸುಳ್ಳು ಹರಡಿ, ಹಳ್ಳಿಗಳ ಶಾಂತಿ ಕದಡುವವರನ್ನು ಮಟ್ಟ ಹಾಕಿ ಎಂದು ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಡಿ ಕೆ ಶಿವಕುಮಾರ್ ಒತ್ತಾಯಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ರೈತರು ಬೆಳೆದ ಬೆಳೆ ನಷ್ಟವಾಗಿದೆ. ನಮ್ಮ ಕಾರ್ಯಕರ್ತರೇ ಕೆಲವು ಕಡೆ ಖರೀದಿ ಮಾಡುತ್ತಿದ್ದಾರೆ. ಖರೀದಿ ಮಾಡಿ ಜನರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರೈತರು ಬೆಳೆದ ಬೆಳೆ ಖರೀದಿಸಬೇಕು. ಅವರು ಗೊಬ್ಬರ, ನೀರು ಹಾಕಿದಕ್ಕಾದರೂ ಉಳಿತಾಯ ಆಗಬೇಕು. ಅಡಿಕೆ ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ಮಲೆನಾಡಿನಿಂದ ಪ್ರತಿನಿತ್ಯ ಕರೆಗಳು ಬರುತ್ತಿವೆ ಹೀಗಾಗಿ ಅಡಿಕೆ ಬೆಳೆಗಾರರ ಸಮಸ್ಯೆಯನ್ನೂ ಸರ್ಕಾರ ಪರಿಹರಿಸಬೇಕು ಎಂದರು.
ಬೇಸಿಗೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಹೀಗಾಗಿ ಅಗತ್ಯವಿರುವ ಕಡೆ ಬೋರ್ ವೆಲ್ ಕೊರೆಸಬೇಕು. ಜನರಿಗೆ ಕುಡಿಯುವ ನೀರನ್ನ ಒದಗಿಸಬೇಕು. ನಮ್ಮ ಕನಕಪುರದಲ್ಲಿ 40/50 ಸಾವಿರ ವೈಯುಕ್ತಿಕ ಅನುದಾನ ಕೊಟ್ಟಿದ್ದೇವೆ. ಚೆಕ್ ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಿಸಿದ್ದೇವೆ. ಇದೇ ರೀತಿ ರಾಜ್ಯದಲ್ಲಿ ಸರ್ಕಾರ ಅನುಷ್ಠಾನಕ್ಕೆ ತರಬೇಕು. ನರೆಗಾ ಯೋಜನೆಯನ್ನ ಮುಂದುವರಿಸಬೇಕು. ಆಂದೋಲನದ ಮಾದರಿಯಲ್ಲಿ ಕೆಲಸ ಕಾರ್ಯ ನಡೆಯಬೇಕು ಎಂದರು.
ಆರ್ ಡಿಪಿಆರ್ ಇಲಾಖೆಗೆ ಚುರುಕು ಮುಟ್ಟಿಸಿ. ಕೃಷಿ ಜಾಬ್ ಕಾರ್ಡ್ ಇಲ್ಲ ಅವರಿಗೆ ಕಾರ್ಡ್ ಕೊಡಿ. ವಲಸೆ ಕಾರ್ಮಿಕರಿಗೆ ಒಂದೆರಡು ತಿಂಗಳು ಕೆಲಸ ಕೊಡಿ. ನನಗೆ ಭಯ ಕಾಡುವುದಕ್ಕೆ ಪ್ರಾರಂಭವಾಗಿದೆ. ನೀವು ಉದ್ಯೋಗ ಕೊಡದಿದ್ದರೆ ಕಷ್ಟವಾಗಬಹುದು. ಕಳ್ಳತನ, ದರೋಡೆಯಂತಹ ಕೃತ್ಯಗಳಿಗೆ ಅವಕಾಶವಾಗಬಹುದು. ಅದಕ್ಕೆ ಐದೈದು ಮಂದಿಯಂತೆ ಕೂಲಿ ಕೆಲಸ ಮಾಡಿಕೊಡಿ. ಪ್ರಧಾನಿ ಈ ರೀತಿ ಕೆಲಸ ಮಾಡುತ್ತೇವೆ ಅಂತ ಪಟ್ಟಿ ಕೊಟ್ಟಿದ್ದಾರೆ ಆ ಪಟ್ಟಿಯಂತೆ ಕೆಲಸ ಮಾಡಿ. ನೀವೇ ಅದರ ಕ್ರೆಡಿಟ್ ಪಡೆದುಕೊಳ್ಳಿ ನಮಗೆ ಬೇಸರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.