Advertisement

ನನ್ನ ಹೆಸರು ಬಳಸಿದರೆ ಕೆಲವರಿಗೆ ಖುಷಿ

03:10 PM Apr 20, 2022 | Team Udayavani |

ಬೆಳಗಾವಿ: ನನ್ನ ಹೆಸರು ಬಳಸಿಕೊಂಡರೆ ಕೆಲವರಿಗೆ ನೆಮ್ಮದಿ, ಖುಷಿ ಬರುತ್ತದೆ. ನಮ್ಮನ್ನು ನೋಡಿದ ತಕ್ಷಣ ಖುಷಿ ಆಗುತ್ತದೆ. ಇನ್ನೂ ಕೆಲವರಿಗೆ ಶಕ್ತಿ ಬರುತ್ತದೆ. ಹನುಮ, ರಾಮ ಹೆಸರು ಹೇಳಿದರೆ ಹೇಗೆ ಶಕ್ತಿ ಬರುತ್ತದೋ ಹಾಗೆಯೇ ಶಿವಕುಮಾರ ಹೆಸರು ಹೇಳಲು ಕೆಲವರಿಗೆ ಖುಷಿ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್‌ ನೀಡಿದರು.

Advertisement

ತಾಲೂಕಿನ ಬಡಸ ಗ್ರಾಮದ ಸಂತೋಷ ಪಾಟೀಲ ಕುಟುಂಬಸ್ಥರನ್ನು ಮಂಗಳವಾರ ಭೇಟಿಯಾಗಿ ಸಾಂತ್ವನ ಹೇಳಿ ಕೆಪಿಸಿಸಿ ವತಿಯಿಂದ 11 ಲಕ್ಷ ರೂ. ಪರಿಹಾರ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಡಿ ಪ್ರಕರಣದಂತೆ ಷಡ್ಯಂತ್ರ ನಡೆಸಿರುವ ಮಹಾನಾಯಕನ ಕೈವಾಡ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿಯೂ ಇದೆ. ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ರಮೇಶ ಜಾರಕಿಹೊಳಿ ದಾಖಲೆ ಬಿಡುಗಡೆ ಮಾಡಲು ಮುಹೂರ್ತ, ಸಮಯ ಏಕೆ ನೋಡಬೇಕು. ಅವರು ಬಹಳ ಪ್ರಜ್ಞಾವಂತರು, ಅನುಭವಸ್ಥರು. ಎಂತೆಂಥ ವಿಚಾರವನ್ನೇ ಬಿಚ್ಚಿದ್ದಾರೆ. ಜನರ ಮುಂದೆ ಮುಕ್ತವಾಗಿ ಎಲ್ಲವನ್ನೂ ಹೇಳಲಿ. ಈಗಾಗಲೇ ಜನರ ಮುಂದೆ ಎಲ್ಲ ಬಿಚ್ಚಿಟ್ಟಿದ್ದಾರೆ, ಇದನ್ನೂ ಬಿಚ್ಚಿಡಲಿ. ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗಲೇ ಕೆಲಸ ಆಗಿದೆ. ಕೆಲಸ ಆರಂಭಿಸಿರುವುದರ ದಾಖಲೆ ಇದೆ. ರಮೇಶ ಭೂಮಿ ಪೂಜೆ ಮಾಡಿರುವ ಫೋಟೊಗಳಿವೆ ಎಂದರು.

ಧೈರ್ಯಶಾಲಿ ಯುವಕ ಸಂತೋಷನ ಸಾವು ಚಿಂತೆಗೆ ಕಾರಣವಾಗಿದೆ. ಕುಟುಂಬಕ್ಕೆ ನ್ಯಾಯ ಒದಗಿಲು ನಾವು ಪ್ರಯತ್ನ ಮಾಡುತ್ತೇವೆ. ನಮ್ಮ ಹೋರಾಟ ನಿಲ್ಲುವುದಿಲ್ಲ, ಮುಂದುವರಿಯಲಿದೆ. ಸಂತೋಷ ಪಾಟೀಲ ಚಿಕ್ಕ ಮನೆ ಕಟ್ಟಿ ಕನಸು ಎಂದು ಹೆಸರಿಟ್ಟಿದ್ದ. ಗೃಹ ಪ್ರವೇಶ ಮಾಡಲು ಈಗ ಅವನಿಲ್ಲ. ಸಂತೋಷ ಪಾಟೀಲ್‌ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಮನುಷ್ಯತ್ವ, ಮಾನವೀಯತೆ ಇಲ್ಲ. ಸಂತೋಷ ಪಾಟೀಲ ಮಾಡಿರುವ ಕಾಮಗಾರಿಯ ಸಂಪೂರ್ಣ ಬಿಲ್‌ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಒತ್ತಾಯ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಗಿರಿರಾಜ ಸಿಂಗ್‌ ಅವರಿಗೂ ಪತ್ರ ಕೊಟ್ಟಿದ್ದೇವೆ. ಕೇಂದ್ರ ಸಚಿವರ ಕಚೇರಿಯಿಂದ ಸ್ವೀಕೃತಿ ಪತ್ರವೂ ಸಿಕ್ಕಿದೆ. ಮಾಡಿರುವ ಕೆಲಸಕ್ಕೆ ಹಣ ಬರಬೇಕು. ದೂರಿನ ಅನ್ವಯ ಕ್ರಮ ಕೈಗೊಳ್ಳಬೇಕು. ಸಂತೋಷ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. 1 ಕೋಟಿ ರೂ. ಪರಿಹಾರ ನೀಡಬೇಕು ಎಂದರು.

ದಪ್ಪ ಚರ್ಮದ ಸರ್ಕಾರ: ಸಿಎಂ ಬಸವರಾಜ ಬೊಮ್ಮಾಯಿ ಅವರು ಈಶ್ವರಪ್ಪ ಪರ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಂತೋಷ ಪ್ರಾಣ ಬಿಟ್ಟಿದ್ದಾರೆ. ದಪ್ಪ ಚರ್ಮದ ಸರ್ಕಾರವಿದು. ನಂ.1 ಆರೋಪಿ ಈಶ್ವರಪ್ಪ ಪರ ಏನೂ ತಪ್ಪು ಮಾಡಿಲ್ಲ ಎಂದು ಸಿಎಂ ಸರ್ಟಿಫಿಕೇಟ್  ನೀಡಿರುವುದರ ಅರ್ಥ ಏನು? ಹುಬ್ಬಳ್ಳಿ ಗಲಾಟೆಗೂ ಕಾಂಗ್ರೆಸ್‌ ಗೂ ಸಂಬಂಧ ಇಲ್ಲ. ಗಲಾಟೆ ಮಾಡದಂತೆ ನಮ್ಮ ನಾಯಕರು ಹೇಳಿದ್ದಾರೆ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಲ್ಲಿ ರಾಜಕಾರಣ ಮಾಡಬಾರದು. ಪೊಲೀಸರನ್ನು ಅಭಿನಂದಿಸಬೇಕು ಎಂದರು.

ಶಾಸಕರಾದ ಲಕ್ಷ್ಮೀ ಹೆಬ್ಟಾಳಕರ, ಡಾ|ಅಂಜಲಿ ನಿಂಬಾಳ್ಕರ್‌, ಮಹಾಂತೇಶ ಕೌಜಲಗಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೆಪಿಸಿಸಿ ಯುವ ಘಟಕ ಅಧ್ಯಕ್ಷ ಮಹ್ಮದ ನಲಪಾಡ್‌, ಮಾಜಿ ಶಾಸಕ ಫಿರೋಜ್‌ ಸೇಠ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರ ಅಧ್ಯಕ್ಷ ರಾಜು ಸೇಠ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಇದ್ದರು.

Advertisement

ಕೆಪಿಸಿಸಿಯಿಂದ 11 ಲಕ್ಷ ರೂ.,ಹುಕ್ಕೇರಿ 5 ಲಕ್ಷ ರೂ. ಪರಿಹಾರ:

ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ತಾಲೂಕಿನ ಬಡಸ ಗ್ರಾಮದ ಸಂತೋಷ ಕುಟುಂಬಸ್ಥರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕೆಪಿಸಿಸಿ ವತಿಯಿಂದ 11 ಲಕ್ಷ ರೂ. ಹಾಗೂ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ನೀಡಿರುವ 5 ಲಕ್ಷ ರೂ. ಪರಿಹಾರವನ್ನು ಹಸ್ತಾಂತರಿಸಿದರು.

ಸಂತೋಷ ಪತ್ನಿ ಜಯಶ್ರೀ ಹಾಗೂ ತಾಯಿ ಪಾರ್ವತಿ ಪಾಟೀಲ ಅವರಿಗೆ ಸಾಂತ್ವನ ಹೇಳಿದರು. ಈ ವೇಳೆ ತಾಯಿ ಪಾರ್ವತಿ, ಮಗ ಮಾಡಿರುವ ಕೆಲಸದ ಬಿಲ್‌ ಕೊಟ್ಟು ಪ್ರಾಣ ಉಳಿಸಬೇಕಾಗಿತ್ತು. ಆದರೆ ಈಗ ಜೀವ ಹೋಗಿದೆ. ಆತನ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿ ಕಣ್ಣೀರು ಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಹಿಂಡಲಗಾ ಗ್ರಾಪಂ ವ್ಯಾಪ್ತಿಯಲ್ಲಿ ಸಂತೋಷ ಕೆಲಸ ಮಾಡಿದ್ದನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಒಪ್ಪಿಕೊಂಡಿದ್ದಾರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೂ ಒಪ್ಪಿಕೊಂಡಿದ್ದಾರೆ. ನಮ್ಮ ಬಳಿ ದಾಖಲೆಗಳಿವೆ. ಅವೆಲ್ಲವನ್ನೂ ಸಂಗ್ರಹಿಸಿಕೊಂಡು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ನಿಮ್ಮ ಬಳಿ ಇರುವ ದಾಖಲೆ ನಮಗೆ ಕೊಡಿ ಎಂದು ಕುಟುಂಬದ ಸದಸ್ಯರಿಗೆ ಹೇಳಿದರು.

ಸಂತೋಷ ಕುಟುಂಬಸ್ಥರೊಂದಿಗೆ ಒಳ ಕೋಣೆಯಲ್ಲಿ ಗೌಪ್ಯವಾಗಿ ಚರ್ಚಿಸಿದ ಡಿಕೆಶಿ: ಬಡಸ ಗ್ರಾಮದ ಸಂತೋಷ ಪಾಟೀಲ ಮನೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ ಸಾಂತ್ವನ ಹೇಳಿ ಚೆಕ್‌ ವಿತರಿಸಿದ ಬಳಿಕ ಮಾಧ್ಯಮದವರನ್ನು ಮನೆಯಿಂದ ಹೊರಗೆ ಕಳುಹಿಸಲಾಯಿತು. ಆಗ ಸಂತೋಷನ ಸಹೋದರನೊಂದಿಗೆ ಒಳ ಕೋಣೆಗೆ ಹೋದ ಡಿಕೆಶಿ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಂತರ ಹಾಲ್‌ನಲ್ಲಿ ಕುಳಿತಿದ್ದ ಲಕ್ಷ್ಮೀ ಹೆಬ್ಟಾಳಕರ, ಡಾ| ಅಂಜಲಿ ನಿಂಬಾಳಕರ ಸೇರಿ ಕಾಂಗ್ರೆಸ್‌ ಮುಖಂಡರೊಂದಿಗೆ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಬಳಿಕ ಹೊರಬಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಗೌಪ್ಯ ಸಭೆಯಲ್ಲಿ ಮಾತನಾಡಿರುವ ವಿಷಯದ ಬಗ್ಗೆ ಬಹಿರಂಗಪಡಿಸಲು ಡಿಕೆಶಿ ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next