ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ನಿರ್ಧರಿಸಲಾಗಿದ್ದು ಅಷ್ಟರಲ್ಲಿ ಸಾಧ್ಯವಾದಷ್ಟು ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈಗಾಗಲೇ ಆದೇಶ ಮಾಡಿದಂತೆ ಸಕ್ಕರೆ ಆಯುಕ್ತರ ಕಚೇರಿಯು ಅಕ್ಟೋಬರ್ 3 ರಂದು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳಲಿದೆ ಎಂದರು.
ಕಬ್ಬಿನ ಬಾಕಿ ಹಣ ಸಂಬಂಧಪಟ್ಟಂತೆ ಈಗಾಗಲೇ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳ ಜೊತೆ ಮಾತುಕತೆ ನಡೆಸಲಾಗಿದೆ. ಮತ್ತೊಮ್ಮೆ ಸಭೆ ನಡೆಸಿ ಹಣ ಪಾವತಿಗೆ ಕ್ರಮವಹಿಸಲಾಗುವದು ಎಂದು ಹೇಳಿದರು.
ಇದನ್ನೂ ಓದಿ:ರಾಜಾಹುಲಿ ಮ್ಯಾನ್ ಆಫ್ ದ ಮ್ಯಾಚ್… ಸಿದ್ರಾಮಣ್ಣೋರು ಪಂಚೆ ಟೈಟ್…
ನೆರೆ ಹಾವಳಿಯಿಂದ ಸಾಕಷ್ಟು ಹಾನಿಯಾಗಿದೆ. ಈ ಸಂಬಂಧ ಪ್ರಗತಿ ಪರಿಶೀಲನೆ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈಗ ವರದಿ ಕೊಟ್ಟಿದ್ದಾರೆ. ಮುಂದಿನ ವಾರ ಹಣಕಾಸು ಇಲಾಖೆಯ ಜೊತೆ ಸಭೆ ನಡೆಸಿ ಪರಿಹಾರ ಬಾಕಿ ಇರುವ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವದು ಎಂದು ಹೇಳಿದರು.
ಕೋವಿಡ್ ಹಾವಳಿಯಿಂದ ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ಆರ್ಥಿಕ ಚಟುವಟಿಕೆ ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗ ಕರ್ನಾಟಕ ಬಂದ್ ಕೈಬಿಡಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.