Advertisement

ಕೆಲ ಹಾಲಿ ಶಾಸಕರು ಕೈ ಕೊಡುವ ಆತಂಕ?

06:15 AM Oct 25, 2018 | Team Udayavani |

ಬೆಂಗಳೂರು: ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲು ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ಗೆ ಕೆಲವು ಹಾಲಿ ಶಾಸಕರು ಕೈ ಕೊಡುವ ಆತಂಕ ಎದುರಾಗಿದೆ. ಹಾಗಾಗಿ ಜಿಲ್ಲೆಯ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ನಾಯಕರು ಮುಂದಾಗಿದ್ದಾರೆ.

Advertisement

ಅಭ್ಯರ್ಥಿ ಆಯ್ಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೆ ಹೊರಗಿನವರಿಗೆ ಮಣೆ ಹಾಕಲಾಗಿದೆ ಎಂಬ ಮುನಿಸು ಕೆಲವು ಹಾಲಿ ಶಾಸಕರಲ್ಲಿದ್ದು, ಅದು ಚುನಾವಣೆ ಮೇಲೂ ಪರಿಣಾಮ ಬೀರುವ ಭಯ ಕಾಡುತ್ತಿದೆ. ಹೀಗಾಗಿ, ಮಾಜಿ ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ದಿವಾಕರ ಬಾಬು, ಸೂರ್ಯನಾರಾಯಣ ರೆಡ್ಡಿ ಅವರಿಗೂ ಚುನಾವಣಾ ಹೊಣೆಗಾರಿಕೆ ನೀಡಿ ಪಕ್ಷದ ಗೆಲುವಿಗೆ ಶ್ರಮವಹಿಸಲು ಸೂಚನೆ ನೀಡಲಾಗಿದೆ.

ಬಳ್ಳಾರಿ ಲೋಕಸಭೆ ವ್ಯಾಪ್ತಿಯಲ್ಲಿ ಪಕ್ಷದ ಆರು ಶಾಸಕರು ಇರುವುದರಿಂದ ಗೆಲುವು ತನ್ನದಾಗಿಸಿ ಕೊಳ್ಳುವ ಭರವಸೆಯನ್ನು ಕಾಂಗ್ರೆಸ್‌ ನಾಯಕರು ಹೊಂದಿದ್ದರು.ಆದರೆ, ಎಲ್ಲರೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿರುವ ಬಗ್ಗೆ ರಾಜ್ಯ ನಾಯಕರಿಗೆ ಸಂಪೂರ್ಣ ವಿಶ್ವಾಸವಿಲ್ಲ. ಕೆಲವರು ಕೈ ಕೊಡಬಹುದೇ ಎಂಬ ಅನುಮಾನ ಇದೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮಾಜಿ ಶಾಸಕರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಹಾಲಿ ಶಾಸಕರ ನಿರ್ಲಕ್ಷ್ಯ ಮಾಡಿದರೆ ಪಕ್ಷಕ್ಕೆಮುಳುವಾಗುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ತಮ್ಮ ಸಹೋದರ ವೆಂಕಟೇಶ್‌ ಪ್ರಸಾದ್‌ಗೆ ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದು ಕೊನೆಗೆ ಸ್ಥಳೀಯ ನಾಯಕರಲ್ಲಿ ಒಮ್ಮತ ಮೂಡದ ಕಾರಣ ರಾಜ್ಯ ನಾಯಕರು ಗೊಂದಲ ನಿವಾರಿಸಲು ಹೊರಗಿನವರಾದ ವಿ.ಎಸ್‌. ಉಗ್ರಪ್ಪ ಅವರನ್ನು ಕಣಕ್ಕಿಳಿಸಿದಿದ್ದಾರೆ.

Advertisement

ಬಳ್ಳಾರಿ ಕ್ಷೇತ್ರವನ್ನು ಗೆಲ್ಲುವ ನಿಟ್ಟಿನಲ್ಲಿ ಜಲ ಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್‌ ನೇತೃತ್ವದಲ್ಲಿ ದೊಡ್ಡ ಮಟ್ಟದ ಉಸ್ತುವಾರಿ ಪಡೆ ನಿಯೋಜಿಸಲಾಗಿದೆ. ಆದರೆ,ಸ್ಥಳೀಯವಾಗಿ ರಾಜ್ಯ ನಾಯಕರ ವಿರುದಟಛಿ ಶಾಸಕರು ಮುನಿಸಿಕೊಂಡಿರುವುದು ರಾಜ್ಯ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ, ಮಾಜಿ ಶಾಸಕರು ಹಾಗೂ ಹಿರಿಯ ನಾಯಕರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲು ನಾಯಕರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದಾರು ತಂಡಗಳನ್ನು ಮಾಡಿದ್ದಾರೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದರೂ ಅದನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆ.ಹಾಲಿ ಶಾಸಕರೂ ಅವರಿಗೆ ವಹಿಸಿರುವ ಕೆಲಸ ಮಾಡುತ್ತಿದ್ದಾರೆ.ಗೊಂದಲಗಳಾಗದಂತೆ ಒಗ್ಗಟ್ಟಾಗಿ ಕಾರ್ಯ ನಿರ್ವಹಣೆ ಜವಾಬ್ದಾರಿ ಹೊಂದಿದ್ದೇವೆ.
– ಕೆ.ಸಿ. ಕೊಂಡಯ್ಯ,
ಕಾಂಗ್ರೆಸ್‌ ಹಿರಿಯ ಮುಖಂಡ

ಪಕ್ಷದ ನಾಯಕರು ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲಿ ಜಿಲ್ಲೆಯ ಹಿರಿಯನಾಯಕರನ್ನು ಉಸ್ತುವಾರಿಯಾಗಿ ನೇಮಿ ಸುವಾಗ ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯಬೇಕು. ಅನೇಕ ಹಿರಿಯ ನಾಯಕರು ಹಿಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದಾರೆ.ಅಂತಹವರಿಗೆ ಜವಾಬ್ದಾರಿ ನೀಡಿದರೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
– ಭೀಮಾ ನಾಯ್ಕ,
ಹಗರಿಬೊಮ್ಮನಹಳ್ಳಿ ಶಾಸಕ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next