ದಾವಣಗೆರೆ: ಸಿದ್ದರಾಮಯ್ಯ ಅವರ 75 ನೇ ಜನ್ಮದಿನೋತ್ಸವಕ್ಕೆ ಬಂದವರಿಗಾಗಿ ಬೆಳಗ್ಗೆಯಿಂದಲೇ ದಾಸೋಹ ಪ್ರಾರಂಭ ಮಾಡಲಾಗಿದ್ದು, ಮಧ್ಯಾಹ್ನ ಊಟದ ಸಮಯ ಆಗುತ್ತಿದಂತೆ ನೂರಾರು ಜನರು ಏಕಾಏಕಿ ದೌಡಾಯಿಸಿ ಅಡುಗೆ ತಯಾರಿಸುತ್ತಿದ್ದ ಜಾಗಕ್ಕೆ ನುಗ್ಗಿದ್ದರಿಂದ ಬಾಣಸಿಗರು, ಸ್ವಯಂ ಸೇವಕರು ಕಕ್ಕಾಬಿಕ್ಕಿಯಾದ ಪ್ರಸಂಗ ನಡೆಯಿತು.
ಈ ವೇಳೆ ಅಡುಗೆ ತಯಾರಿಸುತ್ತಿದ್ದ ಕೆಲ ಪಾತ್ರೆ ಸಾಮಾನುಗಳನ್ನೂ ಚೆಲ್ಲಾಪಿಲ್ಲಿ ಮಾಡಿದ್ದು, ಇದರಿಂದ ಸ್ವಯಂ ಸೇವಕರು ಎಲ್ಲರೂ ಅಸಹಾಯಕರಾದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು.
ಆಯೋಜಕರು ಎಲ್ಲರಿಗೂ ಊಟದ ವ್ಯವಸ್ಥೆ ಇದೆ. ಸಾವಧಾನದಿಂದ ವರ್ತಿಸುವಂತೆ ಮನವಿ ಮಾಡಿದರೂ ಜನರು ಕೇಳದೇ ರಂಪಾಟ ನಡೆಸಿದ್ದಾರೆ. ಇದರಿಂದ ಅಡುಗೆ ಕೌಂಟರ್ ಗಳಲ್ಲಿ ಅಡಚಣೆ ಉಂಟಾಯಿತು. ಇಷ್ಟಾದರೂ ಜನರು ಅಡುಗೆ ಕೌಂಟರ್ ಗಳತ್ತ ನುಗ್ಗಿ ಬರುವುದು ಕಂಡು ಬಂದಿತು.
ಇದನ್ನೂ ಓದಿ: ನ್ಯಾನ್ಸಿ ಪೆಲೋಸಿ ಭೇಟಿಗೆ ಆಕ್ರೋಶ: ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರಿದ ಚೀನಾ
ಮುಂಜಾನೆ ಉಪಹಾರಕ್ಕೆ ಮೊಸರನ್ನ, ಪಲಾವ್, ಮೈಸೂರು ಪಾಕ್, ಅರ್ಧ ಲೀಟರ್ ನೀರಿನ ಬಾಟಲಿ ವ್ಯವಸ್ಥೆ ಮಾಡಲಾಗಿತ್ತು. ಮೂರು ಕೌಂಟರ್ ಗಳಲ್ಲಿ ಸಾವಿರಾರು ಜನರು ಸರತಿ ಸಾಲಲ್ಲಿ ನಿಂತು ಊಟ ಸವಿದರು. ಬಫೆ ವ್ಯವಸ್ಥೆ ಮಾಡಿದ್ದರೂ ಸಾವಿರಾರು ಜನರು ಕೌಂಟರ್ ಗಳ ಮುಂದೆ ಜಮಾಯಿಸಿದ್ದರು. ಅಡುಗೆ ಬಡಿಸುವುದಕ್ಕಾಗಿಯೇ ಸ್ವಯಂ ಸೇವಕರು ಮತ್ತು ಕೆಲಸಗಾರರ ನಿಯೋಜಿಸಲಾಗಿತ್ತು. ಆದರೂ, ಕಿಕ್ಕಿರಿದು ಬರುತ್ತಿದ್ದ ಜನರಿಗೆ ಬಡಿಸುವ ಹೊತ್ತಿಗೆ ಎಲ್ಲರೂ ಹೈರಾಣಾದರು.