ಬೆಂಗಳೂರು: ಜೆಡಿಎಸ್‌ನಲ್ಲಿ ಮತ್ತೂಂದು ಸುತ್ತಿನ ವಲಸೆ ಪ್ರಾರಂಭವಾಗುವ ಲಕ್ಷಣಗಳು ಕಂಡು ಬರುತ್ತಿದ್ದು, ಕೆಲವು ಶಾಸಕರು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೇರುವ ಬಗ್ಗೆ ಎರಡೂ ಪಕ್ಷಗಳ ಉನ್ನತ ಮಟ್ಟದ ನಾಯಕರ ಜತೆಯೇ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಶಾಸಕ ಗುಬ್ಬಿ ಶ್ರೀನಿವಾಸ್, ಮಾಜಿ ಶಾಸಕ ಚಿಕ್ಕನಾಯಕನಹಳ್ಳಿ ಸುರೇಶ್ ಬಾಬು, ವಿಧಾನಪರಿಷತ್ ಸದಸ್ಯ ಕಾಂತ ರಾಜು ಸೇರಿ ಹಲವರು ಕಾಂಗ್ರೆಸ್ ಜತೆ ಸಂಪರ್ಕದಲ್ಲಿದ್ದು, ಜಿ.ಟಿ. ದೇವೇಗೌಡ, ಶ್ರೀನಿವಾಸ ಗೌಡ ಸೇರಿ ಕೆಲವರು ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಆಪ್ತ ಸಾ.ರಾ. ಮಹೇಶ್ ಸಹ ಬೇಸರಗೊಂಡು ಪಕ್ಷ ಬಿಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಕುಮಾರ ಸ್ವಾಮಿ ಜತೆಗೆ ಅವರಿಗೂ ವೈಮನಸ್ಸು ಉಂಟಾಗಿದೆ. ವಿಶ್ವನಾಥ್ ಟೀಕೆಯ ನೆಪವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಆದರೆ ಸಾ.ರಾ. ಮಹೇಶ್ ಇದನ್ನು ಅಲ್ಲಗಳೆದಿದ್ದಾರೆ. ನಾನು ವಿಶ್ವನಾಥ್ ಅವರ ಟೀಕೆಯಿಂದ ಮನನೊಂದು ರಾಜೀನಾಮೆ ನೀಡಿದ್ದೆ. ಸ್ಪೀಕರ್ ಅವರು ನನ್ನ ಬಗ್ಗೆ ಪ್ರೀತಿ ಇದ್ದ ಕಾರಣ ದುಡುಕಬೇಡಿ ಎಂದು ಹೇಳಿ ಕಳುಹಿಸಿದರು ಎಂದು ಹೇಳಿದ್ದಾರೆ.
ಹೊರಟ್ಟಿ ಆಕ್ರೋಶ
ಹಿರಿಯ ನಾಯಕ ಬಸವರಾಜ ಹೊರಟ್ಟಿ ಪಕ್ಷದ ನಾಯಕರ ವಿರುದ್ಧ ಬಹಿರಂಗ ವಾಗಿಯೇ ಆಕ್ರೋಶ ಹೊರ ಹಾಕಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಾರ್ಯ ವೈಖರಿ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿರುವುದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ತಲೆನೋವು ತಂದಿದೆ.