ಕೋಲಾರ: ಲೋಕಸಭಾ ಚುನಾವಣೆಯ ವಿಜಯೋತ್ಸವದ ಸಂಭ್ರಮದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಜಿಲ್ಲೆಯ ಕೆಲವು ಶಾಸಕರು ಸಹಕಾರ ನೀಡುವ ಶುಭ ಸೂಚನೆ ಸಿಕ್ಕಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
8 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುವುದೇ ನನ್ನ ಗುರಿ, ಇದಕ್ಕೆ ಕಾರ್ಯಕರ್ತರ ಸಹಕಾರ ನೀಡಬೇಕು ಎಂದು ಕೋರಿದ ಅವರು, ತಮ್ಮ ಗೆಲುವಿಗೆ ಸಹಕಾರ ನೀಡಿದ ವಿವಿಧ ಪಕ್ಷಗಳ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.
ಕೃತಜ್ಞತೆ: 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಮಾಡುವ ಮೂಲಕ ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಮೂಲಕ ಶಾಪ ವಿಮೋಚನೆ ಗೊಳಿಸಬೇಕು. ಇದಕ್ಕೆ ಅವಕಾಶ ಕಲ್ಪಿಸಿರುವ ನಿಮಗೆಲ್ಲ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳುವ ಸೂಚನೆಗಳು ಹೆಚ್ಚಾಗಿ ಕಾಣುತ್ತಿದ್ದು, ಈಗಾಗಲೇ ಶಾಸಕರೇ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಇನ್ನು ಕೆಲವರು ಪ್ರಯತ್ನದಲ್ಲಿದ್ದಾರೆ. ಅದರೆ ಅವಕಾಶವಾದಿಗಳಿಗೆ ನಮ್ಮಲ್ಲಿ ಜಾಗವಿಲ್ಲ ಎಂದು ಬಿಜೆಪಿ ವರಿಷ್ಠರು ತಿಳಿಸಿದ್ದಾರೆ. ನಮ್ಮ ಆಡಳಿತದ ಅವಧಿಯಲ್ಲಿ ಕೆ.ಎಚ್.ಮುನಿಯಪ್ಪ ಅವರ ರೀತಿ ಕೆಲಸ ಮಾಡದೆ ಇರುವವರನ್ನು ದೂರ ಇಡಲಾಗುತ್ತದೆ ಎಂದು ಹೇಳಿದರು.
Advertisement
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳಿಸಲಿದ್ದು, ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಮೈತ್ರಿ ಸರ್ಕಾರದಲ್ಲಿನ ವೈಫಲ್ಯದಿಂದ ಕೆಲವು ಶಾಸಕರು ಬಿಜೆಪಿಗೆ ಬರುವುದು ನಿಶ್ಚಿತ ಎಂದು ಹೇಳಿದರು.
Related Articles
Advertisement
ವಿಶ್ರಾಂತಿ ನೀಡಿದ್ದಾರೆ: ಕ್ಷೇತ್ರದ ಜನರ ಮೇಲೆ ನನಗೆ ಮೊದಲಿಂದಲೂ ವಿಶ್ವಾಸವಿತ್ತು, ಅವರು ಎಂದಿಗೂ ಹಣ ಆಮಿಷಗಳಿಗೆ ಆಸೆ ಪಟ್ಟವರಲ್ಲ ಎಂಬುವುದು ನನಗೆ ತಿಳಿದಿದೆ. ಕೆ.ಎಚ್.ಮುನಿಯಪ್ಪ ಕಳೆದ 28 ವರ್ಷಗಳಿಂದ ಸಂಸದರಾಗಿ ಯಾವುದೇ ಅಭಿವೃದ್ಧಿ ಮಾಡದೆ ಅನ್ಯಾಯ ಮಾಡಿದ್ದರು. ಜನತೆ ಬೇಸತ್ತು ಈ ಚುನಾವಣೆಯಲ್ಲಿ ಅವರಿಗೆ ವಿಶ್ರಾಂತಿ ನೀಡಿದ್ದಾರೆ ಎಂದು ಹೇಳಿದರು.
ಸಾಮೂಹಿಕ ಶ್ರಮ: ಕೆ.ಎಚ್.ಮುನಿಯಪ್ಪ ವಿರುದ್ಧ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಡಾ.ಸುಧಾಕರ್, ಮಂಜುನಾಥ್‌ಗೌಡ ಸೇರಿದಂತೆ ಅನೇಕರು ಪಕ್ಷಭೇದ ಮರೆತು ಒಂದು ವೇದಿಕೆಯನ್ನೇ ಸಿದ್ಧಪಡಿಸಿದ್ದರು. ಜತೆಗೆ ಬಿಜೆಪಿ ಮುಖಂಡರು ಕಾರ್ಯಕರ್ತರು ಎಲ್ಲರೂ ಸೇರಿ ಸಾಮೂಹಿಕವಾಗಿ ಶ್ರಮಿಸಿದ್ದರಿಂದ ನಾನು 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲವು ಸಾಧಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಬಹುದಿನಗಳ ಕನಸು ನನಸು: ಮಾಜಿ ಶಾಸಕ ಎ.ನಾಗರಾಜ್ ಮಾತನಾಡಿ, ಬಿಜೆಪಿಯ ಬಹುದಿನದ ಕನಸು ನನಸಾಗಿದೆ. ನಮ್ಮ ಈ ಖುಷಿಯನ್ನು ಮುಂದಿನ 25ವರ್ಷಗಳವರೆಗೆ ಕಾಪಾಡಿ ಕೊಳ್ಳಬೇಕು. ಜನರ ವಿಶ್ವಾಸ ಪಡೆಯುವಂತ ಜನಪರವಾದ ಕೆಲಸಗಳನ್ನು ಮಾಡಬೇಕು. ಕೇಂದ್ರದಲ್ಲಿ ಕಳೆದ 5 ವರ್ಷ ನಮ್ಮದೆ ಸರ್ಕಾರ ಇದ್ದರೂ ನಾಮನಿರ್ದೆಶನಗಳು ಮಾಡದೆ ಯಾರಿಗೂ ಯಾವೂದೇ ಸ್ಥಾನ ಮಾನ ಸಿಗಲಿಲ್ಲ ಅದನ್ನು ಕೇಳುವಂತವವರು ಇರಲಿಲ್ಲ ಈಗಾ ಮುನಿಸ್ವಾಮಿಯವನ್ನು ಆಯ್ಕೆ ಮಾಡಿದ್ದು ಅವರು ನಾಮನಿರ್ದೇಶನಗಳನ್ನು ಮಾಡಲು ಕೇಂದ್ರದಲ್ಲಿ ಒತ್ತಾಯಿಸುವಂತಾಗಬೇಕು. ಕಷ್ಟ ಪಟ್ಟು ಶ್ರಮಿಸಿದ ಕಾರ್ಯಕರ್ತರಿಗೆ ಸ್ಥಾನಮಾನ ಕೊಡಿಸಬೇಕು ಎಂದು ಸಲಹೆ ನೀಡಿದರು.
ಬಹುತೇಕ ಖಚಿತ: ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ಜಿಲ್ಲೆಯ ಬಹುದಿನದ ಕನಸು ಮೋದಿಯವರ ಆಡಳಿತದ 2019ರಲ್ಲಿ ನನಸಾಗಿದೆ. ಮೋದಿ ಬಿಜೆಪಿಯ ಒಂದು ಶಕ್ತಿಯಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದಕ್ಕೆ ಬಹುಮತ ದೊರೆತಿದೆ ಎಂದು ಹೇಳಿದರು.
ಮುಖ್ಯವಾಹಿನಿ ತರುತ್ತೇವೆ: ಜಿಪಂ ಮಾಜಿ ಸದಸ್ಯ ಎಸ್. ಬಿ.ಮುನಿವೆಂಕಟಪ್ಪ, ಜಿಲ್ಲೆಯಲ್ಲಿ ಹೊಸ ಇತಿಹಾಸ ನಿರ್ಮಾಣ ವಾಗಿದೆ. ಮುಂದಿನ ಚುನಾವಣೆಗಳಲ್ಲಿ ಇದೇ ರೀತಿ ಕಾರ್ಯ ನಿರ್ವಹಿಸುವ ಮೂಲಕ ಚೈತನ್ಯ ತುಂಬುವಂತಾಗಬೇಕು ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಸಂಸದರಾರಬೇಕು ಎಂದು ಹೇಳಿದರು.
ಪಕ್ಷದ ಜಿಲ್ಲಾ ಪ್ರಭಾರಿ ಪಾವಗಡ ಕೃಷ್ಣರೆಡ್ಡಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಾಸುದೇವರೆಡ್ಡಿ, ಗ್ರಾಮಾಂತರ ಘಕಟ ಜಿಲ್ಲಾಧ್ಯಕ್ಷ , ಬೈಚಪ್ಪ, ನಗರದ ಘಟಕದ ಅಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ವಕ್ತಾರರಾದ ವಿಜಯಕುಮಾರ್, ಮಹೇಶ್ ಹಾಜರಿದ್ದರು.
ಎಂಪಿ ಕ್ಷೇತ್ರದ 6 ಶಾಸಕರು ಬಿಜೆಪಿಗೆ ಬೆಂಬಲ:
ಕೋಲಾರ: ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಮೈತ್ರಿ ಸರ್ಕಾರದ ವಿರುದ್ಧ ಶಾಸಕರು ತಿರುಗಿ ಬಿದ್ದಿದ್ದಾರೆ. ರಾಜಕೀಯ ಬದಲಾವಣೆಗಳು ಆರಂಭವಾಗಿದ್ದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಎರಡೂ ಪಕ್ಷಗಳವರೂ ಏನೇ ಪ್ರಯತ್ನಪಟ್ಟರು ವಿಫಲವಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವೈಫಲ್ಯದಿಂದಲ್ಲೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಿದೆ ಎಂದರು. ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದ ಜಿಲ್ಲೆಯ ಶಾಸಕರು ಸಹ ಸರ್ಕಾರ ರಚನೆಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಇಂತದನ್ನೆಲ್ಲಾ ಬಹಿರಂಗಪಡಿಸಲಾಗುವುದಿಲ್ಲ. ಮುಂದೆ ಆಗುವ ಬದಲಾವಣೆಗಳನ್ನು ಕಂಡು ನೀವೆ ಆಶ್ಚರ್ಯಚಕಿತರಾಗುತ್ತೀರಾ ಎಂದು ಹೇಳಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಶಾಸಕರು ಬೆಂಬಲ ನೀಡಲಿದ್ದು, ಸದ್ಯ ಸಂಪರ್ಕದಲ್ಲಿರುವ ಶಾಸಕರು ಸೇರಿದಂತೆ ಒಟ್ಟು ಆರು ಮಂದಿ ಬೆಂಬಲ ನೀಡುತ್ತಾರೆ. ಜತೆಗೆ ಮುನಿಯಪ್ಪ ವಿರೋಧಿ ಬಣದವರು ಸಹ ಸಾಕಷ್ಟು ಮಂದಿ ಬಿಜೆಪಿಗೆ ಬರುತ್ತಾರೆ ಎಂದರು.
ಪಕ್ಷದಲ್ಲಿ ಯಾರು ಏನೆಂಬುದರ ಅರಿವಿದೆ:
ನನಗೆ ಪಕ್ಷದಲ್ಲಿ ಯಾರು, ಏನು, ಹೇಗೆಂಬುವುದು ಚುನಾವಣೆಯಲ್ಲಿ ಚೆನ್ನಾಗಿ ಅರಿತಿದ್ದೇನೆ. ನನ್ನ ಪ್ರಕಾರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ನಾಯಕತ್ವದ ಕೊರತೆಯಿದೆ. ಅನೇಕ ಅವಕಾಶ, ಸೌಕರ್ಯಗಳಿಂದಲೂ ವಂಚಿತರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮುಖಂಡರೊಂದಿಗೆ ಚರ್ಚಿ ಕೆಲಸ ಮಾಡದವರ ಹುದ್ದೆ ಬದಲಾವಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಬಿಜೆಪಿ ವಿಜೇತ ಅಭ್ಯರ್ಥಿ ಮುನಿಸ್ವಾಮಿ ಹೇಳಿದರು. ದುಡಿದವರು, ಯಾರು ವಂಚಿಸಿದವರು, ಯಾರು ತಟಸ್ಥರಾದವರು, ಯಾರು ಎಲ್ಲವು ನನಗೆ ತಿಳಿದಿದೆ. ಪಕ್ಷಕ್ಕೆ ದ್ರೋಹ ಮಾಡಿದವರನ್ನು, ಪಾರ್ಟಿ ವಿರುದ್ಧ ಹಾದಿ ಬೀದಿಗಳಲ್ಲಿ ಧಕ್ಕೆ ತರುವಂತ ಮಾತುಗಳನ್ನಾಡುವವರನ್ನು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡುಗುವವರನ್ನು ನಾನೆಂದು ಕ್ಷಮಿಸುವುದಿಲ್ಲ. ಪಕ್ಷದಲ್ಲಿ ಶಿಸ್ತು ಬದ್ಧತೆಗಳನ್ನು ಕಾಪಾಡಿ ಕೊಳ್ಳಬೇಕು ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಕೆಲ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗೆಲುವು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.