Advertisement

ಕೆಲವರಿಗೆ ಐಚ್ಛಿಕ ಇನ್ನು ಕೆಲವರಿಗೆ ಅನಿವಾರ್ಯ 

03:45 AM Jun 30, 2017 | |

ಆವತ್ತು ಕಾಲೇಜಿನಲ್ಲಿ ಒಂದು ಹಂತದ ಓದು ಮುಗಿದು ಮುಂದಿನ ಓದಿನತ್ತ ಸಾಗಲು ತವಕಿಸುವ ವಿದ್ಯಾರ್ಥಿಗಳ ಸಾಲು ಇತ್ತು. ಅದು, ಬದುಕಿನ ಸುಂದರ ಕನಸುಗಳ ಸರಣಿಯಂತೆಯೇ ತೋರುತ್ತಿತ್ತು. ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಆಶಯದಲ್ಲಿ ಅವರು ಅಲ್ಲಿಗೆ ಬಂದಿದ್ದರು. ಮುಂದೆ ಏನು ಓದುವುದು? ಯಾವ ಸಬೆjಕ್ಟ್? ಯಾವ ಕಾಲೇಜು? ಹೀಗೆ ಮಾತೇ ಮಾತು. ಮೆಡಿಕಲ್‌ ಓದಲು ಬಯಸುವ ಹೆಣ್ಣುಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು ಇತ್ತೀಚೆಗಿನ ಬೆಳವಣಿಗೆ.

Advertisement

ನಿಜವಾಗಿ ಹೇಳುವುದಾದರೆ, ಇದರ ಬಗ್ಗೆ ನನಗೆ ಸಂತೋಷವೇನೂ ಆಗಲಿಲ್ಲ. ಅದಕ್ಕೆ ಕಾರಣ ಹೆಣ್ಣುಮಕ್ಕಳು ಮೆಡಿಕಲ್‌ ಓದಲು ಬರುತ್ತಾರೆ ಎಂಬ ಕಾರಣಕ್ಕಾಗಿ ಅಲ್ಲ , ಅಷ್ಟು ದೊಡ್ಡ ಶಿಕ್ಷಣವನ್ನು ಪಡೆದರೂ ಅವರು ಬದುಕಿನ ಭವಿಷ್ಯದ ಕನಸುಗಳನ್ನು ಕಟ್ಟುವಲ್ಲಿ ಸೋಲುತ್ತಾರೆ ಎಂಬುದಕ್ಕಾಗಿ ! ಉನ್ನತ ವಿದ್ಯಾಭ್ಯಾಸ ಪಡೆಯುವ ಹೆಣ್ಣು ಮಕ್ಕಳ‌ಲ್ಲಿ ಒಂದು ಹಂತದವರೆಗಿದ್ದ ವಿಶೇಷವಾದ ಧೈರ್ಯ, ಆತ್ಮವಿಶ್ವಾಸ ಇರುತ್ತದೆ. ಆದರೆ, ಸಮಾಜ ಅದನ್ನು ಮುರುಟಿಸಿಬಿಡುತ್ತದೆ ಅಂತನ್ನಿಸುತ್ತದೆ.
 
ಮುಂದೆ ತಾನು ಎಲ್ಲಿ ಏನು ಕಲಿಯಬೇಕು, ಏನನ್ನು ಸಾಧಿಸಬೇಕು ಎಂಬ ಬಗ್ಗೆ ಎಲ್ಲ ಹೆಣ್ಣುಮಕ್ಕಳಲ್ಲಿಯೂ ಯೋಚನೆಗಳಿರುತ್ತವೆ. ಆದರೆ, ಅದು ಮದುವೆಯ ಮಾತು ಬಂದ ಕೂಡಲೇ ಸ್ಥಗಿತಗೊಳ್ಳುತ್ತದೆ. ತಾನು ಯಾರನ್ನು ಮದುವೆಯಾಗುತ್ತೇನೆ, ಯಾವಾಗ ಮದುವೆಯಾಗುತ್ತೇನೆ, ಮದುವೆ ಆಗುವವನ ಮನೆ ಎಲ್ಲಿದೆ, ಅವನ ಊರು ಯಾವುದು, ಅವನ ಯೋಚನೆ ಏನು… ಇವೆಲ್ಲವನ್ನೂ ತನ್ನ ಅಸ್ತಿತ್ವವನ್ನು  ಒಂದು ತಕ್ಕಡಿಯಲ್ಲಿಟ್ಟು ಅದರ ತೂಕದ ಮೇಲೆ, ತನ್ನ ಬದುಕನ್ನು ರೂಪಿಸಬೇಕಾದ ಸವಾಲು ಅವಳ ಮೇಲಿದೆ. 

ಬದುಕಿನ ಹೆಚ್ಚಿನ ಸಂಗತಿಗಳು ಗಂಡಿಗೆ ಐಚ್ಛಿಕ, ಹೆಣ್ಣಿಗದು ಅನಿವಾರ್ಯ. ಇಂಥ ಅನಿವಾರ್ಯತೆಯ ಆವರಣದ ಬದ್ಧತೆಗೆ ಉನ್ನತ ಶಿಕ್ಷಣ ಪಡೆದ ಹೆಣ್ಣುಮಕ್ಕಳೂ ಹೊರತಲ್ಲ.ಹೀಗೆ ಮಾತನಾಡುವಾಗಲೆಲ್ಲ, “ಇಲ್ಲ ಬಿಡಿ, ಬರೀ ಗಂಡಸರನ್ನು ದೂರುತ್ತೀರಾ ನೀವು’ ಎನ್ನುವವರಿದ್ದಾರೆ. ಹಾಗೆಂದು, ಈ “ತೂಗುವ’ ಪ್ರಕ್ರಿಯೆ ಕೇವಲ ಸಾಮಾಜಿಕವಲ್ಲ, ನಮ್ಮ ನ್ಯಾಯಾಲಯಗಳೂ ಸಾಮಾಜಿಕ ಸ್ಥಿತಿಯನ್ನೇ ಅನುಸರಿಸುತ್ತವೆ. ಹೆಣ್ಣು ಒಂದೋ ಗಂಡನ ಜೊತೆಗಿರಬಹುದು, ಇಲ್ಲವೇ ಕನಸಿನ ಜೊತೆಗಿರಬಹುದು. ಎರಡೂ ಏಕಕಾಲದಲ್ಲಿ ಸಾಧ್ಯವಿಲ್ಲ ಎಂಬುದನ್ನು ನಮ್ಮ ನ್ಯಾಯವ್ಯವಸ್ಥೆಯೂ ಒಪ್ಪಿದಂತೆ ಅನ್ನಿಸುತ್ತದೆ. 

ತನ್ನ ಸಾಧನೆಗೆ ಸಹಕರಿಸುವಂತೆ ಹೆಂಡತಿ, ಗಂಡನನ್ನು ಕೇಳಿಕೊಳ್ಳಬೇಕಾಗುತ್ತದೆ. ಹೀಗೆ ಕೇಳುವುದೇ ಕೆಲವೊಮ್ಮೆ ಆಕೆಯ ಅಹಂಕಾರ ಎಂದೆನ್ನಿಸಿಕೊಳ್ಳುತ್ತದೆ. ನಾವೆಲ್ಲ ಏನು ಕಲಿತರೂ ಎಷ್ಟು ಕಲಿತರೂ ಇರಬೇಕಾದ್ದು ಪಿತೃಪ್ರಧಾನ ವ್ಯವಸ್ಥೆಯಲ್ಲಿಯೇ ತಾನೆ? ಕೆಲವೊಮ್ಮೆ ನಾವು ಹಾಕಿಕೊಂಡ ಬೇಲಿಗಳು ಸಹಜ ವ್ಯವಸ್ಥೆಯಂತೆ ತೋರುತ್ತದೆ. ಚೌಕಟ್ಟಿನೊಳಗೆ ನ್ಯಾಯಯುತವಾಗಿ ನಡೆಯುವ ವ್ಯವಸ್ಥೆಯೊಳಗೆ ಅಪಸ್ವರವನ್ನು ಎತ್ತುವುದು ಸರಿಯೇ ಎಂದು ಕೇಳುವವರಿದ್ದಾರೆ. ಆದರೆ, ಇದು ನಿಜವಾಗಿ ನ್ಯಾಯಯುತವೆ ಎಂದು ಸೂಕ್ಷ್ಮವಾಗಿ ಕೇಳಿದರೆ ಯಾರಿಗೂ ಇಷ್ಟವಾಗುವುದಿಲ್ಲ. ನಮ್ಮ ಸಮಾಜ ಹಲವಾರು ವಿಷಯಗಳಲ್ಲಿ ತುಂಬ ಮುಕ್ತವಾಗಿದೆ ಮತ್ತು ಚೌಕಟ್ಟನ್ನು ಸಡಿಲಗೊಳಿಸಿದೆ. ನ್ಯಾಯವ್ಯವಸ್ಥೆಯೂ ಹೊಸ ಕಾಲದೊಂದಿಗೆ ಹೊಂದಿಕೊಳ್ಳುತ್ತಿರುತ್ತದೆ. ಆದರೆ, ಹೆಣ್ಣುಮಕ್ಕಳ ವಿಷಯಕ್ಕಾಗುವಾಗ ಆಕೆ ಕಲಿತವಳಾಗಿರಲಿ, ಕಲಿಯದವಳಾಗಿರಲಿ ಅವಳ ಕುರಿತು ಅದೇ ಹಳೆಯ ಸಂಪ್ರದಾಯವನ್ನೇ ಅನುಸರಿಸಿ ಸುತ್ತ ಬೇಲಿ ಹಾಕುವುದು ಸರಿಯೆ?

ರಾಮ ನಡೆದಂತೆ ನಡೆದಳಾ ಸೀತೆ, ರಾಮನರಿತು ಜೊತೆಯಾದಳಾ ಸೀತೆ. ಅದಕ್ಕಾಗಿಯೇ ರಾಮ ಪ್ರೀತಿಯ ಮಳೆಯನ್ನೇ ಸುರಿಸಿ, ಏಕಪತ್ನಿ ವೃತಸ್ಥನಾದ. ಯಾಗ ಮಾಡುವಾಗ ಗ್ರಹಸ್ಥಾಶ್ರಮದಲ್ಲಿರಬೇಕಾಗಿದ್ದುದರಿಂದ ಬೇರೆಯವರನ್ನು ಮದುವೆಯಾಗಬಹುದಿತ್ತು. ಆಗಲಿಲ್ಲ. ಸೀತೆಯ ಪುತ್ಥಳಿಯನ್ನಿಟ್ಟು ಯಾಗ ಮಾಡಿ ನಿಷ್ಠೆ ತೋರಿದ. ಬೇರೆ ಹೆಣ್ಣುಗಳನ್ನು ಮನಸಿನಲ್ಲಿಯೂ ನೆನೆಯಲಿಲ್ಲ. ಆದರೆ, ಅಂಥ ರಾಮ ಸೀತೆಯನ್ನು ಯಾಕೆ ಪರಿತ್ಯಜಿಸಿದ ಎಂಬುದು ನನಗೆ ಈಗಲೂ ಉತ್ತರವಿಲ್ಲದ ಪ್ರಶ್ನೆ. 

Advertisement

ಹಾಗಿದ್ದರೆ ಸಂಸಾರ ಸರಿತೂಕದಲ್ಲಿ ಸಾಗಬೇಕಿದ್ದರೆ ಹೆಣ್ಣು ಎಷ್ಟರಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ನನ್ನ ಪ್ರಶ್ನೆ. 

ಉಳಿದ ಹುಡುಗಿಯರತ್ತ ಇರಲಿ, ನಾಳೆ ಈ ಮೆಡಿಕಲ್‌ ಕಲಿಯುವ ಹುಡುಗಿಯರು ಕೂಡ ತಮ್ಮ ಕನಸು ಕೈಗೂಡಿಸಲು ಎಷ್ಟೆಲ್ಲ ಸಮರ್ಪಣೆ ಮಾಡಿಕೊಳ್ಳಬೇಕೊ ಎಂದೆನಿಸಿ ನನಗೆ ಕಳವಳವಾಯಿತು. ಹೆಣ್ಣನ್ನು ಓದಿಸಿ ಎಂದು ಹೇಳುವಷ್ಟೇ ಮುಖ್ಯವಾಗಿ ಆಕೆಯ ಕನಸುಗಳನ್ನು ಉಳಿಸಲು ಸಹಕರಿಸಿ ಎಂದೂ ಹೇಳಬೇಕಾಗಿದೆ !
(ಲೇಖಕಿ ಎಂ. ಡಿ. ಪದವೀಧರೆಯಾಗಿದ್ದು ಮಂಗಳೂರಿನ ಕೆ. ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿಯಲ್ಲಿ ಪ್ರೊಫೆಸರ್‌ ಆಗಿದ್ದಾರೆ)

– ರಶ್ಮಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next